ಕಾಸರಗೋಡು: ಅಪರೂಪದ ಹಾಗೂ ಮಾರಣಾಂತಿಕ ರೋಗವಾಗಿರುವ ಮಿದುಳನ್ನು ತಿನ್ನುವ ಅಮೀಮಾ ಜ್ವರಕ್ಕೆ ಕೇರಳದಲ್ಲಿ ಎರಡು ತಿಂಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಈಚೆಗೆ ಅಮೀಬಿಕ್ ಮೆನಿಂಗೊಎನ್ಸೆ ಪಾಲಿಟಿಸ್ ಎಂದು ಕರೆಯುವ ಈ ರೋಗ ಬಾಧಿಸಿ ಚಟ್ಟಂಚಾಲ್ ಉಕ್ರಂಪಾಡಿ ನಿವಾಸಿ ಮಣಿಕಂಠನ್(38) ಸಾವಿಗೀಡಾದರು. ಅವರು ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಮುಂಬಯಿಯ ಅಂಗಡಿಯಲ್ಲಿ ಸಹೋದರ ಶಶಿ ಜತೆಗೆ ಕೆಲಸ ನಿರ್ವಹಿಸುತ್ತಿದ್ದರು. ಅಸೌಖ್ಯ ಕಾರಣದಿಂದ ಇತ್ತೀಚೆಗೆ ಊರಿಗೆ ಬಂದಿದ್ದರು.
ಕಲ್ಲಿಕೋಟೆ ತಿಕ್ಕೋಡಿಯ 14 ವರ್ಷದ ಬಾಲಕನಿಗೆ ಜುಲೈ 5ರಂದು ಸೋಂಕು ತಗಲಿದ್ದು, ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾನೆ. ಕಲ್ಲಿಕೋಟೆ ಜಿಲ್ಲೆಯ ಫಾರೂಕ್‌ನ ಇ.ಪಿ.ಮೃದುಲ್(12), ಕಣ್ಣೂರಿನ ವಿ.ದಕ್ಷಿಣಾ (13) ಮತ್ತು ಪಲಪ್ಪುರಂನ ಮುನ್ನಿಯೂರಿನ ಫದ್ವಾ(5) ಸಾವಿಗೀಡಾಗಿದ್ದಾರೆ.
ಇದು ಬೆಚ್ಚಗಿನ ಸಿಹಿನೀರಿನ ಸರೋವರಗಳು, ಕೊಳಗಳು ಮತ್ತು ನದಿಗಳಲ್ಲಿ ಬೆಳೆಯುವ ಅಮೀಬಾ. ಸರಿಯಾಗಿ ನಿರ್ವಹಿಸದ ಈಜು ಕೊಳಗಳಲ್ಲೂ ಇದು ಬದುಕಬಲ್ಲುದು.
ಲಕ್ಷಣಗಳು: ತಲೆ ನೋವು, ಜ್ವರ, ವಾಕರಿಕೆ ಮತ್ತು ವಾಂತಿ ಪ್ರಾಥಮಿಕ ಲಕ್ಷಣಗಳಾಗಿವೆ. ರೋಗ ತಗಲಿ ಐದು ದಿನಗಳ ಬಳಿಕ ಕೋಮಾ ಸ್ಥಿತಿಗೆ ಕೊಂಡೊಯ್ಯುತ್ತದೆ. ಒಂದರಿಂದ 18 ದಿನಗಳಲ್ಲಿ ಸಾವು ಸಂಭವಿಸುತ್ತದೆ.
ಚಿಕಿತ್ಸೆ: ಸೆರೆಬೊಸ್ಟೈನಲ್ ದ್ರವದ ಪಿಸಿಆರ್ ಪರೀಕ್ಷೆಗಳ ಮೂಲಕ ಸೋಂಕನ್ನು ಪತ್ತೆಹಚ್ಚಬಹುದು. ಈ ರೋಗಕ್ಕೆ ಯಾವುದೇ ಪ್ರಮಾಣಿತ ಚಿಕಿತ್ಸಾ ವಿಧಾನವಿಲ್ಲ. ವೈದ್ಯರು ಸಿಡಿಸಿಯ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ.