ಹಾವೇರಿ: ಸಾಲಸೋಲ ಮಾಡಿ ಬಿತ್ತನೆ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡ್ಯೇವ್ರಿ. ಆದರೆ, ಸಕಾಲಕ್ಕೆ ಮಳೆ ಬಾರದೇ ಕೈಕೊಟ್ಟಿದ್ದರಿಂದ ಬಿತ್ತಿದ ಬೀಜ ಮಣ್ಣು ಪಾಲಾಗುವಂಗ ಆಗೇತ್ರಿ.. ಕಳೆದ ವರ್ಷ ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ್ವಿ.. ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಆತಂಕ ಎದುರಿಸುವಂತಾಗೇತ್ರಿ…
ಇವು ಜಿಲ್ಲೆಯ ಬಹುತೇಕ ರೈತರಿಂದ ಕೇಳಿ ಬರುತ್ತಿರುವ ಆತಂಕದ ಮಾತುಗಳು… ಮೇ ತಿಂಗಳಲ್ಲಿ ಅಬ್ಬರಿಸಿದ್ದ ಮಳೆ ಮುಂಗಾರು ಹಂಗಾಮಿನ ಆರಂಭದಲ್ಲೇ ಕೈಕೊಟ್ಟಿದೆ. ಇದರಿಂದ ಬಿತ್ತನೆಗೆ ಭಾರೀ ಹಿನ್ನೆಡೆಯಾಗಿದ್ದು ಒಂದಡೆಯಾದರೆ, ಬಿತ್ತನೆ ಮಾಡಿರುವ ಕೆಲ ರೈತರು ಕಳೆದ 15 ದಿನಗಳಿಂದ ಮಳೆಯಿಲ್ಲದೇ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಜೂನ್ ಮೊದಲಾರ್ಧದಲ್ಲೇ ಸುಮಾರು 1.20 ಲಕ್ಷ ಹೆಕ್ಟೇರ್ ಏಕದಳ ಧಾನ್ಯ, 1.60 ಲಕÒ ಹೆಕ್ಟೇರ್ ದ್ವಿದಳ ಧಾನ್ಯ ಬಿತ್ತನೆ ಕಾರ್ಯ ಪ್ರಗತಿಯಲ್ಲಿರುತ್ತಿತ್ತು. ಅದರಲ್ಲೂ ಸೋಯಾಬಿನ್, ಮೆಕ್ಕೆಜೋಳ, ಶೇಂಗಾ ಬಿತ್ತನೆ ಶೇ.50ಕ್ಕಿಂತ ಹೆಚ್ಚು ಆಗಬೇಕಿತ್ತು. ಆದರೆ, ಈ ಸಲ ಜೂನ್ ಆರಂಭದಿಂದ ಇಲ್ಲಿಯವರೆಗೆ ಸರಿಯಾಗಿ ಮಳೆಯೇ ಆಗಿಲ್ಲ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.
ಇದುವರೆಗೆ ಬಿದ್ದಿದ್ದು 28 ಮಿಮೀ ಮಳೆ: ಜಿಲ್ಲೆಯ ವಾರ್ಷಿಕ ಮಳೆ 800 ಮಿಮೀ ಆಗಿದ್ದು, ಜೂನ್ ತಿಂಗಳಲ್ಲಿ 119 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಕಳೆದ 19 ದಿನಗಳಲ್ಲಿ 28 ಮಿಮೀ ಮಳೆಯಷ್ಟೇ ಆಗಿದೆ. ಅಂದರೆ, ಶೇ.22ರಷ್ಟು ಮಳೆ ಬಿದ್ದಿದೆ. ಇನ್ನೂ ಮುಂಗಾರು ಮಳೆಯೇ ಶುರುವಾಗಿಲ್ಲ. ಚದುರಿದಂತೆ ಒಂದೆರಡು ಕಡೆ ಸಣ್ಣಪುಟ್ಟ ಮಳೆಯಾಗಿದ್ದು ಬಿಟ್ಟರೆ ಜೂನ್ ತಿಂಗಳಲ್ಲಿ ಕೃಷಿಗೆ ಪೂರಕ ಮಳೆಯೇ ಆಗಿಲ್ಲ. ವಾಡಿಕೆಯಂತೆ ಮೇ ಅಂತ್ಯದವರೆಗೆ 119 ಮಿಮೀ ಮಳೆಯಾಗಬೇಕಿದ್ದರಲ್ಲಿ 294 ಮಿಮೀ ಮಳೆ ಬಿದ್ದಿದೆ. ಅಂದರೆ, ಮೇ ತಿಂಗಳಲ್ಲಿ ದುಪ್ಪಟ್ಟು ಮಳೆಯಾಗಿದೆ. ಅತಿವೃಷ್ಟಿಯಿಂದ ಹಿಂಗಾರು ಹಂಗಾಮಿನ ಬೆಳೆಯೂ ನಷ್ಟವಾಗಿದೆ. ಮುಂಗಾರು ಪೂರ್ವದಲ್ಲೇ ಉತ್ತಮ ಮಳೆಯಾಗಿ ಹೊಲಗದ್ದೆಗಳಲ್ಲಿ ನೀರು ನಿಂತಿದ್ದರಿಂದ ರೈತರು ಸಂತಸಗೊಂಡು ಉಳುಮೆ ಮಾಡಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದರು. ರೈತರು ಅಗತ್ಯ ರಸಗೊಬ್ಬರ, ಬಿತ್ತನೆ ಬೀಜ ಖರೀದಿ ಮಾಡಿಕೊಂಡಿದ್ದಾರೆ. ಆದರೆ, ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬಿಸಿಲು ಮನೆ ಮಾಡಿರುವುದು ಅನ್ನದಾತನ ಆತಂಕಕ್ಕೆ ಕಾರಣವಾಗಿದೆ.
ಬಿಸಿಲಿಗೆ ಮುದುರುವ ಆತಂಕ: ಇದುವರೆಗೆ ಜಿಲ್ಲೆಯಲ್ಲಿ ಶೇ.30ರಷ್ಟು ಬಿತ್ತನೆಯಾಗಿದೆ. 10 ಸಾವಿರ ಹೆಕ್ಟೇರ್ ಸೋಯಾಬಿನ್, ಸುಮಾರು 30 ಸಾವಿರ ಹೆಕ್ಟೇರ್ ಮುಸುಕಿನಜೋಳ, ಶೇಂಗಾ ಸೇರಿದಂತೆ ಸುಮಾರು 50 ಸಾವಿರ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. ಇನ್ನೂ ಸುಮಾರು 2.80 ಲಕÒ ಹೆಕ್ಟೇರ್‌ನಲ್ಲಿ ಬಿತ್ತನೆಗಾಗಿ ರೈತರು ಕಾಯುತ್ತಿದ್ದಾರೆ. ಈಗಾಗಲೇ ಬಿತ್ತನೆ ಮಾಡಿಕೊಂಡವರು ಮಳೆಯಿಲ್ಲದೇ ಕಂಗಾಲಾಗಿದ್ದಾರೆ. ಬಿತ್ತಿದ ಬೀಜ ಮೊಳಕೆಯೊಡೆದಿದ್ದು, ಬಿಸಿಲಿಗೆ ಮುದುರುವ ಆತಂಕ ಎದುರಿಸುತ್ತಿದ್ದಾರೆ.
ಇನ್ನು ಬಿತ್ತನೆಯನ್ನೇ ಮಾಡದವರು ಮುಗಿಲತ್ತ ದೃಷ್ಟಿ ನೆಟ್ಟಿದ್ದಾರೆ. ಬಿತ್ತನೆಗೆ ವಿಳಂಬವಾದಷ್ಟು ಮುಂದಿನ ಕೃಷಿ ಚಟುವಟಿಕೆಗಳೆಲ್ಲವೂ ಹಿನ್ನಡೆಯಾಗುತ್ತ ಹೊಗುತ್ತದೆ. ಮುಂಗಾರು ಬಿತ್ತನೆ ಸಂದರ್ಭದಲ್ಲಿ ಪ್ರಖರ ಬಿಸಿಲು ಇರುವುದು ಜಿಲ್ಲೆಯ ಕೃಷಿ ಕಾರ್ಯಕ್ಕೆ ಹಿನ್ನಡೆಯಾಗುವಂತೆ ಮಾಡಿದೆ. ತೃಣ, ದ್ವಿದಳ ಧಾನ್ಯ ಉತ್ಪಾದನೆಯ ಮೇಲೂ ಇದರಿಂದ ಹೊಡೆತ ಬೀಳುವ ಅಪಾಯವಿದೆ. ಆಗಾಗ ಮೋಡ ಕವಿದ ವಾತಾವರಣ ಕಂಡರೂ ಮಳೆ ಬೀಳುತ್ತಿಲ್ಲ. ಆದಷ್ಟು ಬೇಗ ಮಳೆಯಾಗದಿದ್ದರೆ ಮುಂಗಾರು ಹಂಗಾಮಿನ ಮೇಲೆ ಪರಿಣಾಮ ಬೀಳಲಿದೆ. ಕಳೆದ ವರ್ಷ ಅತಿವೃಷ್ಟಿಯಿಂದ ಕಂಗೆಟ್ಟಿದ್ದ ರೈತರು ಈ ಸಲ ಮಳೆ ಕೈಕೊಟ್ಟಿದ್ದರಿಂದ ಸಮಸ್ಯೆ ಎದುರಿಸಲಿದ್ದಾರೆ.
ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ ಮಳೆ ಕೊರತೆಯಾಗಿದೆ. ಈ ವೇಳೆಗೆ ಎಲ್ಲೆಡೆ ಬಿತ್ತನೆ ಕಾರ್ಯ ವ್ಯಾಪಕವಾಗಿ ನಡೆಯಬೇಕಿತ್ತು. ಬಿತ್ತನೆ ಗುರಿಯಲ್ಲಿ ಅರ್ಧದಷ್ಟು ಬಿತ್ತನೆಯಾಗಿರುತ್ತಿತ್ತು. ಶೇ.30ರಷ್ಟು ಬಿತ್ತನೆಯಾಗಿದ್ದು, ಮಳೆಯಾಗದಿದ್ದರೆ ಅದಕ್ಕೂ ಸಮಸ್ಯೆಯಾಗಲಿದೆ. ಜೂ.25ರಿಂದ ಮಳೆ ಆಗುವ ಸಾಧ್ಯತೆ ಇದೆ. –
ಮಂಜುನಾಥ ಬಿ., ಜಂಟಿ ಕೃಷಿ ನಿರ್ದೇಶಕ
-ವೀರೇಶ ಮಡ್ಲೂರ