ಆಳಂದ: ಸರಕಾರ ನೀಡಿದ ಬೆಳೆಹಾನಿ ಪರಿಹಾರ ಹಾಗೂ ಪ್ರೋತ್ಸಾಹಧನ ಪಡೆಯಲು ಬ್ಯಾಂಕ್‌ಗಳ ಎದುರು ನಿತ್ಯ ಸರಣಿಯಲ್ಲಿ ನಿಲ್ಲುವುದು ಮಾತ್ರ ರೈತರಿಗೆ ತಪ್ಪುತ್ತಿಲ್ಲ.
ಈಗಾಗಲೇ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಕೊಂಡವರಿಗೆ ಹಣ ನೇರವಾಗಿ ಜಮೆಯಾಗುತ್ತಿದೆ. ಹೀಗಾಗಿ ಹಣ ಬಂದಾಗೊಮ್ಮೆ ಡಿಸಿಸಿ ಎದುರು ರೈತರ ದಂಡೇ ಕಂಡುಬರುತ್ತದೆ. ಹಳ್ಳಿಯಿಂದ ಪಟ್ಟಣದ ಡಿಸಿಸಿ ಬ್ಯಾಂಕ್‌ಗೆ ಬರುವ ರೈತರು ದಿನವಿಡೀ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ.
ಆಳಂದ ತಾಲೂಕಿನಲ್ಲಿ 36 ಸೊಸೈಟಿಗಳಿವೆ. ಅದರಲ್ಲೂ ಪಟ್ಟಣದ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ 60 ಸಾವಿರ ಮಂದಿ ಖಾತೆ ಹೊಂದಿದ್ದಾರೆ. ಈ ಪೈಕಿ 30 ಸಾವಿರ ಗ್ರಾಹಕರ ಖಾತೆಗಳಿಗೆ ಆಧಾರ ಲಿಂಕ್ ಮಾಡಲಾಗಿದೆ. ದಿನಕ್ಕೆ 200 ಗ್ರಾಹಕರಿಗೆ ಹಣ ನೀಡಲಾಗುತ್ತಿದೆ. ಇನ್ನೂ 200 ಗ್ರಾಹಕರ ಆರ್‌ಟಿಜಿಎಸ್ ಸೇರಿ ದಿನಕ್ಕೆ 400 ಗ್ರಾಹಕರ ಖಾತೆ ನಿರ್ವಹಣೆಯಂತ ಕೆಲಸ ನಿರ್ವಹಣೆ ಸಿಬ್ಬಂದಿಗೆ ಹೊರೆಯಾಗಿದೆ. ಇದರ ಜತೆ ಪರಿಹಾರದ ಮೊತ್ತ ಬಂದಿದೆ ಎಂದು ಬ್ಯಾಂಕಿಗೆ ಹೋದರೆ ಗ್ರಾಹಕರ ದಟ್ಟಣೆಯಿಂದಾಗಿ ಸಕಾಲಕ್ಕೆ ಹಣ ಸಿಗದೇ ಅನೇಕರು ಮರಳಿ ಮನೆಗೆ ಬರುವಂತಾಗಿದೆ.
ಡಿಸಿಸಿ ಬ್ಯಾಂಕ್ ಶಾಖೆಗೆ ಏಳು ಸಾವಿರ ರೈತರ ಪರಿಹಾರ ಮೊತ್ತ ಬಂದಿದ್ದರಿಂದ ಹಾಗೂ ಎಲ್ಲರೂ ಏಕಕಾಲಕ್ಕೆ ಹಣ ಪಡೆಯಲು ಬರುತ್ತಿರುವ ಕಾರಣ ದಟ್ಟಣೆಯಾಗುತ್ತಿದೆ. ಬ್ಯಾಂಕ್‌ನಲ್ಲಿ ಹುದ್ದೆಗೆ ತಕ್ಕ ಸಿಬ್ಬಂದಿ ಇದ್ದಾರೆ. ಆದರೆ ಎಲ್ಲರ ಖಾತೆ ಒಮ್ಮೆಲೇ ನಿರ್ವಹಿಸುವುದು ಕಷ್ಟ. ಆದರೂ ನಿತ್ಯ 200ರಿಂದ 300 ಜನರಿಗೆ ಹಣ ನೀಡಲಾಗುತ್ತಿದೆ. ಎಲ್ಲರೂ ತಾಳ್ಮೆಯಿಂದ ಪರಿಹಾರದ ಮೊತ್ತ ಪಡೆಯಬೇಕು ಎನ್ನುತ್ತಾರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ.