ಕೋಲಾರ: ಟೊಮೆಟೋ ಕ್ಯಾಪ್ಸಿಕಂಗೆ ಬಾದಿಸುತ್ತಿರುವ ರೋಗ ನಿಯಂತ್ರಣಕ್ಕೆ ಗುಣಮಟ್ಟದ ಔಷಧ ವಿತರಣೆ ಮಾಡಿ ನಕಲಿ ಬೀಜ ಕಂಪನಿಗಳ ನಿಯಂತ್ರಣಕ್ಕೆ ಕಾನೂನು ರಚನೆ ಮಾಡಬೇಕೆಂದು ರೈತಸಂಘದಿಂದ ತೋಟಗಾರಿಕೆ ಇಲಾಖೆ ಕಚೇರಿಯೆದುರು ನಷ್ಟ ಬೆಳೆ ಸಮೇತ ಹೋರಾಟ ಮಾಡಿ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ದುಬಾರಿಯಾಗಿರುವ ಕೃಷಿ ಕ್ಷೇತ್ರದಲ್ಲಿ ಲಕ್ಷಾಂತರ ರೂ. ಬಂಡವಾಳ ಹಾಕಿ ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ಅತಿವೃಷ್ಟಿ ಅನಾವೃಷ್ಟಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಒಂದು ಕಡೆಯಾದರೆ ಮತ್ತೂಂದೆಡೆ ಮುಂಗಾರು ಮಳೆ ಆರ್ಭಟಕ್ಕೆ ತೇವಾಂಶ ಹೆಚ್ಚಾಗಿ ಟೊಮೆಟೋ, ಕ್ಯಾಪ್ಸಿಕಂ ಮತ್ತಿತರ ವಾಣಿಜ್ಯ ಬೆಳೆಗಳಿಗೆ ಬಾಧಿಸುತ್ತಿರುವ ಚುಕ್ಕಿರೋಗ, ಅಂಗಮಾರಿ, ಊಜಿ ನಿಯಂತ್ರಣಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿ ಸಿಂಪಡಿಸುವ ಔಷಧಿಗಳಿಂದ ರೋಗ ನಿಯಂತ್ರಣಕ್ಕೆ ಬಾರದೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದರೂ ಬೆಳೆ ನಾಶದಿಂದ ರೈತರು ಬೀದಿಗೆ ಬೀಳುತ್ತಿದ್ದಾರೆ ಎಂದು ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಆರೋಪಿಸಿದರು.
ಕಳಪೆ ಔಷಧ: ಬಹುರಾಷ್ಟ್ರೀಯ ಔಷಧ ಕಂಪನಿಗಳು ವಿತರಣೆ ಮಾಡುತ್ತಿರುವ ಔಷಧಿಗಳ ಗುಣಮಟ್ಟ ಸಂಪೂರ್ಣವಾಗಿ ಕಳಪೆಯಾಗಿದೆ. 10 ರೂ. ಸೊಳ್ಳೆ ಬತ್ತಿ ಮನೆಯ ಸೊಳ್ಳೆಯನ್ನು ಸಾಯಿಸುತ್ತದೆ. ಆದರೆ, ಲಕ್ಷಾಂತರ ರೂ. ನೀಡಿ ಖರೀದಿ ಮಾಡುವ ಔಷಧಿಗಳಿಂದ ರೋಗ ನಿಯಂತ್ರಣಕ್ಕೆ ಬಾರದೆ ರೈತನ ಆರೋಗ್ಯ ಹದಗೆಡುತ್ತದೆ. ಅಧಿಕಾರಿಗಳು ಕಂಪನಿಗಳ ಜೊತೆ ಶಾಮೀಲಾಗಿ ರೈತರ ಹಣೆಬರಹ ತಿದ್ದುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಗದ ಬೆಳೆ ವಿಮಾ ಪರಿಹಾರ: ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಕಟ್ಟ ಕಡೆಯ ರೈತರಿಗೆ ಸಿಗುತ್ತಿಲ್ಲ. ಮಳೆಯಾಧಾರಿತ ಬೆಳೆಗಳಿಗೆ ಮಾತ್ರ ಬೆಳೆ ವಿಮೆ ಸೀಮಿತವಾಗಿದ್ದು, ಲಕ್ಷಾಂತರ ಬಂಡವಾಳ ಹಾಕುವ ವಾಣಿಜ್ಯ ಬೆಳೆಗಳಾದ ಟೊಮೆಟೋ, ಕ್ಯಾಪ್ಸಿಕಂ ಮತ್ತಿತರರ ಬೆಳೆಗಳಿಗೆ ವಿಮೆ ಎಂಬುದು ಮರೀಚಿಕೆಯಾಗಿದೆ. ಪ್ರತಿಯೊಂದು ಬೆಳೆಗೂ ವಿಮಾ ಕಂಪನಿ ಪರಿಹಾರ ನೀಡುವ ಕಾನೂನು ಜಾರಿಯಾಗಬೇಕು. ಬೆಳೆ ಪರಿಶೀಲಿಸಲು ವಿಶೇಷ ತಂಡ ರಚನೆ ಮಾಡಬೇಕು. ಎಕರೆ ತಲಾ 5 ಲಕ್ಷ ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ನಿರ್ದೇಶಕರು ರವಿಕುಮಾರ್ ಮುಂಗಾರು ಮಳೆ ಹೆಚ್ಚಾಗಿರುವುದರಿಂದ ತೇವಾಂಶದ ನಿಯಂತ್ರಣವಿಲ್ಲದೆ ಟೊಮೆಟೋ ಮತ್ತಿತರ ಬೆಳೆಗಳಿಗೆ ರೋಗ ಬಾಧಿಸುತ್ತಿದೆ. ಸರ್ಕಾರಕ್ಕೆ ವರದಿ ನೀಡಿ ರೈತರ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗವಾದಿ ನಾಗರಾಜ್ ಗೌಡ, ವಿಭಾಗೀಯ ಕಾರ್ಯಾಧ್ಯಕ್ಷ ಫಾರೂಖ್ ಪಾಷ, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಶ್ರೀನಿವಾಸಪುರ ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ನಳಿನಿ.ವಿ, ಇರ್ಫಾತ್ ತಾರಾ, ಮಂಗಸಂದ್ರ ತಿಮ್ಮಣ್ಣ, ಕುವ್ವಣ್ಣ, ವೆಂಕಟೇಶಪ್ಪ, ಗೋವಿಂದಪ್ಪ, ನಾರಾಯಣಗೌಡ, ಹರೀಶ್, ಮರಗಲ್ ಮುನಿಯಪ್ಪ, ವಿಶ್ವ, ಭಾಸ್ಕರ್, ಬಂಗಾರಿ ಮಂಜು, ರಾಜೇಶ್, ಗಿರೀಶ್, ಚಂದ್ರಪ್ಪ ಇತರರಿದ್ದರು.