Advertisement

ತೋಟಗಾರಿಕೆ ಸೌಲಭ್ಯ ರೈತರಿಗೆ ಸಿಗುತ್ತಿಲ್ಲ

03:39 PM Dec 06, 2019 | Team Udayavani |

ಕೋಲಾರ: ಆಲೂಗಡ್ಡೆ ಬೆಳೆಯುವ ರೈತರಿಗೆ ಸಹಾಯಧನ, ಕಡಿಮೆ ದರದಲ್ಲಿ ಕೀಟ, ರೋಗನಾಶಕ ಔಷಧಿ ಹಾಗೂ ವಿಮೆ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರ ನೇತೃತ್ವದಲ್ಲಿ ತೆರಳಿದ್ದ ರೈತರ ನಿಯೋಗ ಜಿಪಂ ಸಿಇಒ ಎಚ್‌.ವಿ.ದರ್ಶನ್‌ಗೆ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮಾತನಾಡಿ, ಡಿಸೆಂಬರ್‌ ತಿಂಗಳಲ್ಲಿ ರೈತರು ಆಲೂಗಡ್ಡೆ ಬಿಟ್ಟರೆ ಬೇರೆ ಪರ್ಯಾಯ ಬೆಳೆ ಬಿತ್ತನೆ ಮಾಡಲು ಮುಂದಾಗುವುದಿಲ್ಲ, ಎಲ್ಲ ರೈತರು ಆಲೂಗಡ್ಡೆ ಬೆಳೆದರೂ ತೋಟಗಾರಿಕಾ ಇಲಾಖೆಯಿಂದ ಯಾವುದೇ ಸಹಕಾರ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಎಚ್ಚರ ವಹಿಸಿ: ರೈತರೆ ಹೊರ ರಾಜ್ಯ, ಜಿಲ್ಲೆಗಳಿಂದ ಬಿತ್ತನೆ ಗಡ್ಡೆ ಖರೀದಿ ಮಾಡಿಕೊಳ್ಳುತ್ತಾರೆ, ಎಕರೆಗೆ ಇಲಾಖೆಯಿಂದ ದೊರೆಯುವಸಹಾಯಧನ ಕಳ್ಳರ ಕೈ ಸೇರುತ್ತಿದೆ, ಕಚೇರಿಯಲ್ಲಿ ಕೆಲಸ ಮಾಡುವ ವ್ಯಕ್ತಿಗಳೇ ಅಧಿಕಾರಿಗಳನ್ನು ಕತ್ತಲಲ್ಲಿಟ್ಟು, ರೈತರಲ್ಲದವರಿಂದ ಅರ್ಜಿ ಹಾಕಿಸಿ ಹಣ ಮಂಜೂರು ಮಾಡುತ್ತಾರೆ. ಇದು ಮುಂದುವರಿಯದಂತೆ ಎಚ್ಚರವಹಿಸಬೇಕು ಎಂದು ತಾಕೀತು ಮಾಡಿದರು.

ವ್ಯಾಪಕ ಪ್ರಚಾರ: ಜಿಪಂ ಸಿಇಒ ಎಚ್‌.ವಿ.ದರ್ಶನ್‌ ಮಾತನಾಡಿ, ಆಲೂಗಡ್ಡೆ ಬೆಳೆಯುವ ರೈತರಿಂದ ವಿಮೆ ಪಾವತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ರೈತರು ವಿಮಾ ಕಂತು ಪಾವತಿ ಮಾಡಿಲ್ಲ, ಬೆಳೆ ನಷ್ಟವಾದಾಗ ತೊಂದರೆ ಅನುಭವಿಸುತ್ತಾರೆ. ಮುಂಗಾರು ಮತ್ತು ಹಿಂಗಾರು ಮಳೆ ಸಮಯದಲ್ಲಿ ರೈತರು ಬಿತ್ತನೆ ಮಾಡುವ ಪ್ರಮುಖ ಬೆಳೆಗಳಿಗೆ ಪರಿಹಾರ ಕಲ್ಪಿಸಲು ವಿಮೆ ಸೌಕರ್ಯ ಜಾರಿಗೆ ತರಲಾಗಿದೆ. ಈ ಕುರಿತು ಇಲಾಖೆಗಳಿಂದಲೂ ವ್ಯಾಪಕ ಪ್ರಚಾರ ನಡೆಸಲಾಗುತ್ತಿದೆ ಎಂದು ಹೇಳಿದರು. ಬೆಳೆ ನಷ್ಟ ಪರಿಹಾರ ಕಲ್ಪಿಸುವುದು ಜಿಲ್ಲಾಧಿಕಾರಿ ಆಧೀನದಲ್ಲಿ ಬರುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳ ಲಾಗುವುದು ಎಂದು ರೈತರ ನಿಯೋಗಕ್ಕೆ ಭರವಸೆ ನೀಡಿದರು.

ಔಷಧಿ ಬಗ್ಗೆ ತಿಳಿಸಿ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ. ಗೋವಿಂಡಗೌಡ ಮಾತನಾಡಿ, ಮಂಜಿನಿಂದ ಆಲೂಗಡ್ಡೆ ಬೆಳೆಯ ಇಳುವರಿ ಕಡಿಮೆಯಾಗುತ್ತದೆ. ಬದಲಾಗುತ್ತಿರುವ ವಾತಾವರಣದಿಂದ ಚುಕ್ಕೆರೋಗ, ಎಲೆ ಕೊಳೆಯುವ ರೋಗ, ಕೀಟ ಬಾಧೆ ಎದುರಾಗುತ್ತಿದೆ. ಸಿಬ್ಬಂದಿ ತೋಟಕ್ಕೆ ಆಗಾಗ ಭೇಟಿ ನೀಡಿ ರೋಗ ನಿಯಂತ್ರಣಕ್ಕೆ ಸಿಂಪಂಡಿಸಬೇಕಾದ ಔಷಧಿಗಳ ಕುರಿತು ರೈತರಿಗೆ ಅರಿವು ಮೂಡಿಸಬೇಕು. ಅಗತ್ಯ ಔಷಧಿ ರೈತ ಸಂಪರ್ಕ ಕೇಂದ್ರ, ಹಾಪ್‌ಕಾಮ್ಸ್‌ಗಳಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ವಿಮಾ ಕಂಪನಿ ಜೊತೆ ಚರ್ಚಿಸಿ: ಈಗಾಗಲೇ ಕೆಲ ರೈತರು ಬೆಳೆ ವಿಮೆ ಪಾವತಿ ಮಾಡಿದ್ದಾರೆ. ಹಿಂದೆ ಯಾರಿಗೂ ಸರಿಯಾಗಿ ವಿಮೆ ಪರಿಹಾರ ಬರಲಿಲ್ಲ, ರೈತರು ನಿಗದಿತ ಬ್ಯಾಂಕ್‌ನಲ್ಲಿ ವಿಮೆ ಪಾವತಿ ಮಾಡುತ್ತಾರೆ. ಬೆಳೆ ನಷ್ಟ ಆದಾಗ ಯಾರನ್ನು ಕೇಳಬೇಕು ಎಂಬುದು ತಿಳಿಯುತ್ತಿಲ್ಲ, ಇದರಿಂದ ಅಧಿಕಾರಿಗಳು ವಿಮಾ ಕಂಪನಿಯೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.

Advertisement

ಸರ್ಕಾರದ ಗಮನಕ್ಕೆ ತರುತ್ತೇನೆ: ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಎಚ್‌.ವಿ.ದರ್ಶನ್‌, ಈ ಕುರಿತು ಸರ್ಕಾರದ ಗಮನಕ್ಕೂ ತರಲಾಗುವುದು, ಶೀಘ್ರದಲ್ಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಿಯೋಗದಲ್ಲಿ ಆಲೂಗಡ್ಡೆ ಬೆಳೆಗಾರರಾದ ಹೆಬ್ಬಟ ನಾರಾಯಣಗೌಡ, ಛತ್ರಕೋಡಿಹಳ್ಳಿ ಶ್ರೀರಾಮರೆಡ್ಡಿ, ವಾನರಾಶಿ ಮುನಿವೆಂಕಟಪ್ಪ, ಶಿವಕುಮಾರ್‌, ಕೃಷ್ಣೇಗೌಡ, ಶ್ರೀನಿವಾಸ್‌, ನರೇಶ್‌ ಮತ್ತಿತರ ರೈತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next