ರಾಮನಗರ: ರೈತರ ಮತ ಭಿಕ್ಷೆ ಕೇಳುವ ರಾಜಕೀಯ ಪಕ್ಷಗಳಿಗೆ, ರೈತರ ಹಕ್ಕು ಪ್ರಣಾಳಿಕೆ ಯಾಕೆ ಕೇಳುತ್ತಿಲ್ಲ, ರಾಜ್ಯದ ರೈತರ ಸಂಕಷ್ಟಗಳಿಗೆ ಸ್ಪಂದಿಸಲು ಎಲ್ಲಾ ರೈತ ಸಂಘಟನೆಗಳ ಒಕ್ಕೂಟ ತಯಾರಿಸುವ ರೈತರ ಪ್ರಣಾಳಿಕೆಯನ್ನು ಒಪ್ಪುವ ಪಕ್ಷಕ್ಕಷ್ಟೇ ತಮ್ಮ ಬೆಂಬಲ ವ್ಯಕ್ತಪಡಿಸುತ್ತೇವೆ. ಈಗಾಗಲೇ ಜೆಡಿಎಸ್ ಕಾಂಗ್ರೆಸ್ ಮತ್ತು ಎಎಪಿ ಪಕ್ಷಗಳು ಮುಖಾಮುಖಿ ಚರ್ಚೆ ನಡೆಸಿದ್ದು, ಮೊದಲಿಗೆ ಬಿಜೆಪಿ ನಿರಾಸಕ್ತಿ ತೋರಿ ರೈತರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಈಗ ಒಲವು ತೋರಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಪ್ರಣಾಳಿಕೆ ಕುರಿತು ಮುಖಾಮುಖೀ ಚರ್ಚೆಯಲ್ಲಿ ಕಾಂಗ್ರೆಸ್ ಪಕ್ಷ, ಜೆಡಿಎಸ್, ಆಮ್ ಆದ್ಮಿ ಪಕ್ಷ, ಪರಿಶೀಲಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಭೆಗೆ ಬಿಜೆಪಿ ಪಕ್ಷದವರು ಗೈರಾಗಿ ರೈತರನ್ನು ನಿರ್ಲಕ್ಷ್ಯ ಭಾವನೆಯಿಂದ ಕಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಂದ ನಂತರ ಎಚ್ಚೆತ್ತ ಬಿಜೆಪಿಯವರು ಕೇಂದ್ರ ಸಚಿವ ಭಗವಂತ ಖೂಬಾ ಅವರ ಮೂಲಕ ರೈತರ ಪ್ರಣಾಳಿಕೆ ಪಡೆದು ಈ ಬಗ್ಗೆ ಪಕ್ಷದ ವರಿಷ್ಠರಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ ಎಂದರು.
ಸುಳ್ಳು-ಪೊಳ್ಳು ಭರವಸೆಗಳನ್ನು ಕೊಡುವುದಿಲ್ಲ ಎನ್ನುವ ರಾಜಕೀಯ ಪಕ್ಷಗಳು ಬಹಿರಂಗವಾಗಿ ಯಾಕೆ ರೈತ ಪ್ರಣಾಣಿಕೆ ಬಗ್ಗೆ ಬದ್ಧತೆ ತೋರುತ್ತಿಲ್ಲ. ರೈತ ಪ್ರಣಾಳಿಕೆ ಬಗ್ಗೆ ರಾಜ್ಯದ ರೈತರು ಹಳ್ಳಿ-ಹಳ್ಳಿಗಳಲ್ಲಿ ರಾಜಕೀಯ ಪಕ್ಷಗಳಿಗೆ ಪ್ರಶ್ನೆ ಮಾಡಬೇಕು. ಬಹಿರಂಗವಾಗಿ ಅವರಿಂದ ಹೇಳಿಕೆ ಪಡೆಯಬೇಕು. ಆಗ ರೈತರ ಶಕ್ತಿ, ರಾಜಕೀಯ ಪಕ್ಷಗಳಿಗೆ ತಿಳಿಯುತ್ತದೆ ಎಂದರು.
ರೈತರು ಮನಸ್ಸು ಮಾಡಿದರೆ ಸರ್ಕಾರ ಬುಡಮೇಲು: ಒಂದು ಓಟಿನಿಂದ ಸೋತಿ ರುವುದು, ಕಡಿಮೆ ಅಂತರದ ಓಟುಗಳಿಂದ 30-40 ಎಂಎಲ್ ಎಗಳು ಪರಾಜಿತರಾಗಿ ಸರ್ಕಾರ ರಚನೆ ಮಾಡದಂತಹ ಸ್ಥಿತಿ ನಿರ್ಮಾಣವಾಗಿರುವುದನ್ನು ಕಂಡಿದ್ದೇವೆ ಎಂಬುದನ್ನು ರಾಜಕೀಯ ಪಕ್ಷಗಳು ಮರೆಯಬಾರದು. ರಾಜ್ಯದ ರೈತರು ಮನಸ್ಸು ಮಾಡಿದರೆ ಸರ್ಕಾರಗಳನ್ನು ಬುಡಮೇಲು ಮಾಡುತ್ತವೆ. ಈ ಬಾರಿ ರೈತರ ನಿರ್ಧಾರ ಜಾರಿ ಮಾಡುತ್ತೇವೆ. ರೈತರು ಯಾರ ಗುಲಾಮರು ಅಲ್ಲ, ದೇಶದ ಅನ್ನದಾತರು. ಇನ್ನು 10 ದಿನಗಳು ಕಾದು ನೋಡುತ್ತೇವೆ. ರೈತ ಪ್ರಣಾಳಿಕೆ ಬಗ್ಗೆ ಯಾವುದೇ ಪಕ್ಷದಿಂದ ಬದ್ಧತೆ ಸ್ಪಷ್ಟ ನಿರ್ಧಾರ ಹೊರಬೀಳದಿದ್ದರೆ, ರಾಜ್ಯದ ರೈತರು ಹಳ್ಳಿ ಹಳ್ಳಿಗಳಲ್ಲಿ ರಾಜಕೀಯ ಪಕ್ಷಗಳನ್ನು ಪ್ರಶ್ನೆ ಮಾಡುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಎಚ್ಚರಿಸಿದರು.
ರೈತರ ಪ್ರಣಾಳಿಕೆಯಲ್ಲಿ ಏನೇನಿದೆ: ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವ ಶಾಸನ ಜಾರಿಯಾಗಬೇಕು. ಡಾ. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಸರ್ಕಾರಿ ನೌಕರರಿಗೆ, ಎಂಎಲ್‌ಎ, ಮಂತ್ರಿಗಳಿಗೆ ಎಲ್ಲ ವರ್ಗದವರಿಗೂ ಪ್ರತಿ ತಿಂಗಳು ಸಂಬಳ ರೂಪದಲ್ಲಿ ಕನಿಷ್ಠ ಆದಾಯ ಬರುತ್ತದೆ. ಅದೇ ರೀತಿ ದಿನದಲ್ಲಿ ಹಗಲು-ರಾತ್ರಿ ದುಡಿಯುವ ರೈತರಿಗೆ ಕನಿಷ್ಠ ಆದಾಯ ಖಾತರಿ ಭದ್ರತೆ ಯೋಜನೆ ಜಾರಿಗೆ ಬರಬೇಕು. ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಕು. ಅಗತ್ಯ ಸಂದರ್ಭಗಳಲ್ಲಿ ರೈತರ ಅನುಮತಿ ಪಡೆಯಬೇಕು. ಅಂತಹ ರೈತರಿಗೆ ಜೀವನ ಭದ್ರತೆ ರೂಪಿಸಬೇಕು. 60 ವರ್ಷ ತುಂಬಿದ ರೈತರಿಗೆ ತಿಂಗಳಿಗೆ ಕನಿಷ್ಠ 5000 ಪಿಂಚಣಿ ಯೋಜನೆ ಜಾರಿಗೆ ತರಬೇಕು. ರೈತರ ರೇಷ್ಮೆ ಗೂಡು ಖರೀದಿಗೆ ಕನಿಷ್ಠ ಖಾತರಿ ಬೆಂಬಲ ಬೆಲೆ ನಿಗದಿ ಪಡಿಸಬೇಕು ಹಾಗೂ ಮತ್ತಿತರ ಬೇಡಿಕೆಗಳು ಪ್ರಣಾಳಿಕೆಯಲ್ಲಿ ಇವೆ ಎಂದು ತಿಳಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎಂ.ಡಿ. ಶಿವಕುಮಾರ್, ಗಜೇಂದ್ರ ಸಿಂಗ್, ಶ್ರೀನಿವಾಸ್, ದೇವರಾಜು, ರೈತ ಮುಖಂಡ ಹೊನ್ನೇಗೌಡ ಹಾಗೂ ಇತರರು ಇದ್ದರು.