ಕೊಪ್ಪಳ: ಕೇಂದ್ರ-ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ, ಜನಪರ ಕಾಳಜಿ ಮರೆತ ಕಾಂಗ್ರೆಸ್, ಕುಟುಂಬ ರಾಜಕಾರಣದಲ್ಲಿಯೇ ಮುಳುಗಿದ ಜೆಡಿಎಸ್ ವಿರೋಧಿಸಿ ಈ ಬಾರಿ ಆಪ್ ಪಕ್ಷದೊಂದಿಗೆ ರೈತ ಸಂಘಟನೆ ಚುನಾವಣಾ ಕಣಕ್ಕೆ ಇಳಿಯಲಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಸರ್ಕಾರಕ್ಕೂ ಒಕ್ಕೊರಲಿನ ಒತ್ತಾಯ ಮಾಡಿದರೂ ಎಂಎಸ್‌ಪಿ ಜಾರಿಗೊಳಿಸುತ್ತಿಲ್ಲ. ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದಾಗ ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆಯಿತು. ಆದರೆ ರಾಜ್ಯದಲ್ಲಿನ ಬೊಮ್ಮಾಯಿ ಸರ್ಕಾರ ಮೂರು ಕಾಯ್ದೆ ಹಿಂಪಡೆಯುತ್ತಿಲ್ಲ. ಸುಮ್ಮನೇ ಕಾಲಹರಣ ಮಾಡುವ ಕೆಲಸದಲ್ಲಿ ತೊಡಗಿದೆ. ಕೂಡಲೇ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಭ್ರಷ್ಟಾಚಾರದಲ್ಲಿಯೇ ತೊಡಗಿವೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ 20 ಪರ್ಸೆಂಟ್ ಸರ್ಕಾರ ಎಂದು ಪ್ರಧಾನಿ ಮೋದಿ ಅವರೇ ಹೇಳಿದ್ದರು.
ಆದರೆ ಅದೇ ಮೋದಿ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರದಲ್ಲಿ 40 ಪರ್ಸೆಂಟ್ ಸರ್ಕಾರ ಎಂದು ಜಗಜ್ಜಾಹೀರಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದರಿಂದ ಜನರು ರೋಸಿ ಹೋಗಿದ್ದಾರೆ. ಈಗ ಜನ ಜಾಗೃತರಾಗುತ್ತಿದ್ದು, ಪರ್ಯಾಯ ರಾಜಕೀಯ ಬಯಸುತ್ತಿದ್ದಾರೆ. ಸದ್ಯ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ದೇಶದ ವಿವಿಧ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಆಪ್ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಇದರಿಂದ ನಾವು ಆಪ್ ಪಕ್ಷದೊಂದಿಗೆ ರಾಜಕೀಯ ಹೋರಾಟ ನಡೆಸಲು ಸಜ್ಜಾಗಿದ್ದೇವೆ. ಮುಂದಿನ ಚುನಾವಣೆಯಲ್ಲಿ ಆಪ್ ಪಕ್ಷದ ಚಿಹ್ನೆಯೊಂದಿಗೆ ರೈತ ಸಂಘದ ಪ್ರತಿನಿಧಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ರೈತ ಸಂಘದ ಹಂಗಾಮಿ ಅಧ್ಯಕ್ಷರನ್ನಾಗಿ ಇಸ್ಮಾಯಿಲ್ ನಾಲಬಂದ್ ಅವರನ್ನು ಆಯ್ಕೆ ಮಾಡಲಾಗಿದೆ. 6 ತಿಂಗಳೊಳಗಾಗಿ ಜಿಲ್ಲಾದ್ಯಂತ ತಾಲೂಕು ಘಟಕಗಳನ್ನು ರಚನೆ ಮಾಡಿ ಸಂಘದ ಆಶಯ ಜಾರಿಗೊಳಿಸಬೇಕು ಎಂದು ಸೂಚನೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಹನುಮಂತಪ್ಪ ಹೊಳೆಯಾಚೆ, ಇಸ್ಮಾಯಿಲ್ ನಾಲಬಂದ್ ಸೇರಿದಂತೆ ಇತರರು ಇದ್ದರು.