Advertisement

ರೈತರ ಒತ್ತಾಯಕ್ಕೆ ಮನ್ನಣೆ: ನಾಲೆಗೆ ಹರಿದ ನೀರು

04:10 PM Jun 15, 2023 | Team Udayavani |

ಪಾಂಡವಪುರ: ಜಿಲ್ಲೆಯಲ್ಲಿ ನೀರಿಲ್ಲದೆ ಒಣಗುತ್ತಿರುವ ಭತ್ತ, ಕಬ್ಬಿನ ಬೆಳೆ ರಕ್ಷಣೆಗಾಗಿ ಜಿಲ್ಲೆಯ ರೈತರ ಒತ್ತಾ ಯದ ಮೇರೆಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೊನೆಗೂ ನಾಲೆಗಳಿಗೆ ನೀರು ಹರಿಸಿದ್ದಾರೆ.

Advertisement

1812 ಕ್ಯೂಸೆಕ್‌ ಬಿಡುಗಡೆ: ಮಂಗಳವಾರ ರಾತ್ರಿಯಿಂದ ಜಲಾಶಯದಿಂದ ವಿ.ಸಿ.ನಾಲೆಗೆ 1762 ಕ್ಯೂಸೆಕ್‌, ಸಿಡಿಎಸ್‌ ನಾಲೆಗೆ 50 ಕ್ಯೂಸೆಕ್‌ ಹಾಗೂ ಕಾವೇರಿ ನದಿಗೆ 466 ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 82.82 ಅಡಿ ನೀರಿದ್ದು, ಒಳಹರಿವು 644 ಕ್ಯೂಸೆಕ್‌ ಇದೆ. 12.085 ಟಿಎಂಸಿ ನೀರು ಸಂಗ್ರಹವಾಗಿದೆ.

ಒಣಗಿದ್ದ ಕಬ್ಬು, ಭತ್ತ ಬೆಳೆ: ಕಳೆದ ಹಲವು ದಿನಗಳಿಂದ ರೈತರು ಬೆಳೆ ಉಳಿಸಿಕೊಳ್ಳಲು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿತ್ತು. ಮಂಡ್ಯ ಜಿಲ್ಲೆಯ ಪಾಂಡವಪುರ, ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ ತಾಲೂಕಿನಲ್ಲಿ ರೈತರು ಬೆಳೆದಿರುವ ಭತ್ತ ಹಾಗೂ ಕಬ್ಬಿನ ಬೆಳೆ ಸಂಪೂರ್ಣವಾಗಿ ಒಣಗಿ ಹೋಗುತ್ತಿದ್ದವು.

ನಾಲೆಗೆ ನೀರು: ಭತ್ತದ ಬೆಳೆಯಂತೂ ಒಣಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಇದರಿಂದ ರೊಚ್ಚಿಗೆದ್ದ ರೈತರು ನಾಲೆಗೆ ನೀರು ಹರಿಸುವಂತೆ ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ನಿಗಮಕ್ಕೆ ಮನವಿ ಮಾಡಿತ್ತು. ಅದರಂತೆ ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ನಿಗಮ ವಿಸಿ ಹಾಗೂ ಸಿಡಿಎಸ್‌ ನಾಲೆಗೆ ನೀರು ಹರಿಸುತ್ತಿದ್ದಾರೆ.

ಚಳವಳಿ ನಡೆಸಲು ಮುಂದಾಗಿದ್ದ ರೈತರು: ನಾಲೆಗೆ ನೀರು ಹರಿಸುವಂತೆ ಈಗಾಗಲೇ ಜಿಲ್ಲಾದ್ಯಂತ ರೈತರು ಹಾಗೂ ರೈತ ಸಂಘಟನೆಗಳು ಚಳವಳಿ ನಡೆಸಲು ಕಾರ್ಯಕ್ರಮ ರೂಪಿಸಿಕೊಳ್ಳುತ್ತಿದ್ದವು. ಅಲ್ಲದೆ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ಕೂಡ ಇತ್ತೀಚೆಗೆ ನಡೆದ ಮಾಧ್ಯಮ ಸಂವಾದದಲ್ಲಿ ನೀರಾವರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಂಗಳವಾರ ನಾಲೆಗೆ ನೀರು ಹರಿಸುವುದಾಗಿ ಹೇಳಿದ್ದರು. ಅದರಂತೆ ಅಧಿಕಾರಿಗಳು ಇರುವ ಬೆಳೆಗಳ ರಕ್ಷಣೆ ಮಾಡಿಕೊಳ್ಳಲು ಕೊನೆಯ ಕಟ್ಟಿನ ನೀರು ಹರಿಬಿಡುವ ಮೂಲಕ ರೈತರ ಬೆಳೆ ರಕ್ಷಣೆ ಮಾಡಲು ಮುಂದಾಗಿದ್ದಾರೆ.

Advertisement

ಕೆಆರ್‌ಎಸ್‌ ಒಡಲು ಬರಿದಾಗುವ ಭೀತಿ: ಜಲಾಶಯದಲ್ಲಿ ಕಡಿಮೆ ನೀರು ಸಂಗ್ರಹವಾಗಿದೆ. ಮಳೆ ಬರದಿದ್ದರೆ ಕುಡಿಯುವ ನೀರಿಗೂ ತಾತ್ವಾರ ಎದುರಾಗಲಿದೆ. ಇರುವ 12 ಟಿಎಂಸಿ ನೀರಿನಲ್ಲಿ 5 ಟಿಎಂಸಿ ನೀರು ಬಳಸಿಕೊಳ್ಳಲು ಯೋಗ್ಯವಾಗಿದೆ. ಇನ್ನುಳಿದ ನೀರು ಡೆಡ್‌ ಸ್ಟೋರೇಜ್‌ ಆಗಿದೆ. ಮಳೆ ಬರದೆ ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಕೆಆರ್‌ ಎಸ್‌ ಒಡಲು ಬರಿದಾಗುವ ಸಾಧ್ಯತೆ ಇದೆ. ಇದು ರೈತರ ಆತಂಕಕ್ಕೂ ಕಾರಣವಾಗಿದೆ.

ಬೀಳದ ಮುಂಗಾರು ಮಳೆ: ಜಿಲ್ಲೆಗೆ ಜೂನ್‌ 15 ಕಳೆಯುತ್ತಾ ಬಂದರೂ ಮುಂಗಾರು ಮಳೆ ಪ್ರವೇಶ ಮಾಡಿಲ್ಲ. ಇದರಿಂದ ರೈತರು ಹೈರಾಣರಾಗುವಂತೆ ಮಾಡಿದೆ. ಅಲ್ಲದೆ, ಬಿತ್ತನೆಯಲ್ಲೂ ಕುಂಠಿತವಾಗುವ ಸಾಧ್ಯತೆ ಇದೆ. ಕೆಲವು ಕಡೆ ಮಳೆ ಬಂದರೂ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ.

ಆದರೆ, ರೈತರ ಬೆಳೆ ಉಳಿಸಿಕೊಳ್ಳಲು ಹಾಗೂ ಬಿತ್ತನೆಗೆ ಅನುಕೂಲವಾಗುವ ಮಳೆ ಮಾತ್ರ ಸುರಿದಿಲ್ಲ. ಮಳೆಗಾಗಿ ರೈತ ಆಕಾಶ ನೋಡುತ್ತಾ ಕಾಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಳೆ ಉಳಿಸಲು ನೀರು ಹರಿಸುವುದು ಅನಿವಾರ್ಯ : ಕೃಷ್ಣರಾಜಸಾಗರ ಜಲಾಶಯದಲ್ಲಿ ಕಡಿಮೆ ನೀರಿದೆ. ಆದರೆ ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ನೀರು ಹರಿಸಲಾಗಿದೆ ಎಂದು ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು. ಡ್ಯಾಂನಲ್ಲಿ ನೀರು ಬಹಳ ಕಡಿಮೆ ಇದೆ. ಅನಿರ್ವಾಯವಾಗಿ ಡ್ಯಾಂನಿಂದ ನಾಲೆಗೆ ನೀರು ಬಿಡಬೇಕಾಗಿತ್ತು. ಆದ್ದರಿಂದ ನಿನ್ನೆ ರಾತ್ರಿಯಿಂದ ಬಿಟ್ಟಿದ್ದೇವೆ. ಇನ್ನೂ ಮೂರ್ನಾಲ್ಕು ಟಿಎಂಸಿ ಮಾತ್ರ ಬಳಸಿಕೊಳ್ಳಬಹುದಾಗಿದೆ. ದೇವರಲ್ಲಿ ಪ್ರಾರ್ಥಿಸಿಕೊಳ್ಳುವುದಷ್ಟೇ ನಮಗೆ ಶಕ್ತಿ ಇರುವುದು. ಎರಡು ಮೂರು ದಿವಸದಲ್ಲಿ ದೇವರು ಕರುಣೆ ತೋರಿಸಿ ಮಳೆ ಬಂದರೆ ಮಾತ್ರ ನಾವು ನೀವೆಲ್ಲ ನೆಮ್ಮದಿಯಾಗಿ ಇರಬಹುದು ಎಂದರು.

ಕ್ಷೇತ್ರಕ್ಕೆ ಮರಳದ ಶಾಸಕ : ಪಾಂಡವಪುರ ತಾಲೂಕಿನಲ್ಲಿ ಬೆಳೆಗಳು ಒಣಗು ತ್ತಿದ್ದು, ನೀರು ಬಿಡುಗಡೆ ಮಾಡುವಂತೆ ಹಲವು ದಿನಗಳಿಂದ ರೈತರು ಹಾಗೂ ರೈತ ಸಂಘಟನೆಗಳ ಮುಖಂಡರು ಹೋರಾಟ ಮಾಡುತ್ತಿದ್ದರೂ, ಶಾಸಕ ದರ್ಶನ್‌ಪುಟ್ಟಣ್ಣಯ್ಯ ಕ್ಷೇತ್ರಕ್ಕೆ ಮರಳಿಲ್ಲ. ಕಳೆದ ಮೇ 31ರಂದು ತನ್ನ ಪತ್ನಿ, ಮಕ್ಕಳನ್ನು ನೋಡಿಕೊಂಡು 10 ದಿನಗಳಲ್ಲೇ ಬರುತ್ತೇನೆ ಎಂದು ಹೇಳಿ ಅಮೆರಿಕಾಕ್ಕೆ ತೆರಳಿರುವ ದರ್ಶನ್‌ಪುಟ್ಟಣ್ಣಯ್ಯ ಜೂ.15 ಕಳೆಯುತ್ತಿದ್ದರೂ ಕ್ಷೇತ್ರಕ್ಕೆ ಬಾರದಿರುವುದು ಕ್ಷೇತ್ರದ ಜನರು ಅಸಮಾಧಾನಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next