ಬೆಂಗಳೂರು: ರಾಜ್ಯ ಸರಕಾರವು ಕೊಟ್ಟ ಭರವಸೆಯಂತೆ ತಮ್ಮ ಬೇಡಿಕೆ ಈಡೇರಿಸಿಲ್ಲ ಎಂದು ಆರೋಪಿಸಿ ಪ್ರತಿಭಟನೆಗಿಳಿದಿದ್ದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರೊಂದಿಗೆ ಕಂದಾಯ ಸಚಿವ ಆರ್. ಅಶೋಕ್ ನಡೆಸಿದ ಸಂಧಾನ ಯಶಸ್ವಿಯಾಗಿದೆ.
ಪ್ರವಾಹ ಸಂತ್ರಸ್ತರಿಗೆ ನೀಡುತ್ತಿರುವ ಪರಿಹಾರ ಮೊತ್ತ ಕಡಿಮೆ ಎಂಬ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ನ. 11ರಂದು 3 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆಯಲಾಗಿದೆ.
ಇದಕ್ಕೂ ಮುನ್ನ ಬೇಡಿಕೆ ಈಡೇರಿಕೆಗೆ ಗುರುವಾರ ನಗರದ ಮೌರ್ಯ ವೃತ್ತದ ಬಳಿ ರೈತ ಸಂಘ ಪ್ರತಿಭಟನೆ ಹಮ್ಮಿಕೊಂಡು ಪಾದಯಾತ್ರೆ ಮೂಲಕ ಸಿಎಂ ಯಡಿಯೂರಪ್ಪ ನಿವಾಸಕ್ಕೆ ತೆರ ಳಲು ಮುಖಂಡರು ಮುಂದಾದರು. ಈ ವೇಳೆ ಪೊಲೀಸರು ತಡೆದರು.
ಪ್ರತಿಭಟನ ಸ್ಥಳಕ್ಕೆ ಆಗಮಿಸಿದ ಕಂದಾಯ ಸಚಿವ ಆರ್. ಅಶೋಕ್ ಅವರು ರೈತರ ಮನವಿ ಸ್ವೀಕರಿಸಿ ಕೇಂದ್ರ ಸರಕಾರದಿಂದ ಬರುವ ಎನ್‌ಡಿಆರ್‌ಎಫ್ ಪರಿಹಾರದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸಚಿವರು ನೀಡಿದ ಭರವಸೆಯಿಂದ ನ. 11ರವರೆಗೆ ಕಾದು ನೋಡಲು ತೀರ್ಮಾನಿಸಿ ಪ್ರತಿಭಟನೆ ವಾಪಸ್ ಪಡೆದರು.
ಸಚಿವ ಆರ್. ಅಶೋಕ್ ಮಾತನಾಡಿ, ರೈತರಿಗೆ ಸಿಗಬೇಕಾದ ನ್ಯಾಯಯುತ ಪರಿಹಾರ ದೊರಕಿಸಿಕೊಡಲು ಸರಕಾರ ಸಿದ್ಧವಿದ್ದು, ಈಗಾಗಲೇ ಪ್ರತಿ ಕುಟುಂಬಕ್ಕೆ 10,000 ರೂ. ಗಳಂತೆ ಪರಿಹಾರ ಕೊಟ್ಟಿ ದ್ದೇವೆ. ಮನೆ ಕಟ್ಟುವುದಕ್ಕೆ ಕೇಂದ್ರದ ಪರಿಹಾರದ ಜತೆ ರಾಜ್ಯ ಸರಕಾರದ ಹಣ ಸೇರಿಸಿಕೊಟ್ಟಿದ್ದೇವೆ. ಪರಿಹಾರ ಮೊತ್ತ ಕಡಿಮೆ ಎಂಬ ವಿಷಯಕ್ಕೆ ಸಂಬಂಧಿಸಿ ಸಿಎಂ ಸಮ್ಮುಖದಲ್ಲೇ ಮುಖಂಡರ ಸಭೆ ನಡೆಸಲಾಗುವುದು ಎಂದರು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಸಚಿವರು ಭರವಸೆ ನೀಡಿರುವುದರಿಂದ ಪ್ರತಿಭಟನೆ ಹಿಂಪಡೆದಿದ್ದೇವೆ. ಸರಿಯಾಗಿ ಸ್ಪಂದಿಸ ದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.