ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ವರ್ಷ ತೀವ್ರ ಮಳೆ ಕೊರತೆಯಿಂದ ಬರಗಾಲಕ್ಕೆ ಅಪಾರ ಪ್ರಮಾಣದಲ್ಲಿ ಬೆಳೆ ಕಳೆದುಕೊಂಡ ರೈತರಿಗೆ ಇಲ್ಲಿವರೆಗೂ ಅರೆಬರೆ ಪರಿಹಾರ ಸಿಕ್ಕಿದ್ದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರ ಹಣ ರೈತರು ಎದುರು ನೋಡುವಂತಾಗಿದೆ.
ಕಳೆದ ಸಾಲಿನಲ್ಲಿ ಜಿಲ್ಲಾದ್ಯಂತ ಬರೋಬ್ಬರಿ 75,208.20 ಹೆಕ್ಟೇರ್ ಪ್ರದೇಶದಲ್ಲಿ ರೈತರು ಮಳೆ ಕೊರತೆಯಿಂದ ವಿವಿಧ ಬೆಳಗಳನ್ನು ಕಳೆದುಕೊಂಡು ಸಂಕಷ್ಟಕ್ಕಿಡಾಗಿದ್ದರು. ಆದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಲಿಲ್ಲ ಎಂದು ತಾತ್ಕಲಿಕವಾಗಿ ತಲಾ 2000 ರೂ, ಪರಿಹಾರ ವಿತರಿಸಿದರೂ ರೈತರಿಗೆ ಬೆಳೆ ನಷ್ಟ ಪರಿಹಾರ ಪೂರ್ತಿ ಜಮೆ ಇನ್ನೂ ಆಗಲೇ ಇಲ್ಲ.
ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ನಷ್ಟಕ್ಕೀಡಾಗಿರುವ ಒಟ್ಟು 75,208.20 ಹೆಕ್ಟೇರ್ ಪೈಕಿ ಇಲ್ಲಿವರೆಗೂ 68,551.67 ಹೆಕ್ಟೇರ್ ಪ್ರದೇಶದಲ್ಲಿ ಬರ ಪರಿಹಾರ ನೀಡಿದ್ದು, ಒಟ್ಟು 97,278 ರೈತರಿಗೆ ಪರಿಹಾರ ಸಿಕ್ಕಿದೆ. ಇಲ್ಲಿವರೆಗೂ 9 ಕಂತುಗಳಲ್ಲಿ ಜಿಲ್ಲೆಯ ರೈತರಿಗೆ ರಾಜ್ಯ ಸರ್ಕಾರ ತಲಾ 2,000 ರೂ, ಒಳಗೆ ಒಟ್ಟು 17.71 ಕೋಟಿ ರೂ, ಬರ ಪರಿಹಾರ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಿದರೂ ಇನ್ನೂ 6,656 ಹೆಕ್ಟೇರ್ ಪ್ರದೇಶದ ರೈತರಿಗೆ ಬರ ಪರಿಹಾರ ಬಂದಿಲ್ಲ. ಅಲ್ಲದೇ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರವೇ ಪ್ರತಿ ಹೆಕ್ಟೇರ್‌ಗೆ 8,500 ರೂ., ಬರ ಪರಿಹಾರ ಸಿಗಬೇಕಿದ್ದು ಈಗ ಕೇವಲ ರಾಜ್ಯ ಸರ್ಕಾರ 2,000 ರೂ, ತಾತ್ಕಲಿಕ ಪರಿಹಾರ ಬಿಟ್ಟರೆ ಕೇಂದ್ರದಿಂದ ಒಂದು ನೈಯಾಪೈಸೆ ಕೂಡ ರೈತರಿಗೆ ಸಿಕ್ಕಿಲ್ಲ.
ವರ್ಷ ಸಮೀಪಿಸಿದರೂ ಪರಿಹಾರ ಇಲ್ಲ: ಬರ ಪರಿಹಾರ ವಿಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ನಡುವೆ ಕಾನೂನು ಸಮರ ನಡೆದಿದ್ದು ವಿಚಾರ ಸುಪ್ರೀಂಕೋಟ್ ì ಮೆಟ್ಟಲೇರಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆದರೂ ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ಬರ ಪರಿಹಾರ ಹಣದಲ್ಲಿ ಜಿಲ್ಲೆಯ ರೈತರಿಗೆ ಪರಿಹಾರ ಹಣ ಬರುವುದು ಯಾವಾಗ ಎನ್ನುವ ವಿಚಾರ ಚರ್ಚೆಗೆ ಗ್ರಾಸವಾಗಿದೆ. ರೈತರು ಬೆಳೆ ಕಳೆದುಕೊಂಡು ಒಂದು ವರ್ಷ ಕಳೆಯುತ್ತಿದೆ. ಈಗ ಮುಂಗಾರು ಹಂಗಾಮು ಶುರುವಾಗಲು ದಿನಗಣನೆ ಶುರುವಾಗಿದೆ. ರೈತರು ಮುಂದಿನ ಕೃಷಿ ಚಟುವಟಿಕೆಗಳಿಗೆ ಸದ್ದಿಲ್ಲದೇ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರವಾಗಲಿ ಅಥವ ರಾಜ್ಯ ಸರ್ಕಾರವಾಗಲಿ ಎನ್‌ಡಿಆರ್‌ಎಫ್ ಪ್ರಕಾರ ರೈತರಿಗೆ ಸಿಗಬೇಕಾದ ಬರ ಪರಿಹಾರ ಹಣವನ್ನು ಇನ್ನೂ ಸಂಪೂರ್ಣ ಜಮೆ ಮಾಡುವಲ್ಲಿ ವಿಫಲವಾಗಿರುವುದು ಸಹಜವಾಗಿಯೆ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರವೇ ಬರ ಘೋಷಣೆ ಮಾಡಿ, ಕೇಂದ್ರದಿಂದ ಬರ ಅಧ್ಯಯನ ತಂಡ ಆಗಮಿಸಿ ಬರ ವೀಕ್ಷಣೆ ಮಾಡಿ ಹೋದರೂ ಪರಿಹಾರ ಹಣ ರೈತರಿಗೆ ಸಂಪೂರ್ಣ ಸಿಕ್ಕಿಲ್ಲ.
ತಾಲೂಕುವಾರು ಬೆಳೆ ನಷ್ಟ, ಪರಿಹಾರ ಮೊತ್ತ
ತಾಲೂಕು ಬೆಳೆ ನಷ್ಟ(ಹೇಕ್ಟರ್) ಬೆಳೆ ನಷ್ಟ(ಲಕ್ಷಗಳಲ್ಲಿ)
ಚಿಕ್ಕಬಳ್ಳಾಪುರ 9,039 768.31
ಗೌರಿಬಿದನೂರು 15,037 1,278.16
ಗುಡಿಬಂಡೆ 7,156 608.26
ಬಾಗೇಪಲ್ಲಿ 16320 1387.2
ಚಿಂತಾಮಣಿ 17476 1485.46
ಶಿಡ್ಲಘಟ್ಟ 10180 865.3
ಒಟ್ಟು 75,208.20 6410
ಬರ ಪರಿಹಾರ ಪಡೆದು ರೈತರ ವಿವರ
ತಾಲೂಕಿನ ಒಟ್ಟು ರೈತರು ಮೊತ್ತ (ಕೋಟಿಗಳಲ್ಲಿ)
ಗೌರಿಬಿದನೂರು 28,698 5,21,73,975
ಚಿಕ್ಕಬಳ್ಳಾಪುರ 12,524 2,20,05,225
ಗುಡಿಬಂಡೆ 7,199 1,32,84,569
ಬಾಗೇಪಲ್ಲಿ 14,983 2,81,52,879
ಶಿಡ್ಲಘಟ್ಟ 15,448 2,79.04,414
ಚಿಂತಾಮಣಿ 18,426 3,35,48,093
ಒಟ್ಟು 97,278 17,70,69,155
-ಕಾಗತಿ ನಾಗರಾಜಪ್ಪ