ಚಿಂಚೋಳಿ: ತಾಲೂಕಿನಲ್ಲಿ ಉತ್ತಮ ಫಲವತ್ತತೆಯಿಂದ ಕೂಡಿದ ರೈತರ ಜಮೀನುಗಳ ಖರೀದಿಗೆ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರೈತರು ಲಗ್ಗೆ ಇಡುತ್ತಿದ್ದು ಅನೇಕ ಗ್ರಾಮಗಳಲ್ಲಿ ರೈತರು ತಮ್ಮ ಜಮೀನುಗಳನ್ನು ಮಧ್ಯವರ್ತಿಗಳ ಮಾತಿಗೆ ಮರುಳಾಗಿ ಅಗ್ಗದ ದರಗಳಲ್ಲಿ ಮಾರುತ್ತಿದ್ದಾರೆ ಎನ್ನಲಾಗಿದೆ.
ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಒಂದು ಎಕರೆ ಜಮೀನು ಬೆಲೆ 50 ಲಕ್ಷ ರೂ.ಗೆ ಕಡಿಮೆ ಇಲ್ಲ. ಕಾರಣ ಅಲ್ಲಿನ ರೈತರು ತಾಲೂಕಿನಲ್ಲಿ ದಿನನಿತ್ಯ ದಲ್ಲಾಳಿಗಳ ಮೂಲಕ ಪ್ರತಿ ಎಕರೆಗೆ 10ಲಕ್ಷ ರೂ. ಗಳಿಂದ 20ಲಕ್ಷ ರೂ.ವರೆಗೆ ನೀಡಿ ಜಮೀನು ಖರೀದಿಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ರೈತರು ಈ ಭಾಗದಲ್ಲಿ ಜಮೀನು ಖರೀದಿಸಿ ಹಣ್ಣು, ಹೂವು, ತರಕಾರಿ, ಮಾವಿನ ತೋಟ, ಪೇರಳೆ ಹಣ್ಣು, ತೆಂಗು, ಸಪೋಟ,ದಾಳಿಂಬೆ, ಮೋಸಂಬಿ, ದ್ರಾಕ್ಷಿ ಹಣ್ಣುಗಳ ಫಾರ್ಮ್ ಹೌಸ್ ಮಾಡುವುದಕ್ಕಾಗಿ ಜಮೀನು ಖರೀದಿಸುತ್ತಿದ್ದಾರೆ.
ತಾಲೂಕಿನ ರೈತರು ಇದೇ ರೀತಿ ಜಮೀನು ಮಾರಿದರೆ ಮುಂದೆ ಇಲ್ಲಿನ ರೈತರೇ ಕೂಲಿ ಕಾರ್ಮಿಕರಾಗಿ ದುಡಿಯುವ ಪರಿಸ್ಥಿತಿ ಬರುತ್ತದೆ ಭೀಮಾ ಮಿಶನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ಕಳವಳ ವ್ಯಕ್ತಪಡಿಸುತ್ತಾರೆ. ತಾಲೂಕಿನ ಸುಲೇಪೇಟ, ಐನೋಳಿ, ಚಿಂಚೋಳಿ, ನಿಡಗುಂದಾ, ಕೋಡ್ಲಿ, ಕನಕಪುರ, ಚಿಮ್ಮನಚೋಡ, ಕುಂಚಾವರಂ, ಐನಾಪುರ, ಗಡಿಕೇಶ್ವಾರ, ರಟಕಲ್, ಮಿರಿಯಾಣ, ದೇಗಲಮಡಿ, ನಾಗಾಇದಲಾಯಿ, ಸಾಲೇಬೀರನಳ್ಳಿ, ತುಮಕುಂಟಾ ಗ್ರಾಮಗಳಲ್ಲಿ ಆಂಧ್ರ ಮತ್ತು ತೆಲಂಗಾಣ ರಾಜ್ಯದ ರೈತರು ಜಮೀನು ಖರೀದಿಸಿದ್ದಾರೆಂದು ಹೇಳಲಾಗುತ್ತಿದೆ.
ಉಪನೋಂದಣಿ ಕಚೇರಿಯಲ್ಲಿ ಜನ ಜಂಗುಳಿ : ತಾಲೂಕಿನಲ್ಲಿ ರೈತರ ಜಮೀನುಗಳನ್ನು ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ರೈತರು ಖರೀದಿಸುತ್ತಿರುವುದರಿಂದ ಅವುಗಳು ತಮ್ಮ ಹೆಸರಿನಲ್ಲಿ ನೋಂದಾಯಿಸಲು ಉಪ ನೋಂದಣಿ ಕಚೇರಿ ಜನಜಂಗುಳಿಯಿಂದ ಕೂಡಿತ್ತು. ಆಸ್ತಿ ನೋಂದಣಿ ಮಾಡಿಕೊಳ್ಳಲು, ಜಮೀನು ಮಾರಾಟದ ದಾಖಲೆ ಸಿದ್ಧಪಡಿಸಲು ಇಲ್ಲಿನ ಕಂಪ್ಯೂಟರ್ ಕೇಂದ್ರಗಳಲ್ಲಿ ವ್ಯವಹಾರ ಜೋರಾಗಿ ನಡೆಯುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳು ಉಪನೋಂದಣಿ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಎಂಪಳ್ಳಿ, ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಒತ್ತಾಯಿಸಿದ್ದಾರೆ.
-ಶಾಮರಾವ ಚಿಂಚೋಳಿ