ನರೇಗಲ್ಲ: ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯಾಗಬೇಕು. ರೈತರಿಗೆ ಸಿಗಬೇಕಾದ ಸೌಲಭ್ಯಗಳು ಸಿಗಬೇಕು. ರೈತರ ನ್ಯಾಯಯುತ ಹೋರಾಟಕ್ಕೆ ರೈತ ಸಂಘ ಸಿದ್ಧವಿದೆ. ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಭೇದ ಭಾವ ಮಾಡಲಾಗುತ್ತಿದೆ ಎಂದು ಉತ್ತರ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಕರಿಗಾರ ಹೇಳಿದರು.
ಮಾರನಬಸರಿ ಗ್ರಾಮದಲ್ಲಿ ನಡೆದ ನೂತನ ಉತ್ತರ ಕರ್ನಾಟಕ ರೈತ ಸಂಘದ ಪುರುಷ ಹಾಗೂ ಮಹಿಳಾ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಸೌಲಭ್ಯ ಒದಗಿಸಿಕೊಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ನೆರವಿಗೆ ಆದ್ಯತೆ ನೀಡಬೇಕು. ಏನೇ ಕಷ್ಟ ಬಂದರೂ ರೈತರು ಎದೆಗುಂದದೆ ಮುನ್ನಗ್ಗಬೇಕು. ಕಷ್ಟಪಟ್ಟು ದುಡಿಯುತ್ತಿದ್ದರೂ ರೈತರು ಏಳಿಗೆಯಾಗುತ್ತಿಲ್ಲ. ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ಕಷ್ಟ ಅನುಭವಿಸಬೇಕಿದೆ. ಜನಪ್ರತಿನಿಧಿಗಳು ಮತ ಪಡೆಯುವುದಕ್ಕಾಗಿ ರೈತರನ್ನು ಬಳಸಿಕೊಂಡು ರೈತರ ಕಲ್ಯಾಣದ ಹೆಸರಿನಲ್ಲಿ ಸ್ವಾರ್ಥ ಜೀವನ ನಡೆಸುತ್ತಿದ್ದಾರೆ. ರೈತರ ಬಗ್ಗೆ ಯಾರಿಗೂ, ಯಾವ ಪಕ್ಷಗಳಿಗೂ ಕಾಳಜಿ ಇಲ್ಲ. ರೈತರನ್ನು ಯಾವ ಸರ್ಕಾರವೂ ಉದ್ಧಾರ ಮಾಡುವುದಿಲ್ಲ. ರೈತರಿಗೆ ಸರ್ಕಾರ ಬಿತ್ತನೆ ಬೀಜ, ಗೊಬ್ಬರ, ವಿದ್ಯುತ್ ನೀಡುವಲ್ಲಿ ವಿಫಲವಾಗಿದೆ ಎಂದು ಹೇಳಿದರು.
ಸರ್ಕಾರಗಳು ರೈತರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿದರೆ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬಹುದು. ವಿದ್ಯಾವಂತರು ಸೇರಿದಂತೆ ಗ್ರಾಮೀಣ ಜನರ ವಲಸೆ ಹೆಚ್ಚಿದ್ದು, ಆಳುವ ಸರ್ಕಾರಗಳು ಈ ಬಗ್ಗೆ ಗಮನಹರಿಸಬೇಕು. ಇಲ್ಲದಿದ್ದರೆ ಆಹಾರ ಉತ್ಪಾದನೆ ಸೇರಿದಂತೆ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ. ಕೃಷಿ ಚಟುವಟಿಕೆಯನ್ನು ಲಾಭದಾಯಕವಾಗಿ ನಡೆಸಿಕೊಂಡು ಮುನ್ನಡೆಯಲು ಸಮಗ್ರವಾಗಿ ರೈತರ ಹಿತವನ್ನು ಕಾಪಾಡುವಂತಹ ಪ್ರತ್ಯೇಕ ಕೃಷಿ ನೀತಿಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಹೇಳಿದರು.
ಉತ್ತರ ಕರ್ನಾಟಕ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಎಲ್.ಎಸ್. ಗೌಡರ ಮಾತನಾಡಿ, ಆಳುವ ಸರ್ಕಾರಗಳು ರೈತರ ಕಷ್ಟ ಸುಖಗಳಲ್ಲಿ ಯಾವ ಕಾರಣಕ್ಕೂ ಭಾಗಿಯಾಗುವುದಿಲ್ಲ. ಅನ್ನವುದು ಸತ್ಯಮಾತವಾಗಿದೆ. ಮಹಾದಾಯಿ ಹಾಗೂ ಕಳಸಾ ಬಂಡೂರಿ ಸತತವಾಗಿ ಹೋರಾಟ 3 ವರ್ಷ ಮುಗಿಯುತ್ತ ಬಂದರೂ ಸರ್ಕಾರ ಈ ವರೆಗೂ ಸ್ಪಂದಿಲ್ಲ. ಮುಂಬರುವ ಚುನಾವಣೆಯಲ್ಲಿ ರಾಜಕೀಯ ವ್ಯಕ್ತಿಗಳಿಗೆ ತಕ್ಕ ಪಾಠ ಕಲಿಸಲು ಸಿದ್ಧರಾಗಬೇಕು. ರೈತರು ಬರಿ ದುಡಿಯುಲು ಇದ್ದಾರೆ ಎಂದು ಕೊಂಡಿರುವ ರಾಜಕೀಯ ಪಕ್ಷಗಳು ನಮಗೆ ಬೇಡವೇ ಬೇಡ ಎಂದು ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಸೋಮಶೇಖರ ಬರಗುಂಡಿ, ಶಿವಯ್ಯ ಸರಗಣಾಚಾರಿ ವೀರಪ್ಪ ಕುಸುಗಲ್ಲ, ಜಯದೇವ ಹಿರೇಮಠ, ಮಳಿಯಪ್ಪ ಡಬಗಲ್, ಶೇಖರಗೌಡ ಪಾಟೀಲ, ಚನ್ನಯ್ಯ ಹಿರೇಮಠ, ಶರಣಪ್ಪ ಕುರಿ, ಶಿವಶರಣ ಅಬ್ಬಿಗೇರಿ, ರೈಮಾನಸಾಬ ಮೋತೆಖಾನ್, ಖಾದಿರಸಾಬ್ ಕಳಕಾಪುರ, ಶಿವಪ್ಪ ತಳವಾರ, ಯಲ್ಲಪ್ಪ ಗುತ್ತೂರ, ಶ್ರೀದೇವಿ ಬಿಂಗಿಮ ಮೌಲಾಸಾಬ್ ಮೋತೆಖಾನ್, ಶಿವಪ್ಪ ಜಾಲಿಹಾಳ, ರಮೇಶ ಕುಲಕರ್ಣಿ, ಮಂಜುನಾಥ ಬಿಂಗಿ ಇದ್ದರು.