ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಮಳೆ ಕೊರತೆಯ ಪರಿಣಾಮ ಆವರಿಸಿರುವ ಬರದಿಂದಾಗಿ ರೈತರು ತೀವ್ರ ಆತಂಕದಲ್ಲಿರುವಾಗಲೇ ಹೈನೋದ್ಯಮದಲ್ಲಿ ತೊಡಗಿರುವ ರೈತರಿಗೆ ಹಸಿರು ಮೇವಿನ ಕೊರತೆ ಎದುರಾಗಿರುವುದು ಹಾಲು ಉತ್ಪಾದಕರ ನಿದ್ದೆಗೆಡಿಸಿದೆ.ಹೇಳಿ ಕೇಳಿ ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಕ್ಷೀರ ಕ್ರಾಂತಿಗೆ ಹೆಸರಾಗಿ ರೈತರು ಇಂದಿಗೂ ಸ್ವಾವಲಂಬಿ ಹಾಗೂ ಸ್ವಾಭಿ ಮಾನದ ಬದುಕು ಕಟ್ಟಿಕೊಳ್ಳುವಲ್ಲಿ ಹೈನೋದ್ಯಮ ಕೈ ಹಿಡಿದಿದೆ. ಆದರೆ, ಮಳೆ ಕೊರತೆಯಿಂದ ಜಿಲ್ಲಾದ್ಯಂತ ಹಸಿರು ಮೇವಿಗೂ ಬರ ಎದುರಾಗಿದ್ದು, ರೈತರು ಹಸಿರು ಮೇವಿಗಾಗಿ ಹುಡುಕಾಟ ನಡೆಸುವಂತಾಗಿದೆ.
ಜಿಲ್ಲೆಯಲ್ಲಿ ಸರಾಸರಿ ನಿತ್ಯ 4 ರಿಂದ 5 ಲಕ್ಷ ಲೀಟರ್ ಹಾಲು ಮಳೆಗಾಲದಲ್ಲಿ ಉತ್ಪಾದನೆ ಆಗುತ್ತದೆ. ಬೇಸಿಗೆ ಅವಧಿಯಲ್ಲಿ ಹಸಿರು ಮೇವಿನ ಕೊರತೆಯಿಂದಾಗಿ ನಿತ್ಯ ಸರಾಸರಿ 3 ರಿಂದ 3.4 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ಆದರೆ ಜಿಲ್ಲೆಯಲ್ಲಿ ಸತತ ಮೂರು ತಿಂಗಳಿನಿಂದಲೂ ಕೂಡ ವಾಡಿಕೆ ಮಳೆಗಿಂತ ಕಡಿಮೆ ಮಳೆ ಆಗಿರುವ ಪರಿಣಾಮ ಜಿಲ್ಲಾದ್ಯಂತ ಬಿತ್ತನೆ ಪ್ರಮಾಣ ಕುಸಿದಿದೆ. ಹೀಗಾಗಿ ರೈತರ ಹೊಲ ಗದ್ದೆಗಳಲ್ಲಿ ರೈತರಿಗೆ ಸುಲಭವಾಗಿ ಕೈಗೆಟುಕುತ್ತಿದ್ದ ಹಸಿರು ಮೇವು ಈಗ ರೈತರ ಪಾಲಿಗೆ ಗಗನ ಕುಸುಮವಾಗಿದ್ದು, ಹಸಿರು ಮೇವಿನ ಕೊರತೆ ಈಗ ಹಾಲು ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ. ಹಸಿರು ಮೇವು ಹಾಕಿದಷ್ಟು ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ. ಸದ್ಯಕ್ಕೆ ಮಳೆ ಇಲ್ಲದೇ ಇರುವ ಬೆಳೆಗಳು ಒಣಗುತ್ತಿದ್ದು, ರೈತರಿಗೆ ಮೇವಿನ ಸಂಕಷ್ಟ ಎದುರಾಗಿದೆ.
ಪಶು ಆಹಾರ ಬೆಲೆ ಏರಿಕೆ: ಹೈನೋದ್ಯಮದಲ್ಲಿ ತೊಡಗಿರುವ ರೈತರಿಗೆ ಒಂದಡೆ ಹಸಿರು ಮೇವಿನ ಕೊರತೆ ಆದರೆ ಮತ್ತೂಂದು ಕಡೆ ಪಶು ಆಹಾರ ಬೆಲೆ ಕೂಡ ವಿಪರೀತವಾಗಿ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದ್ದು ಆರ್ಥಿಕವಾಗಿ ಕೈ ಸುಟ್ಟುಕೊಳ್ಳುವಂತಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಸಿಗುವ ಹಸಿರು ಮೇವಿನಿಂದ ರೈತರು ಪಶು ಆಹಾರ ಬಳಸುವುದು ಕಡಿಮೆ. ಮಳೆ ಇಲ್ಲದೇ ಬರದಿಂದಾಗಿ ಹಸಿರು ಮೇವು ಸಿಗುವುದು ಅಪರೂಪವಾಗಿರುವುದರಿಂದ ರೈತರು ಮಳೆಗಾಲದಲ್ಲೂ ದುಬಾರಿ ಬೆಲೆ ಕೊಟ್ಟು ಪಶು ಆಹಾರ ಖರೀದಿಸಬೇಕಿದೆ.
3.52 ಲಕ್ಷ ಮೆಟ್ರಿಕ್ ಟನ್ ಮೇವು ಲಭ್ಯ:
ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಬರೋಬ್ಬರಿ 3,52,382 ಮೆಟ್ರಿಕ್ ಟನ್‌ಷ್ಟು ಮೇವು ಲಭ್ಯವಿದೆ. ಸರಾಸರಿ 27 ವಾರಗಳಿಗೆ ಸಾಕಾಗುತ್ತದೆಯೆಂದು ಇಲಾಖೆ ಅಧಿಕಾರಿಗಳು ಹೇಳಿದರೂ ಜಿಲ್ಲೆಯಲ್ಲಿ ಹಸಿರು ಮೇವಿನ ಕೊರತೆ ಇದ್ದೇ ಇದೆ. ರೈತರ ಬಳಿ ದಾಸ್ತಾನು ಇರುವುದು ಒಣ ಹುಲ್ಲು ಮಾತ್ರ. ಆದರೆ ಹೈನುಗಾರಿಕೆಯಲ್ಲಿ ಸಾಕುತ್ತಿರುವ ಜಾನುವಾರುಗಳಿಗೆ ಹಸಿರು ಮೇವು ಹಾಕಲೇಬೇಕು. ಆದರೆ ಮಳೆ ಕೊರತೆಯಿಂದ ಜಿಲ್ಲಾದ್ಯಂತ ಹಸಿರು ಮೇವುಗಾಗಿ ರೈತರು ಇನ್ನಿಲ್ಲದ ಕಸರತ್ತು ನಡೆಸಬೇಕಿದೆ.
ಸದ್ಯಕ್ಕೆ ಮೇವಿಗೆ ಎಲ್ಲೂ ಕೊರತೆ ಇಲ್ಲ ಜಿಲ್ಲೆಯಲ್ಲಿ ಎರಡು ವರ್ಷದಿಂದ ಉತ್ತಮ ಮಳೆ ಆಗಿದೆ. ಸದ್ಯಕ್ಕೆ ಎಲ್ಲೂ ಮೇವಿನ ಕೊರತೆ ಜಾನುವಾರುಗಳಿಗೆ ಇಲ್ಲ. ಕುಡಿಯುವ ನೀರಿನ ಸಮಸ್ಯೆಯು ಇಲ್ಲ. ಮಳೆ ಇದೇ ರೀತಿ ಕೈ ಕೊಟ್ಟರೆ ಮುಂದಿನ 3 ತಿಂಗಳ ಬಳಿಕ ನಮಗೆ ಮೇವಿನ ಸಮಸ್ಯೆ ಉಲ್ಬಣಿಸುತ್ತದೆ.
-ಡಾ.ರವಿ, ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆ,
-ಕಾಗತಿ ನಾಗರಾಜಪ್ಪ