Advertisement

ದನಗಳ ಜಾತೆ ಉಳಿಸಲು ರೈತರೇ ಜಾಗೃತರಾಗಿ

12:58 PM Apr 10, 2019 | Team Udayavani |

ಮಾಗಡಿ: ಪಾರಂಪರಿಕ ದನಗಳ ಜಾತ್ರೆಗಳು ಜೀವಂತವಾಗಿ ಉಳಿಯಬೇಕಾದರೆ ರೈತರು ಜಾಗೃತರಾಗಬೇಕಿದೆ. ಇಂದಿನ ದಿನಗಳಲ್ಲಿ ದನಗಳ ಜಾತ್ರೆಗಳು ಕಣ್ಮರೆಯಾಗುತ್ತಿರುವುದು ವಿಪರ್ಯಾಸ ಎಂದು ಸಾಹಿತಿ ದೊಡ್ಡಬಾಣಗೆರೆ ಮಾರಣ್ಣ ಆತಂಕ ವ್ಯಕ್ತಪಡಿಸಿದರು.

Advertisement

ಪಟ್ಟಣದ ಹೊಸಪೇಟೆ ಬಳಿ ತಿರುಮಲೆ ಶ್ರೀರಂಗನಾಥಸ್ವಾಮಿ ದನಗಳ ಜಾತ್ರೆಯಲ್ಲಿ ಚೇತಕ್‌ ಅನಿಮಲ್‌ ವೆಲ್‌ಪೇರ್‌ ಟ್ರಸ್ಟ್‌ ಹಾಗೂ ತಾಲೂಕು ರೈತ ಸಂಘದಿಂದ ನಡೆದ ರೈತರಿಗೆ ಸನ್ಮಾನ ಮತ್ತು ದನಗಳಿಗೆ ಉಚಿತ ಔಷಧ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾರಂಪರಿಕ ದನಗಳ ಜಾತ್ರೆಗಳು ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಣ್ಮರೆಯಾಗುತ್ತಿವೆ. ಇದರಿಂದ ರೈತರು ತುಂಬ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಪ್ರತಿ ತಾಲೂಕಿನಲ್ಲಿ ದನಗಳ ಜಾತ್ರೆಗೆ ಕನಿಷ್ಠ 100 ಎಕರೆ ಜಮೀನು ಮೀಸಲಿಡಬೇಕಿದೆ ಎಂದು ಆಗ್ರಹಿಸಿದರು.

ಪ್ರಾಣಿಗಳ ಸೇವೆ ದೇವರಿಗೆ ಪೂಜೆಗೆ ಸಮ: ಕರ್ನಾಟಕದ ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ರೈತರು ದನಗಳನ್ನು ಚೆನ್ನಾಗಿ ಸಾಕಿ ಬೆಳೆಸುತ್ತಾರೆ. ಉತ್ತರ ಕರ್ನಾಟಕದ ಕೃಷ್ಣೆ ಕಣಿವೆ ರೈತರು ರಾಸುಗಳನ್ನು ಖರೀದಿಸಿ ಬೇಸಾಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಮೂಖ ಪ್ರಾಣಿಗಳ ಸೇವೆ ಮಾಡುವುದು ದೇವರಿಗೆ ಪೂಜೆಗೆ ಸಮವಾಗಿದೆ. ಪಾರಂಪರಿಕ ಜಾತ್ರೆಗಳನ್ನು ಉಳಿಸಲು ಚೇತಕ್‌ ಅನಿಮಲ್‌ ವೇಲ್‌ಪೇರ್‌ ಟ್ರಸ್ಟ್‌ ಜಾತ್ರೆಯಲ್ಲಿನ ದನ ಜನಗಳಿಗೆ ಉಚಿತವಾಗಿ ನೀರು, ಔಷಧ ನೀಡುತ್ತಿರುವುದು ಜೊತೆಗೆ ರೈತರಿಗೆ ಸ್ಫೂರ್ತಿ ನೀಡಲು ಪ್ರಗತಿಪರ ರೈತರನ್ನು ಸನ್ಮಾನಿಸುವ ಕಾರ್ಯಕ್ರಮ ಶ್ಲಾಘನೀಯ ಎಂದು ತಿಳಿಸಿದರು.

ದೇಶಿ ತಳಿ ಉಳಿಸುವುದು ರೈತರ ಧರ್ಮ: ಚೇತಕ್‌ ಅನಿಮಲ್‌ ವೇಲ್‌ಪೇರ್‌ ಟ್ರಸ್ಟ್‌ ಅಧ್ಯಕ್ಷೆ ಸುಜಾತಾ ಮಾತನಾಡಿ, ಜಾನವಾರುಗಳಿದ್ದರೆ ಮಾತ್ರ ರೈತರ
ಬದುಕು ಹಸನಾಗುತ್ತದೆ. ಅದರಲ್ಲೂ ದೇಶಿ ತಳಿಗಳನ್ನು ಜೀವಂತವಾಗಿ ಉಳಿಸುವುದು ರೈತರ ಧರ್ಮವಾಗಿದೆ. ವಿದೇಶಿ ತಳಿ ಸಾಕುವುದರಿಂದ ತಾತ್ಕಾಲಿಕವಾಗಿ ಆರ್ಥಿಕ ವೃದ್ಧಿಸಬಹುದು. ಆದರೆ, ದೇಶಿ ತಳಿ ಅಭಿವೃದ್ಧಿ ಪಡಿಸಿದರೆ ರೋಗ ಮುಕ್ತ ಜೀವನ ನಡೆಸಬಹುದು. ಕ್ಯಾನ್ಸರ್‌ ರೋಗ ತಡೆಗೆ ದೇಶಿ ತಳಿಯ ಅವಶ್ಯವಿದೆ. ದನಗಳ ರೋಗ ಮುಕ್ತಿಗಾಗಿ ಉಚಿತ ಔಷಧ ವಿತರಣೆ ಮಾಡಲಾಗುತ್ತಿದೆ. ರೈತರು ಸಹ ಜಾತ್ರೆಗಳು ಜೀವಂತ ಉಳಿವಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕಿದೆ ಎಂದು ಸಲಹೆ ನೀಡಿದರು.

ರೈತರ ನೋವಿಗೆ ಸ್ಪಂದಿಸುವ ಜನರಿಲ್ಲ: ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯದ ಲೋಕೇಶ್‌ ಮಾತನಾಡಿ, ರೈತರ ಸಮಸ್ಯೆಗಳಿಗೆ ರಾಜಕಾರಣಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಮೊದಲು ದನಗಳ ಜಾತ್ರೆ ಬಂರು ಎಂದರೆ ಸಾಕು ಸುತ್ತಮುತ್ತಲ ಜನರು ರೈತರಿಗೆ ಊಟದ ವ್ಯವಸ್ಥೆ, ಕುಡಿಯುವ ನೀರು, ವಸತಿ, ರಾಸುಗಳಿಗೆ ನೆರಳಿನ ವ್ಯವಸ್ಥೆ ಮಾಡುತ್ತಿದ್ದರು. ಕಾಲ ಬದಲಾದಂತೆ ರೈತರ ನೋವಿಗೆ ಸ್ಪಂದಿಸುವ ಜನರೇ ಇಲ್ಲದಂತಾಗಿದೆ ಎಂದು ಹೇಳಿದರು.

Advertisement

ಜಾಗ ಭೂ ದಾಹಿಗಳ ಪಾಲು: ಜಾತ್ರೆ ನಡೆಸುತ್ತಿದ್ದ ಜಾಗ ಭೂದಾಹಿಗಳ ಪಾಲಾಗಿದೆ. ಗುಂಡುತೊಪುಗಳು ಸಹ ಇಲ್ಲದಂತಾಗಿದೆ. ಕಲ್ಯಾಣಿಗಳು ಕಣ್ಮರೆಯಾಗಿವೆ. ಹೀಗೆ ಮುಂದುವರಿದರೆ ದನಗಳಿಗಲ್ಲ, ಜನರು ನಿಲ್ಲುವುದಕ್ಕೂ ಸುಂಕ ಕೊಡಬೇಕಾದ ಪರಿಸ್ಥಿತಿ ಬರಬಹುದು. ಸರ್ಕಾರ ಎಚ್ಚೆತ್ತುಕೊಂಡು ಜಾತ್ರೆಗೆ ಬರುವ ರೈತರಿಗೆ ಸ್ಥಳ ಮೀಸಲಿಟ್ಟು ಅನುಕೂ ಕಲ್ಪಿಸಬೇಕಾಗಿದೆ ಎಂದು ತಿಳಿಸಿದರು. ಈ ವೇಳೆಯಲ್ಲಿ ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ತಿರುಮಲೆ ಮಲ್ಲಿಗೆ ನಾಗರಾಜು, ಪಟೇಲ್‌ ನಾಗರಾಜು, ಸೀತಾರಾಮಗೌಡ, ಮಧುಗೌಡ, ಬೆಳಗವಾಡಿ ಗಂಗಯ್ಯ, ರಂಗಸ್ವಾಮಿ, ಹನುಮಂತಯ್ಯ, ದೊಡ್ಡರಂಗಯ್ಯ, ಲಕ್ಷ್ಮೀಪತಿ, ದೇವರಾಜು, ಮೂರ್ತಿ ರಂಗಸ್ವಾಮಯ್ಯ, ಕುಮಾರ್‌, ರವಿ, ಜಗದೀಶ್‌, ಶಿವಣ್ಣ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next