Advertisement
ವಾರಾಹಿವಾರಾಹಿ ಯೋಜನೆಗೆ ಭರ್ತಿ ನಲುವತ್ತು ವರ್ಷ. 1979ರಲ್ಲಿ ಆರಂಭವಾದ ಯೋಜನೆ ಕುಂಟುತ್ತಾ ಸಾಗಿ ಎಡದಂಡೆಯಷ್ಟೇ ಉಪಯೋಗಕ್ಕೆ ದೊರೆತು ಬಲದಂಡೆ ಹೆಸರಿಗಷ್ಟೇ ಸೀಮಿತವಾಗಿದೆ. 9.43 ಕೋ.ರೂ.ಗಳಲ್ಲಿ ಆರಂಭವಾದ ಯೋಜನೆ 650 ಕೋ.ರೂ.ಗೆ ತಲುಪಿದೆ. ಎಡದಂಡೆ ಕಾಲುವೆ 44.35 ಕಿ.ಮೀ. ಆಗಬೇಕಿದ್ದು 38 ಕಿ.ಮೀ. ರಚನೆಯಾಗಿದೆ. ಬಲದಂಡೆ ಯೋಜನೆಗೆ 8 ಕೋ.ರೂ.ಗಳ ಅಂದಾಜುಪಟ್ಟಿ ತಯಾರಿಸಿದೆ. 18 ಕಿ.ಮೀ. ಸಾಗಬೇಕಾದ ಇದಕ್ಕೆ ಇನ್ನೂ ಚಾಲನೆ ದೊರೆತಿಲ್ಲ.
2003ರಲ್ಲಿ ಯೋಜನೆಯ ಶೀಘ್ರ ಅನು ಷ್ಠಾನದ ಸಲುವಾಗಿ ಕರ್ನಾಟಕ ನೀರಾವರಿ ನಿಗಮಕ್ಕೆ ಹಸ್ತಾಂತರಿಸಲಾಗಿತ್ತು. ಸಿದ್ದಾಪುರದ ಹೊರಿಯಬ್ಬೆ ಎಂಬಲ್ಲಿ ಭೂಗರ್ಭ ಜಲ ವಿದ್ಯುದಾಗಾರ ಇದ್ದು ವಿದ್ಯುತ್ ಉತ್ಪಾದನೆಗೆ ಉಪಯೋಗಿಸಿದ ಬಳಿಕ 1,100 ಕ್ಯುಸೆಕ್ ನೀರು ಪ್ರತಿದಿನ ಎಡದಂಡೆ ಹಾಗೂ ಬಲದಂಡೆಗಳ ಮೂಲಕ ಹರಿಸಿ ಉಪಕಾಲುವೆಗಳ ಮೂಲಕ ರೈತರ ಜಮೀನಿಗೆ ನೀರೊದಗಿಸಬೇಕೆನ್ನುವುದು ಯೋಜನೆಯ ಆಶಯ.
ಉಡುಪಿ ಜಿಲ್ಲೆಯ 38,800 ಎಕರೆ ಭೂ ಪ್ರದೇಶಕ್ಕೆ ನೀರುಣಿಸಲು ಕುಂದಾಪುರ ಹಾಗೂ ಉಡುಪಿ ತಾಲೂಕನ್ನು ಕೇಂದ್ರೀಕರಿಸಿ ವಾರಾಹಿ ಯೋಜನೆ ಆರಂಭಿಸಲಾಗಿದೆ. ಯೋಜನೆ ಆರಂಭಗೊಂಡು 25 ವರ್ಷಗಳ ಕಾಲ 37 ಕೋ.ರೂ. ವ್ಯಯಿಸಲಾಗಿತ್ತು. ರೈತರಿಗೆ ಪ್ರಯೋಜನ ಮಾತ್ರ ಶೂನ್ಯ. 2005ರಲ್ಲಿ ಮರುಹುಟ್ಟು ಪಡೆದ ಯೋಜನೆ 2011ರವೇಳೆಗೆ 375 ಕೋ.ರೂ.ಗಳ ಖರ್ಚು ಮಾಡುವಲ್ಲಿಗೆ ತಲುಪಿತು. ಕಳೆದ ವರ್ಷದ ಅವಧಿಗೆ 650 ಕೋ.ರೂ.ವರೆಗೆ ಖರ್ಚಾಗಿದ್ದು ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ. 2015ರಿಂದ ಬೇಸಗೆ ಹಂಗಾಮಿನ ನೀರು ಹರಿಸಿ ರೈತರ ಉಪಯೋಗಕ್ಕೆ ದೊರೆಯುತ್ತಿದೆ. ವಿಳಂಬಕ್ಕೆ ಕಾರಣ ಹಲವು
ಮೂಲ ಯೋಜನೆಯಲ್ಲಿನ ವಿನ್ಯಾಸದಲ್ಲಿ ಬದಲಾವಣೆ, ಕಂದಾಯ ಇಲಾಖೆಯ ಅಡಚಣೆಗಳು, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ, ಅರಣ್ಯ ಇಲಾಖೆಯ ಆಕ್ಷೇಪಗಳು, ಸ್ಥಳೀಯರ ಕೆಲವೊಂದು ಬೇಡಿಕೆಗಳು, ಅಕಾಲಿಕ ಮಳೆ ಹೀಗೆ ಬೇರೆ ಬೇರೆ ಕಾರಣಗಳಿಂದ ಯೋಜನೆ ವಿಳಂಬವಾಗಿದೆ. ಮೂಲಯೋಜನೆ ಪ್ರಕಾರ 1,019 ಎಕರೆ ಆರಣ್ಯನಾಶ ಆಗುತ್ತಿತ್ತು. ಅದನ್ನು ತಪ್ಪಿಸಿ ಅರಣ್ಯ ಭೂಮಿ ಉಳಿಸುವ ಸಲುವಾಗಿ 2001ರಲ್ಲಿ ಯೋಜನೆಯಲ್ಲಿ ಒಂದಷ್ಟು ಮಾರ್ಪಾಡುಗಳನ್ನು ಮಾಡಲಾಯಿತು. ಇದರಿಂದ 129 ಎಕರೆ ಅರಣ್ಯ ನಾಶ ತಪ್ಪಿದಂತಾಯಿತು. ಉಡುಪಿ ಜಿಲ್ಲೆಯ 38,800 ಎಕರೆ ಕೃಷಿಭೂಮಿಗೆ ನೀರುಣಿಸಬೇಕಿದ್ದ ಯೋಜನೆ ಈಗ 15,702 ಎಕರೆ ಕೃಷಿಭೂಮಿಗೆ ನೀರುಣಿಸಲು ಸೀಮಿತಗೊಳಿಸಲಾಗಿದೆ.
Related Articles
ಈ ಬಾರಿಯ ಮಳೆಗಾಲದಲ್ಲಿ ಕುಳುಂಜೆ ಗ್ರಾಮದ ಸಿಂಗನಕೊಡ್ಲು ಎಂಬಲ್ಲಿ ನೀರುಹರಿಸುವ ಕಾಲುವೆ ಕುಸಿತವಾಗಿತ್ತು. ಇದರ ಕಾಮಗಾರಿ ಭರದಿಂದ ನಡೆಯುತ್ತಿದ್ದು ಇನ್ನು ಸ್ಲಾಬ್ ರಚನೆಯಷ್ಟೇ ಬಾಕಿಯಾಗಿದೆ. ಸುಮಾರು 15-20 ದಿನಗಳ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು ಈ ಮಾಸಾಂತ್ಯದಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ನೀರು ಹರಿಸಲಾಗುವುದು. ಡಿಸೆಂಬರ್ ಮೊದಲ ವಾರದಲ್ಲೂ ಅನಿಶ್ಚಿತವಾಗಿ ಮಳೆ ಬಂದ ಕಾರಣ ಕಾಮಗಾರಿ ಕೈಗೊಳ್ಳುವುದು ತ್ರಾಸದಾಯಕವಾಗಿತ್ತು. ಈ ಹಿನ್ನೆಲೆಯಲ್ಲಿ ವಿಳಂಬವಾಗಿದೆ.
-ಪ್ರಸನ್ನ,ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ವಾರಾಹಿ ನೀರಾವರಿ ನಿಗಮ
Advertisement
ನೀರು ಯಾವಾಗ?ವಾರಾಹಿ ಕಾಲುವೆಯಲ್ಲಿ ನೀರು ಯಾವಾಗ ಬಿಡುತ್ತಾರೆ ಎಂದು ತಿಳಿಯದೇ ರೈತರು ಎರಡನೆ ಭತ್ತದ ಬೆಳೆ ಬೆಳೆಯಲು ಸಿದ್ಧತೆ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಈ ಕುರಿತು ಸ್ಪಷ್ಟ ಮಾಹಿತಿ ಯಾವುದೇ ಇಲಾಖೆಯಿಂದ ಲಭ್ಯವಾಗಿಲ್ಲ.
-ರಾಘವೇಂದ್ರ ಹಾಲಾಡಿ, ಕೃಷಿಕರು -ಲಕ್ಷ್ಮೀ ಮಚ್ಚಿನ