ಕೊಳ್ಳೇಗಾಲ: ತಾಲೂಕಿನಲ್ಲಿ ಬರ ಮತ್ತು ಪ್ರವಾಹದಿಂದ ರೈತರ ಬೆಳೆ ನಷ್ಟ ಉಂಟಾಗಿದ್ದು, ಸರ್ಕಾರ ಕೂಡಲೇ ವೈಜ್ಞಾನಿಕ ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ನಿದ್ದೆಯಿಂದ ಎದ್ದೇಳಿ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವರಾಮ್ ಮಾತನಾಡಿ, ರಾಜ್ಯದ 25 ಸಂಸದರು ಆಯ್ಕೆಗೊಂಡು ಕೇಂದ್ರದಲ್ಲಿ ರೈತರ ಪರ ಹೋರಾಟ ಮಾಡದೆ ನಿದ್ರಿಸುತ್ತಿದ್ದಾರೆಯೇ. ಕೂಡಲೇ ನಿದ್ರಾವಸ್ಥೆಯಿಂದ ಎಚ್ಚೆತ್ತು ರೈತರಿಗೆ ಅನ್ಯಾಯ ಆಗಿರುವುದನ್ನು ಪ್ರಧಾನಿ ಮಂತ್ರಿಗಳ ಗಮನ ಸೆಳೆದು ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಮತ್ತು ಪ್ರವಾಹದಿಂದ ನಷ್ಟಕ್ಕೂ ವೈಜ್ಞಾನಿಕ ಪರಿಹಾರ ಕೊಡಿಸಿಕೊಡಬೇಕೆಂದು ಒತ್ತಾಯಿಸಿದರು.
ಸೂಕ್ತ ಪರಿಹಾರ ಕಲ್ಪಿಸಿ: ಪ್ರವಾಹದಿಂದ ರೈತರು ಬೆಳೆದಿದ್ದ ಅನೇಕ ಫಸಲು ನೀರು ಪಾಲಾಗಿದೆ. ಆದರೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ವೈಜ್ಞಾನಿಕ ಪರಿಹಾರ ಕೊಡುವಲ್ಲಿ ತಾರತಮ್ಯ ಏಕೆ. ತಾಲೂಕಿನಲ್ಲಿ ಬರಗಾಲ ಇದೆ. ಇದರ ನಡುವೆ ಪ್ರವಾಹದಿಂದ ಬೆಳೆ ಕೊಚ್ಚಿ ಹೋಗಿದ್ದು, ರೈತರು ಜೀವನ ನಡೆಸುವು ದಾದರೂ ಹೇಗೆ?. ಕೂಡಲೇ ಜಿಲ್ಲೆಯ 4 ಶಾಸಕರು ಸೂಕ್ತ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿದರು.
ಸಮಸ್ಯೆ ನಿವಾರಿಸಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂತ್ರಿ ಮಂಡಲ ರಚನೆ ಮಾಡದೆ ಏಕೈಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೂಡಲೇ ರೈತರ ಪರ ಚಿಂತಿಸಬೇಕು, ಅನ್ಯಾಯ ಸರಿಪಡಿಸಲು ಮುಂದಾಗಬೇಕು, ವೈಜ್ಞಾನಿಕ ಪರಿಹಾರ ನೀಡುವ ಮೂಲಕ ರೈತರಿಗೆ ಎದುರಾಗಿರುವ ಸಮಸ್ಯೆಯನ್ನು ನಿವಾರಣೆ ಮಾಡಬೇಕು ಎಂದು ಮನವಿ ಮಾಡಿದರು.
Advertisement
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸೇರಿ ಮುಖ್ಯ ರಸ್ತೆಗಳ ಮೂಲಕ ತೆರಳಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಕೂಗಿ ತಾಲೂಕು ಕಚೇರಿ ಆವರಣಕ್ಕೆ ಬಂದು ಸೇರಿದರು.
Related Articles
Advertisement
ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ಪುಡಿಗಾಸಿನ ಪರಿಹಾರವನ್ನು ಸರ್ಕಾರ ನೀಡುತ್ತಿರುವುದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ. ಓಬಿರಾಯನ ಕಾಲದ ಪರಿಹಾರವನ್ನು ಬದಿಗೆ ಒತ್ತಿ ರೈತರ ಬೆಳೆಗೆ ಅನುಗುಣವಾಗಿ ಪರಿಹಾರವನ್ನು ನೀಡಬೇಕು ಎಂದರು.
ಎಲ್ಲಾ ಬೆಳೆಗಳಿಗೆ ವಿಮೆ ನೀಡಿ: ರೈತರ ಒಂದು ಎಕರೆಗೆ ಕನಿಷ್ಟ ಒಂದು ಲಕ್ಷ ವೈಜ್ಞಾನಿಕ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಎಲ್ಲಾ ಬೆಳೆ ಬೆಳೆಯುವ ಅವಕಾಶವಿದ್ದು, ಕೇಂದ್ರ ಸರ್ಕಾರ ಕಬ್ಬು ಮತ್ತು ಬಾಳೆ ಬೆಳೆಗೆ ಫಸಲ್ ಬೀಮಾ ಯೋಜನೆ ನೀಡಲು ಹಿಂಜರಿಯುತ್ತಿದ್ದು, ಕೂಡಲೇ ಈ ಬೆಳೆಗಳನ್ನು ಸೇರಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದರು.
ಮೌನಾಚರಣೆ: ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಉಂಟಾದ ಪ್ರವಾಹದಿಂದಾಗಿ 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಮತ್ತು ಜಾನುವಾರುಗಳೂ ನೀರು ಪಾಲಾಗಿರುವ ಎಲ್ಲರಿಗೂ ಸಂಘದ ವತಿಯಿಂದ ಮೌನ ಆಚರಣೆ ಮಾಡಿದ ಬಳಿಕ ಮನವಿ ಪತ್ರವನ್ನು ಉಪ ವಿಭಾಗಾಧಿಕಾರಿ ನಿಖೀತಾ ಎಂ.ಚಿನ್ನಸ್ವಾಮಿ ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಬಸವರಾಜು, ತಾಲೂಕು ರೈತ ಸಂಘದ ಅಧ್ಯಕ್ಷ ಗೌಡೇಗೌಡ, ರೈತ ಮುಖಂಡರಾದ ಯಾಲಕ್ಕಿಗೌಡ, ನಂಜುಂಡಸ್ವಾಮಿ, ಶಿವಕುಮಾರ್, ಮಹದೇವ, ರಾಜೇಂದ್ರ, ಶಿವಣ್ಣ, ರಂಗಸ್ವಾಮಿ, ನಾಗೇಗೌಡ, ರಾಜಪ್ಪ, ಮಲ್ಲಪ್ಪ, ಜಯಣ್ಣ ಇದ್ದರು.