ಮಾನ್ವಿ:ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಬಿತ್ತನೆ ನಡೆಸಿದ ಬೆಳೆಯ ಜಮೀನಿನಲ್ಲಿ ಚಿಗರೆಗಳು ಬಂದು ಚಿಗುರುತ್ತಿರುವ ಪೈರನ್ನು ತಿನ್ನುವ ಮೂಲಕ ರೈತರಿಗೆ ನಷ್ಟವನ್ನುಂಟು ಮಾಡುತ್ತಿವೆ ರೈತರು ಸಾವಿರಾರು ರೂ ವೆಚ್ಚಮಾಡಿ ಬಿತ್ತನೆ ಮಾಡಿದ ಬೀಜಗಳು ಮೊಳಕೆಯೋಡೆದು ಹೊರಬಂದ ಕೂಡಲೆ ಚಿಗರೆಗಳು ತಿನ್ನುತ್ತಿರುವುದರಿಂದ ರೈತರು ತಮ್ಮ ಹೊಲಗಳಲ್ಲಿಯೇ ಇದ್ದು ತಮ್ಮ ಬೆಳೆಯನ್ನು ಚಿಗರೆಗಳಿಂದ ರಕ್ಷಿಸಿಕೊಳ್ಳುವುದಕ್ಕೆ ಕಾಯಬೇಕಾದ ಪರಿಸ್ಥಿತಿ ಇದೆ.
ತಾಲೂಕಿನ ಹಿರೆಕೋಟ್ನೆಕಲ್,ಮುಸ್ಟೂರು ಭಾಗದಿಂದ ಕಲ್ಲೂರು ವರೆಗೂ ಚಿಗರೆಗಳು ಗುಂಪುಗಳಾಗಿ ಸಂಚಾರಿಸುತ್ತವೆ ಪ್ರತಿಗುಂಪಿನಲ್ಲಿಯು 7ರಿಂದ 8 ಚಿಗರೆಗಳು ಹಾಗೂ ಒಂದು ಗಂಡು ಕೃಷ್ಣ ಮೃಗ ಇರುತ್ತವೆ.
ಒಮ್ಮೆ ಬಂದಲ್ಲಿ 8ರಿಂದ 10 ಚಿಗರೆಗಳು ಜಮೀನಿನಲ್ಲಿನ ಬೆಳೆಯನ್ನು ತಿಂದು ನಾಶ ಮಾಡುವುದರಿಂದ ವನ್ಯ ಪ್ರಾಣಿ ಹಾಗೂ ಮಾನವರ ನಡುವೇ ಸಂಘರ್ಷ ಉಂಟಾಗುತ್ತಿದೆ.
ಬರಗಾಲದಿಂದ ತತ್ತರಿಸಿದ ರೈತರು ಮುಂಗಾರು ಮಳೆ ಉತ್ತಮವಾಗಿ ಬಂದಿದ್ದರಿಂದ ಭೂಮಿಯನ್ನು ಹಾದ ಮಾಡಿ ಹತ್ತಿ,ಜೋಳ ಸಜ್ಜೆ,ಸೇರಿದಂತೆ ಇತರ ಬೆಳೆಗಳನ್ನು ಬೆಳೆಯುವುದಕ್ಕೆ ಬೀಜವನ್ನು ಬಿತ್ತನೆ ಮಾಡಿದ್ದು ಮಳೆ ಬಂದಿರುವುದರಿಂದ ಭೂಮಿಯಲ್ಲಿ ತೇವಾಂಶದಿಂದಾಗಿ ಉತ್ತಮ ಪ್ರಮಾಣದಲ್ಲಿ ಮೊಳಕೆಬಂದಿದ್ದು ಸಸಿಯಲ್ಲಿ ಎರಡು ಎಲೆಗಳು ಮೂಡಿದ್ದು ಚಿಗರೆಗಳು ಸಸಿಯನ್ನು ತಿಂದು ಹಾಳುಮಾಡುತ್ತಿರುವುದರಿಂದ ಜಮೀನಿನ ಎಲ್ಲಾ ಭಾಗದಲ್ಲಿಯು ಸಸಿಗಳು ಸಮರ್ಪಕವಾಗಿ ಬೆಳೆಯದೆ ರೈತರಿಗೆ ಇಳುವರಿಯಲ್ಲಿ ನಷ್ಟವಾಗಲಿದೆ.
ಜಗನ್ನಾಥ ಚೌದ್ರಿ ಛಾಯಗ್ರಾಹಕ ಮಾತನಾಡಿ ಮುಸ್ಟೂರು ಭಾಗದಲ್ಲಿನ ಹಳ್ಳ ಹಾಗೂ ಸುತ್ತಮುತ್ತಲಿನ ಜಮೀನುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿಗರೆಗಳಿದ್ದು ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಹೆಚ್ಚಾಗಿ ಹೊರಬರುತ್ತವೆ ಚಿಗರೆಗಳು ಓಡುವುದು, ನೇಗೆಯುವುದು ನೋಡುವುದಕ್ಕೆ ಆನಂದವಾಗುತ್ತದೆ ಎನ್ನುತ್ತಾರೆ.
ಮಾನ್ವಿ ತಾ.ವಲಯ ಅರಣ್ಯಾಧಿಕಾರಿ ಸುರೇಶ ಅಲ್ಲಮೇಲು ಮಾತನಾಡಿ, ಚಿಗರೆಗಳು ವನ್ಯ ಪ್ರಾಣಿಗಳಾಗಿದ್ದು ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಚಿಗರೆಗಳಿಗೆ ಅವಶ್ಯವಾಗಿ ಆಹಾರ ದೊರೆಯುತ್ತಿರುವುದರಿಂದ ಅವುಗಳು ಬೆಳೆಗಳನ್ನು ನಾಶ ಮಾಡುವುದು ಕಡಿಮೆ. ವನ್ಯಪ್ರಾಣಿಗಳ ಮೇಲೆ ಹಲ್ಲೆ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದ್ದು ರೈತರು ವನ್ಯಜೀವಿಗಳಿಂದ ಬೆಳೆಗೆ ಹಾನಿಯಾದಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿ ಪರಿಹಾರವನ್ನು ಪಡೆಯಬಹುದು ಎಂದು ತಿಳಿಸಿದರು.