ಶ್ರೀರಂಗಪಟ್ಟಣ: ತಾಲೂಕಿನ ಚನ್ನನಕೆರೆ, ಮುಂಡಗದೊರೆ ಸೇರಿ ಇತರೆಡೆ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕಲ್ಲು ಅಕ್ರಮ ಗಣಿಕಾರಿಕೆ ಮತ್ತು ಜಲ್ಲಿ ಕ್ರಷರ್ ಉದ್ಯಮ ನಡೆಯುತ್ತಿದ್ದು ಅದನ್ನು ನಿಲ್ಲಿಸಬೇಕು ಎಂದು ರೈತ ಸಂಘದ ಮುಖಂಡರು, ಕಾರ್ಯಕರ್ತರು ಆಗ್ರಹಿಸಿದರು.
ತಾಲೂಕು ಕಚೇರಿಯಲ್ಲಿ ತಹಶಿಲ್ದಾರ್ ಡಿ.ನಾಗೇಶ್ ಅವರನ್ನು ಭೇಟಿ ಮಾಡಿ ಈಗಾಗಲೇ ಹಲವಾರು ಬಾರಿ ದೂರು ನೀಡಿದ್ದರೂ ಇದು ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು, ಕೂಡಲೇ ಅಕ್ರಮ ಗಣಿಗಾರಿಕೆ, ಜಲ್ಲಿ ಕ್ರಷರ್ ಉದ್ಯಮ ನಿಲ್ಲಿಸದಿದ್ದರೆ ನಿರಂತರ ಹೋರಾಟಕ್ಕೆ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಂಡೆಗಳ ಸ್ಫೋಟಕ ನಿಂತಿಲ್ಲ: ತಾಲೂಕಿನ ಮುಂಡುಗದೊರೆ, ಹಂಗರಹಳ್ಳಿ, ಟಿ.ಎಂ.ಹೊಸೂರು, ಶ್ರೀರಾಂಪುರ ಬಳಿ ಅಕ್ರಮ ಗಣಿಗಾರಿಕೆ ಪ್ರತಿದಿನ ನಡೆಯುತ್ತಲೇ ಇದೆ. ರಾತ್ರಿ ವೇಳೆ ದೊಡ್ಡ ಪ್ರಮಾಣದಲ್ಲಿ ಕಲ್ಲು ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ. ಸರ್ಕಾರಕ್ಕೆ ಸೇರಿದ ಅರಣ್ಯ ಭೂಮಿ ಮತ್ತು ಗೋಮಾಳದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಗಣಿಕಾರಿಕೆ ನಡೆಯುತ್ತಿದೆ. ಇದರಿಂದ ಅರಣ್ಯ ನಾಶ, ಸರ್ಕರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಮಂಜೇಶ್ ಗೌಡ ಆಗ್ರಹಿಸಿದರು.
6 ಕ್ರಷರ್ ಬಂದ್‌ಗೆ ಆದೇಶ: ತಹಶೀಲ್ದಾರ್ ನಾಗೇಶ್ ಮಾತನಾಡಿ, ನಾನು ನಿಮ್ಮ ಹೋರಾಟಕ್ಕೆ ಸ್ಪಂದಿಸಿ ಜಿಲ್ಲಾಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವರದಿ ನೀಡಿದ್ದೇನೆ. ಆ ಹಿನ್ನೆಲೆಯಲ್ಲಿ ಅವರ ಆದೇಶದ ಮೇರೆಗೆ ತಾಲೂಕಿನ 6 ಜಲ್ಲಿ ಕ್ರಷರ್‌ಗಳನ್ನು ನಿಲ್ಲಿಸಲಾಗಿದೆ. ಒಂದೆರಡು ದಿನದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್‌ಗಳ ಸ್ಥಳ ಪರಿಶೀಲಿಸಿ ನಿಲ್ಲಿಸ ಲಾಗುವುದು. ಅಕ್ರಮಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ನಾಗೇಂದ್ರಸ್ವಾಮಿ, ಮುಂಡಗದೊರೆ ಮೋಹನ, ಮಲ್ಲೇಶ್, ರವೀಂದ್ರ, ತೇಜಸ್ ರೈತರು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.