ಶ್ರೀರಂಗಪಟ್ಟಣ: ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ತಾಲೂಕುಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರೇ ಹೆಚ್ಚು ಭಾಗಿಯಾಗಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ರೈತ ಸಂಘದ ಮುಖಂಡರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ನೇತೃತ್ವದಲ್ಲಿ ರೈತ ಸಂಘದ ಕಾರ್ಯಕರ್ತರು ಕೆಆರ್‌ಎಸ್ ಬಳಿಯ ಎಲಿಪ್ಯಾಡ್‌ನಲ್ಲಿ ಆಗಮಿಸಿದ ಮುಖ್ಯ ಮಂತ್ರಿಯಡಿಯೂರಪ್ಪ ಅವರನ್ನು ಸಂಪರ್ಕಿಸಿ ಮನವಿ ಸಲ್ಲಿಸಿದರು.
ಸರ್ಕಾರಿ ಭೂಮಿ ಒತ್ತುವರಿ: ಅರಣ್ಯ ಭೂಮಿ ಒತ್ತುವರಿ, ಸರ್ಕಾರಿ ಗೋಮಾಳ ಒತ್ತುವರಿ ಮಾಡಿಕೊಂಡು ಸರ್ಕಾರಕ್ಕೆ ರಾಜಧನ ಕಟ್ಟದೆ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು. 100ಕ್ಕೂ ಹೆಚ್ಚು ಜಲ್ಲಿ ಯಂತ್ರಗಳು, 250ಕ್ಕೂ ಹೆಚ್ಚು ಕಲ್ಲುಕೋರೆಗಳಲ್ಲಿ ಗಣಿಗಾರಿಕೆ ನಡೆಸುತ್ತಿದ್ದರೂ ಯಾರೊಬ್ಬರೂ ಸರ್ಕಾರಕ್ಕಾಗಲಿ, ಪಂಚಾಯಿತಿಗಾಗಲಿ, ಯಾವುದೇ ಸುಂಕ, ರಾಜಧನ ನೀಡುತ್ತಿಲ್ಲ. ಈ ಅಕ್ರಮ ಗಣಿಗಾರಿಕೆಗೆ ತಾಲೂಕು ಆಡಳಿತ, ಡಿವೈಎಸ್ಪಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಂಡರೂ ಕಾಣದಂತೆ ಮೌನ ವಹಿಸುತ್ತಿವೆ ಎಂದು ಆರೋಪಿದರು.
ಗಣಿಗಾರಿಕೆ ನ್ಪೋಟಕದಿಂದ ಸಮೀಪದ ಗ್ರಾಮಗಳಲ್ಲಿ ಮನೆಗಳು ಬಿರುಕು ಬಿಟ್ಟಿವೆ. ಗಣಿ ದೂಳು ಎಲ್ಲೆಡೆ ಆವರಿಸಿಕೊಂಡಿದ್ದು ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ.
ಸಾಕಷ್ಟು ಬಾರಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ. ಪ್ರತಿಭಟನೆ ಮಾಡಿದ್ದೇವೆ. ಗಣಿಗಾರಿಕೆಗೆ ಜಿಲ್ಲಾಡಳಿತ ನಿಷೇಧ ಹೇರಿದರೂ ಮಾಲೀಕರು ಕ್ಯಾರೆ ಎನ್ನದೆ ಮುಂದುವರಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತ ಮುಖಂಡರು ದೂರಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಯ್ಯ, ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರಸ್ವಾಮಿ, ಜಿಲ್ಲಾ ದಸಂಸ ಸಂಚಾಲಕ ಕುಬೇರಪ್ಪ, ರವಿಚಂದ್ರ, ಮೋಹನ್, ಕನ್ನಡ ಪರ ಸಂಘಟನೆಗಳ ಮುಖಂಡರಿದ್ದರು.