Advertisement
ಕುಂದಾಪುರ: ರೈತರ ಪಂಪ್‌ಸೆಟ್‌ಗಳ ಸಂಪರ್ಕಕ್ಕೆ ಆಧಾರ್ ಸಂಖ್ಯೆ ಜೋಡಣೆಗೆ ಮೆಸ್ಕಾಂ ನೀಡಿದ್ದ ಸೂಚನೆಗೆ ರೈತರು ನಿರುತ್ಸಾಹ ತೋರಿಸಿದ್ದಾರೆ. ಇನ್ನೂ ಶೇ.25ರಷ್ಟು ಮಂದಿ ಕೂಡ ಆಧಾರ್ ಪ್ರತಿ ನೀಡಿಲ್ಲ. ಇದೀಗ ಮೆಸ್ಕಾಂ ಲೈನ್‌ಮೆನ್‌ಗಳು ಮನೆ ಮನೆ ತಿರುಗಿ ಆಧಾರ್ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದಾರೆ. ಜ.31 ಇದ್ದ ಗಡುವನ್ನು ಫೆ.29ರ ವರೆಗೆ ವಿಸ್ತರಿಸಲಾಗಿದೆ.
ರಾಜ್ಯದ ಎಲ್ಲ ಕೃಷಿ ಪಂಪ್‌ಸೆಟ್‌ಗಳು ಮತ್ತು ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಸೌಲಭ್ಯ ಪಡೆಯುವವರ ಕುರಿತು ಜ. 31ರೊಳಗೆ ವರದಿ ಒಪ್ಪಿಸುವಂತೆ ಮೆಸ್ಕಾಂ ಸೇರಿದಂತೆ ಎಲ್ಲ ವಿದ್ಯುತ್ಛಕ್ತಿ ಸರಬರಾಜು ಕಂಪೆನಿಗಳಿಗೆ ರಾಜ್ಯದ ಆರ್ಥಿಕ ಇಲಾಖೆ ನಿರ್ದೇಶಿಸಿದೆ. ಆದರೆ ಮೆಸ್ಕಾಂ ಪಂಪ್‌ಸೆಟ್ ಸಂಪರ್ಕ ಹೊಂದಿರುವವರ ಆಧಾರ್ ಸಂಗ್ರಹ ಮಾಡುತ್ತಿದೆ. ಇತರ ಸಂಪರ್ಕಗಳಿಗೆ ಬಿಲ್ ಪಾವತಿ ಇದ್ದರೆ ಆ ಸಂದರ್ಭವಾದರೂ ಮಾಹಿತಿ ಪಡೆಯಬಹುದಾಗಿದ್ದು ಪಂಪ್‌ಸೆಟ್‌ಗಳಿಗೆ ಉಚಿತವಾದ ಕಾರಣ ಮಾಹಿತಿಯನ್ನು ತಂದು ಕೊಡದೇ ಇದ್ದರೆ ಹೋಗಿಯೇ ಸಂಗ್ರಹಿಸಬೇಕಾಗುತ್ತದೆ. ಅರ್ಹರ ಪತ್ತೆ
ಆಧಾರ್ ಸಂಗ್ರಹದ ಹಿಂದೆ ಬೇರೆಯದೇ ಸಂಶಯ ರೈತರನ್ನು ಕಾಡುತ್ತಿದೆ. ಅಸಲಿಗೆ 10 ಎಚ್‌ಪಿವರೆಗೆ ಮಾತ್ರ ರೈತರಿಗೆ ಉಚಿತ ವಿದ್ಯುತ್ ನೀಡಬಹುದಾಗಿದ್ದು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಸಂಪರ್ಕ ಪಡೆದರೆ ಬಳಕೆಯ ದರ ವಿಧಿಸಬಹುದು. ಕೆಲವು ರೈತರು 10 ಎಚ್‌ಪಿಗಿಂತಲೂ ಹೆಚ್ಚು ಸಾಮರ್ಥ್ಯದ ಸಂಪರ್ಕಗಳನ್ನು ಹೊಂದಿದ್ದಾರೆ. ಇನ್ನು ಕೆಲವು ರೈತರು ರಾಜ್ಯದ ಬೇರೆ ಬೇರೆ ಕಡೆ ತೋಟಗಳನ್ನು ಹೊಂದಿದ್ದರೆ, ಅಲ್ಲಿಯೂ ಪಂಪ್‌ಸೆಟ್ ಸಂಪರ್ಕ ಪಡೆದಿದ್ದು ಅವುಗಳೆಲ್ಲ ಒಟ್ಟಾಗುವಾಗ 10 ಎಚ್‌ಪಿ ದಾಟುತ್ತದೆ. ಇದನ್ನು ಕಂಡು ಹಿಡಿಯುವುದು ಕೂಡ ಉದ್ದೇಶ. ಈ ಮೂಲಕ 10 ಎಚ್‌ಪಿಗಿಂತ ಕಡಿಮೆ ಸಾಮರ್ಥ್ಯದ ಸಂಪರ್ಕ ಹೊಂದಿದ ರೈತರು ಎಷ್ಟು ಎಂದು ಪತ್ತೆ ಹಚ್ಚುವುದು ಕೂಡ ಈ ಕ್ರಮದಲ್ಲಿ ಸೇರಿದೆ.
Related Articles
ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಸಮಿತಿ ಆಧಾರ್ ದಾಖಲೆಗಳನ್ನು ನೀಡದಿರಲು ತೀರ್ಮಾನಿಸಿದೆ. ಕರಾವಳಿಯಲ್ಲಿ 4ರಿಂದ 5 ತಿಂಗಳು ಮಾತ್ರ ರೈತರು ಕೃಷಿ ಪಂಪುಗಳ ಮೂಲಕ ವಿದ್ಯುತ್ ಬಳಕೆ ಮಾಡುತ್ತಿದ್ದು, 2010ರಲ್ಲಿ ಮೆಸ್ಕಾಂ ಮೀಟರ್ ಅಳವಡಿಸಿ, ರೀಡಿಂಗ್ ಮಾಡಿ ನೀಡಿದ ಲೆಕ್ಕದಂತೆ ಪ್ರತಿ ಪಂಪಿನ ವಾರ್ಷಿಕ ವಿದ್ಯುತ್ ಬಳಕೆ 1,000 ಯುನಿಟ್‌ಗಿಂತ ಕಡಿಮೆ ಇದೆ. ಆದರೆ ಮೆಸ್ಕಾಂ ಕಂಪೆನಿಯು ಸರಾಸರಿ ಬಳಕೆಯ ಆಧಾರದಲ್ಲಿ ಪ್ರತಿ ಪಂಪಿಗೆ ಸರಕಾರದಿಂದ 5,500 ಯುನಿಟ್‌ಗಳಿಗೆ ಸಹಾಯಧನವನ್ನು ಪಡೆಯುತ್ತಿದೆ. ಪ್ರತಿ ಯುನಿಟ್‌ಗೆ 5.51 ರೂ.ನಂತೆ ಸರಕಾರಿ ಸಹಾಯಧನವನ್ನು ಭರಿಸಿಕೊಂಡಿದೆ. ಭಾ.ಕಿ.ಸಂ. ರೈತರ ಆಧಾರ್ ದಾಖಲೆಯನ್ನು ನೀಡದಿರಲು ತೀರ್ಮಾನಿಸಿದೆ.
Advertisement
ಯಾಕಾಗಿ?10 ಎಚ್‌ಪಿ ಮತ್ತು ಕಡಿಮೆ ಸಾಮರ್ಥ್ಯದ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಇದೆ. ಇದಕ್ಕೆ ವಿದ್ಯುತ್ಛಕ್ತಿ ಕಂಪೆನಿಗಳಿಗೆ ಸರಕಾರದಿಂದ ಹಣ ಪಾವತಿಯಾಗುತ್ತಿದೆ. ಕೃಷಿ ಪಂಪ್‌ಸೆಟ್ ಹೊಂದಿದ್ದೂ ಈ ವರೆಗೆ ಆಧಾರ್ ಮೊದಲಾದ ದಾಖಲೆಗಳನ್ನು ನೀಡದೆ ಇರುವ ಗ್ರಾಹಕರಿಂದ ಅವುಗಳನ್ನು ಸಂಗ್ರಹಿಸುವುದು, ರಾಜ್ಯದಲ್ಲಿ ಎಷ್ಟು ರೈತರು ಕೃಷಿ ಪಂಪ್ ಸೆಟ್ ಹೊಂದಿದ್ದಾರೆ? ಯಾರಿಗೆ ಯಾವ ರೀತಿಯ ಸಬ್ಸಿಡಿ ದೊರೆಯುತ್ತಿದೆ? ಎಂದು ತಿಳಿಯುವುದು ಇದರ ಮೊದಲ ಉದ್ದೇಶ. ಉಚಿತ ವಿದ್ಯುತ್ ಕಟ್
ಆಧಾರ್ ಜೋಡಣೆಯಾದ ಬಳಿಕ 10 ಎಚ್‌ಪಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿರುವ ರೈತರ ಪಂಪ್‌ಸೆಟ್ ಸಂಪರ್ಕದ ಉಚಿತ ವಿದ್ಯುತ್‌ಗೆ ಕೊಕ್ಕೆ ಬೀಳಲಿದೆಯೇ ಎಂಬ ಆತಂಕ ರೈತರಲ್ಲಿದೆ. ಅಷ್ಟಲ್ಲದೇ 10ಎಚ್‌ಪಿ ಸಾಮರ್ಥ್ಯದವರೆಗಿನ ಸಂಪರ್ಕಗಳಿಗೆ ಮಾತ್ರ ಸರಕಾರ ಸಬ್ಸಿಡಿ ನೀಡಲಿದೆಯೇ, ರೈತರು ಬಿಲ್ ಪಾವತಿಸಿ ಸರಕಾರ ರೈತರ ಖಾತೆಗೆ ಸಬ್ಸಿಡಿ ಹಾಕಲಿದೆಯೇ ಎಂಬಂತಹ ಅನುಮಾನಗಳೂ ಮೂಡಿವೆ. – ಲಕ್ಷ್ಮೀ ಮಚ್ಚಿನ