Advertisement

ಕೆರೆಗೆ ನೀರು ತುಂಬಿಸಲು ರೈತರ ಆಗ್ರಹ

09:03 AM Jan 04, 2019 | |

ಹೂವಿನಹಿಪ್ಪರಗಿ: ಕೆಬಿಜೆಎನ್‌ಎಲ್‌ ಮೇಲಧಿಕಾರಿಗಳ ನಿರ್ಲಕ್ಷ್ಯದಿಂದ ಗುರುವಾರ ಹೂವಿನ ಹಿಪ್ಪರಗಿ ಭಾಗದ ವಿವಿಧ ಹಳ್ಳಿಗಳ ರೈತರು ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಸಿಗುವುದು ಕನಸಿನ ಮಾತಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸ್ಥಳೀಯ ನಾಡಕಚೇರಿ ಆವರಣದಲ್ಲಿ ನೀರಿಗಾಗಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಸಂಕನಾಳ ಗ್ರಾಮದ ರೈತರು 15ಕ್ಕೂ ಹೆಚ್ಚು ಎತ್ತಿನ ಬಂಡಿಗಳಲ್ಲಿ ನಡೆಸಿದ ಮೆರವಣಿಗೆ ವೇಳೆ ಪಾಲ್ಗೊಂಡು ಮಾತನಾಡಿದ ಅವರು, ಜ.1ರಂದು ರೈತರ ಆರಂಭಿಸಿದ ಧರಣಿ ಸಂದರ್ಭದಲ್ಲಿ ತಹಶೀಲ್ದಾರರು ಹಾಗೂ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರರು ಧರಣಿ ಸ್ಥಳಕ್ಕೆ ಭೇಟಿ ನೀಡಿ 10 ದಿನದೊಳಗಾಗಿ ಕಾಲುವೆ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ತುಂಬಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಂದಿನ ಪರಿಸ್ಥಿತಿಯೇ ಬೇರೆ ಆಗಿದೆ.

ಆಲಮಟ್ಟಿ ಜಲಾಶಯದಿಂದ ಬಳೂತಿ ಜಾಕ್ವೆಲ್‌ಗೆ ಬಂದ ನೀರನ್ನು ಇಡೀ ವಿಜಯಪುರ ಜಿಲ್ಲೆಗೆ ನೀರು ಹರಿಸುವ ಜಾಕ್ವೆಲ್‌ ಸಂಪೂರ್ಣ ಸುಟ್ಟು ಅಪಾರ ಹಾನಿಯಾಗಿದೆ. ಈ ವಿಷಯ ಅಧಿಕಾರಿಗಳ ಗಮನಕ್ಕಿದ್ದರೂ ಸತ್ಯಾಂಶ ಮುಚ್ಚಿಟ್ಟು ಧರಣಿ ಸಂದರ್ಭದಲ್ಲಿ ನೂರಾರು ರೈತರ ಎದುರು 10 ದಿನಗಳ ಒಳಗಾಗಿ ನೀರು ಕೊಡುವುದಾಗಿ ನಂಬಿಸಿ ಮೋಸಗೊಳಿಸಿದ್ದಾರೆ ಎಂದು ಆರೋಪಿಸಿದರು.
ಕೇವಲ 15 ದಿನಗಳಲ್ಲಿ ಹೊಸ ಮಷಿನರಿಗಳನ್ನು ತಂದು ರೈತರಿಗೆ ನೀರು ಒದಗಿಸಲು ಸರ್ಕಾರಕ್ಕೆ ಸಾಧ್ಯವಿದೆ.

ಆದರೆ 4 ತಿಂಗಳು ಅವಧಿ ಹೇಳುತ್ತಿದ್ದಾರೆ. ಒಟ್ಟಾರೆ ರೈತರನ್ನು ನೀರಿನಿಂದ ವಂಚಿತರನ್ನಾಗಿ ಮಾಡಬೇಕೆಂಬ ದುರುದ್ದೇಶವಿದ್ದು ಯಾವುದೇ ಸಬೂಬು ಹೇಳದೆ 15 ದಿನಗಳಲ್ಲಿ ಮಷಿನರಿಗಳನ್ನು ಹೊಂದಾಣಿಕೆ ಮಾಡಿ ಕಾಲುವೆ ಹಾಗೂ ಹಳ್ಳಿಗಳ ಮುಖಾಂತರ ಕೆರೆಗೆ ನೀರು ತುಂಬಿಸುವಂತಾಗಬೇಕು ಎಂದು ಆಗ್ರಹಿಸಿದರು.
 
ತಾಲೂಕಾಧ್ಯಕ್ಷ ಸಿದ್ಧರಾಮ ಅಂಗಡಗೇರಿ, ತಾಲೂಕು ಗೌರವಾಧ್ಯಕ್ಷ ಈರಣ್ಣ ದೇವರಗುಡಿ, ಘಟಕದ ಅಧ್ಯಕ್ಷ ಹಣಮಂತ ತೋಟದ, ಅಶೋಕ ಶಿವಯೋಗಿ, ಸಿದ್ದು ಹಾದಿಮನಿ, ಗಿರೀಶ ಶಿವಯೋಗಿ, ಹಣಮಂತ್ರಾಯ ಗುಣಕಿ, ಸಿದ್ದಲಿಂಗಯ್ಯ ಹಿರೇಮಠ, ಬಸಣ್ಣ ಪೂಜಾರಿ, ಅರವಿಂದ ಬ್ಯಾಕೋಡ, ಮಲ್ಲಯ್ಯ ಚಿಕ್ಕಮಠ ಸೇರಿದಂತೆ ಸುತ್ತಲಿನ ಗ್ರಾಮದ ರೈತರು ಧರಣಿಯಲ್ಲಿ ಬಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next