Advertisement

ಮಳೆನೀರು ತಮ್ಮ ಹೊಲದಲ್ಲೇ ಸಂಗ್ರಹವಾಗುತ್ತಿರುವುದರಿಂದ ರೈತರು ಖುಷ್‌

08:38 AM May 21, 2019 | Team Udayavani |

ನಾಯಕನಹಟ್ಟಿ: ಮುಂಗಾರಿನ ಮೊದಲ ಮಳೆ ಹೋಬಳಿಯಲ್ಲಿನ ಕೃಷಿ ಹೊಂಡಗಳನ್ನು ಭರ್ತಿ ಮಾಡಿದೆ. ಇದು ರೈತರ ಮೊಗದಲ್ಲಿ ನಗು ಮೂಡುವಂತೆ ಮಾಡಿದೆ.

Advertisement

ನಲಗೇತನಹಟ್ಟಿ, ರೇಖಲಗೆರೆ, ಸರಜವ್ವನ ಹಳ್ಳಿ ಸೇರಿದಂತೆ ಮೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ 40ಕ್ಕೂ ಹೆಚ್ಚು ಕೃಷಿಹೊಂಡಗಳು ನಿರ್ಮಿಸಿದ ನಂತರ ಇದೇ ಮೊದಲ ಬಾರಿಗೆ ನೀರಿನಿಂದ ತುಂಬಿ ತುಳುಕುತ್ತಿವೆ. ಕೃಷಿ ಇಲಾಖೆಯ ಮಹತ್ವದ ಕಾರ್ಯಕ್ರಮವಾದ ಕೃಷಿಹೊಂಡ ಯೋಜನೆ ಮೊದಲ ಮಳೆಗೇ ಯಶಸ್ಸು ಕಂಡಿದೆ.

ಭಾನುವಾರ ರಾತ್ರಿ ಸುರಿದ ಕೃತಿಕಾ ಮಳೆ ಮುಂಗಾರಿನ ಮೊದಲ ಉತ್ತಮ ಮಳೆಯಾಗಿದೆ. ನಲಗೇತನಹಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ 20, ರೇಖಲಗೆರೆ ಗ್ರಾಪಂ ವ್ಯಾಪ್ತಿಯಲ್ಲಿ 15, ನೇರಲಗುಂಟೆ ಗ್ರಾಪಂ ವ್ಯಾಪ್ತಿಯ 15 ಸರಜವ್ವನಹಳ್ಳಿ 10, ರೇಖಲಗೆರೆ ಸೇರಿದಂತೆ ನಾನಾ ಗ್ರಾಮಗಳ ಕೃಷಿಹೊಂಡಗಳಲ್ಲಿ ನೀರು ಸಂಗ್ರಹವಾಗಿದೆ.

ರೈತರು ತಮ್ಮ ಹೊಲಗಳಲ್ಲಿ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಹೊಂಡಗಳನ್ನು ಸರಕಾರದ ನೆರವಿನಿಂದ ನಿರ್ಮಿಸಿದ್ದಾರೆ. ಇದರಿಂದ ಹೊಲದಲ್ಲಿನ ಹಾಗೂ ಸುತ್ತಲಿನ ಎತ್ತರದ ಪ್ರದೇಶಗಳಲ್ಲಿನ ನೀರು ಹರಿದು ಕೃಷಿಹೊಂಡದಲ್ಲಿ ಸಂಗ್ರಹವಾಗುತ್ತಿದೆ. ವ್ಯರ್ಥವಾಗಿ ಹಳ್ಳದ ಪಾಲಾಗುತ್ತಿರುವ ನೀರು ತಮ್ಮ ಹೊಲದಲ್ಲಿಯೇ ಸಂಗ್ರಹವಾಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ನಲಗೇತನಹಟ್ಟಿ ಗ್ರಾಮದಲ್ಲಿ 30 ಮಿಮೀ, ನೇರಲಗುಂಟೆ 15, ಮೈಲನಹಳ್ಳಿ 13, ದೇವರೆಡ್ಡಿಹಳ್ಳಿ 16, ಘಟಪರ್ತಿ 29, ದೇವರೆಡ್ಡಿಹಳ್ಳಿ 16,ಅಬ್ಬೇನಹಳ್ಳಿ 20, ತಳಕು 23 ಹಾಗೂ ನಾಯಕನಹಟ್ಟಿಯಲ್ಲಿ 13.2 ಮಿಮೀ ಮಳೆಯಾಗಿದೆ. ಭಾನುವಾರ ಮಧ್ಯರಾತ್ರಿ ಗುಡುಗು-ಸಿಡಿಲು ಸಹಿತ ಅರ್ಧ ತಾಸು ಮಳೆಯಾಗಿದೆ. ಆದರೆ ಭಾರೀ ಪ್ರಮಾಣದಲ್ಲಿ ಬೀಸಿದ ಗಾಳಿಯಿಂದಾಗಿ ಮೋಡಗಳು ಚದುರಿದ್ದವು.

Advertisement

ಉತ್ತಮ ಮಳೆಯಿಂದಾಗಿ ತಗ್ಗು ಪ್ರದೇಶಗಳು ತುಂಬಿವೆ. ಚೆಕ್‌ಡ್ಯಾಂ ಹಾಗೂ ಕೃಷಿ ಹೊಂಡಗಳಲ್ಲಿ ಜೀವ ಜಲ ತುಂಬಿದೆ. ಆವರಿಸಿದೆ. ಒಂದೆರಡು ದಿನಗಳ ನಂತರ ಸಂಗ್ರಹವಾದ ನೀರು ಇಂಗಿದ ನಂತರ ರೈತರು ಕೃಷಿ ಚಟುವಟಿಕೆ ಆರಂಭಿಸುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next