ಚನ್ನರಾಯಪಟ್ಟಣ/ಹಾಸನ: ಚನ್ನರಾಯಪಟ್ಟಣ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಎಲೆಕೋಸು ಬೆಳೆದಿರುವ ರೈತರು ದರ ಕುಸಿತದಿಂದ ಕಂಗಾಲಾಗಿದ್ದಾರೆ. ಕೂಲಿಯ ಖರ್ಚೂ ಸಿಗದ ಕಾರಣಕ್ಕೆ ಹುಲುಸಾಗಿ ಬೆಳೆದ ಬೆಳೆಯನ್ನು ಹೊಲದಲ್ಲೇ ಕುರಿ, ದನಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ.
ಹಾಸನ ತಾಲೂಕಿನ ತೇಜೂರು, ಬಸವಘಟ್ಟ, ಹೊನ್ನವರ ಸೇರಿದಂತೆ ಅರಸೀಕೆರೆ ತಾಲೂಕಿನ ಹಲವು ಗ್ರಾಮಗಳು, ಚನ್ನರಾಯಣಪಟ್ಟಣ ತಾಲೂಕಿನ ದಂಡಿಗನಹಳ್ಳಿ, ಹೆಜ್ಜಗಾರನಹಳ್ಳಿ ಇತರೆ ಗ್ರಾಮಗಳಲ್ಲಿ ಎಲೆಕೋಸು ಬೆಳೆದಿರುವ ರೈತರು ಬೆಲೆ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೆಜ್ಜಗಾರನಹಳ್ಳಿ ರೈತ ನಾಗರಾಜು, ತಮ್ಮ ಒಂದೂವರೆ ಎಕರೆ ಕೃಷಿ ಭೂಮಿಯಲ್ಲಿ 50 ಸಾವಿರ ರೂ. ವೆಚ್ಚ ಮಾಡಿ ಎಲೆ ಕೋಸು ಬೆಳೆದಿದ್ದರು. ಒಂದೂವರೆ ಎಕರೆಯಿಂದ 30 ಟನ್ ಎಲೆಕೋಸು ಕಟಾವಿಗೆ ಬಂದಿತ್ತು. ಆದರೆ, ಮಾರುಕಟ್ಟೆಯಲ್ಲಿ ಪ್ರತಿ ಕಿಲೋ ಎಲೆಕೋಸು ಮೂರ ರಿಂದ ನಾಲ್ಕು ರೂ. ಇದೆ. ಇನ್ನು ಕೃಷಿ ಭೂಮಿ ಬಳಿಗೆ ಬಂದು ಎಲೆಕೋಸು ಪಡೆಯುವ ವರ್ತಕರು ಎರಡು ರೂ.ಗೆ ಕೇಳುತ್ತಿದ್ದಾರೆ. ತಾವೇ ಮಾರುಕಟ್ಟೆಗೆ ಎಲೆಕೋಸು ತೆಗೆದುಕೊಂಡು ಹೋಗಿ ಮಾರಾಟ ಮಾಡಿದರೆ ವಾಹನ ಬಾಡಿಗೆ, ಕೋಯ್ಲು ಮಾಡಿದ ಕಾರ್ಮಿಕರ ಕೂಲಿಯೂ ಹುಟ್ಟುವುದಿಲ್ಲ, ಇನ್ನು ಜಮೀನಿನ ಬಳಿಯೇ ಬರುವ ವರ್ತಕರು ಕಡಿಮೆ ಬೆಲೆಗೆ ಕೇಳುತ್ತಾರೆ. ಅದರಿಂದಕೋಸು ಬೆಳೆಯಲು ತಗುಲಿದ್ದ ವೆಚ್ಚದ ಅರ್ಧದಷ್ಟೂ ಕೈ ಸೇರುತ್ತಿಲ್ಲ. ಹೀಗಾಗಿ ಅನ್ಯ ಮಾರ್ಗ ಕಾಣದೇ, ಬೆಳೆ ಸಮೇತ ಉಳುಮೆ ಮಾಡುವ ಬದಲು ಕುರಿ, ದನಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ.
ಇದು ಕೇವಲ ದಂಡಿಗನಹಳ್ಳಿ ಹೋಬಳಿಯ ಗೆಜ್ಜಗಾರನಹಳ್ಳಿ ರೈತ ನಾಗರಾಜು ಅವರ ಸಮಸ್ಯೆಯಲ್ಲ, ಜಿಲ್ಲೆಯಲ್ಲಿ ಕೋಸು ಬೆಳೆದಿರುವ ಅನೇಕ ಮಂದಿಯ ಸಮಸ್ಯೆಯೂ ಆಗಿದೆ. ಇದರಲ್ಲಿ ಕೆಲವರು ಕೋಸು ಸಮೇತ ಟ್ರ್ಯಾಕರ್ r ನಿಂದ ಉಳುವೆಮಾಡಿಸುತ್ತಿದ್ದಾರೆ. ಇನ್ನು ಹಲವು ಮಂದಿ ಅರ್ಧದಷ್ಟು ಹಣವಾದರೂ ಕೈ ಸೇರುತ್ತಿದೆ ಎಂದು ಮಾರಾಟಕ್ಕೆ ಮುಂದಾಗುತ್ತಿದ್ದಾರೆ.
ವಲಸೆ ಕುರಿಗಳಿಗೆ ಭರ್ಜರಿ ಮೇವು: ಮೇಲುಕುಂಟೆ ಗ್ರಾಪಂ ವ್ಯಾಪ್ತಿಯ ತೊಗರಗುಂಟೆ ಗೊಲ್ಲರಹಟ್ಟಿ, ಗೊಲ್ಲಹಳ್ಳಿ, ಉಗನೇಕಟ ಸೇರಿದಂತೆ ವಿವಿಧೆಡೆಗಳಿಂದ ಹಾಸನ, ಚನ್ನರಾಯಪಟ್ಟಣ, ಹೊಳೆನರಸೀಪುರ, ಅರಸೀಕೆರೆ ತಾಲೂಕಿಗೆ ವಲಸೆ ಬಂದಿರುವ ಕುರಿಗಳಿಗೆ ಈಗ ಎಲೆಕೋಸೇ ಆಹಾರ. ಎಕರೆಗೆ 4 ಸಾವಿರ ರೂ.: ಬೆಲೆ ಇಲ್ಲದೆ ಜಮೀನಿನಲ್ಲೇ ಪಾಳು ಬಿಟ್ಟಿರುವ ಎಲೆಕೋಸನ್ನು ಎಕರೆಗೆ 4 ರಿಂದ 10 ಸಾವಿರ ರೂ.ನಂತೆ ಖರೀದಿಸುವ ಕುರಿಗಾಹಿಗಳು ಜಮೀನಿಗೇ ಕುರಿಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ.
ಹಣ ಕಡಿಮೆ ಆದ್ರೂ ಕುರಿಗಳು ಜಮೀನಿನಲ್ಲಿ ಮೇಯ್ಯುವುದರಿಂದ ಅಲ್ಪಸ್ವಲ್ಪ ಗೊಬ್ಬರವಾದ್ರೂ ಸಿಗುತ್ತದೆ ಎಂಬ ಕಾರಣಕ್ಕೆ ಬಂದಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿದ ತೊಗರಗುಂಟೆಯ ಕುರಿಗಾಹಿ ರಂಗಪ್ಪ, ರೈತರಿಂದ ಎಲೆಕೋಸು ಪಡೆಯುವುದರಿಂದ ನಮಗೆ ಕೋಸಿನ ಜೊತೆಗೆ ಜಮೀನಿನಲ್ಲೇ ಬೆಳೆದ ಹುಲ್ಲು ಕೂಡ ಸಿಗುತ್ತದೆ. ಇದರಿಂದ 15 ದಿನ ಕುರಿಗಳು ನೆಮ್ಮದಿಯಾಗಿ ಮೇಯ್ಯುತ್ತವೆ ಎಂದು ಹೇಳಿದರು.