Advertisement
ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಈರುಳ್ಳಿ, ಶೇಂಗಾ ಬೆಳೆಗಳಿಗೆ ಕೊಳೆ ರೋಗ ಬಾಧಿಸುತ್ತಿದೆ. ಪರಿಣಾಮ ಈರುಳ್ಳಿ ಬೆಲೆ ಪಾತಾಳಕ್ಕಿಳಿದಿದೆ. ಜತೆಗೆ ಹತ್ತಿ ಅರಳುತ್ತಿರುವಾಗಲೇ ಮಳೆ ಕಾಡುತ್ತಿರುವುದರಿಂದ ಬೆಲೆ ಕುಸಿತದ ಆತಂಕ ಆವರಿಸಿದೆ. ಬಯಲು ಸೀಮೆ ಗದಗ ಜಿಲ್ಲೆಯ ಮುಂಗಾರಿನ ಪ್ರಮುಖ ಬೆಳೆಗಳಾದ ಈರುಳ್ಳಿ ಈಗಾಗಲೇ ಬೆಳೆದು ನಿಂತಿದೆ.
Related Articles
Advertisement
ನವೆಂಬರ್ ಆರಂಭದಲ್ಲಿ ಉತ್ತಮವಾಗಿ ಬಂದಿದ್ದ ಈರುಳ್ಳಿ ಗಡ್ಡೆ ಪ್ರತಿ ಕ್ವಿಂಟಲ್ 4,500 ರೂ. ವರೆಗೆ ಮಾರಾಟವಾಗಿತ್ತು. ಆದರೆ, ಈಗ ಅಕಾಲಿಕ ಮಳೆ ಹಾಗೂ ಬೇಡಿಕೆ ಕಡಿಮೆಯಾಗಿದ್ದರಿಂದ ಈರುಳ್ಳಿ ಸದ್ಯ ಸರಾಸರಿ 1200 ರೂ. ದರದಲ್ಲಿ ಮಾರಾಟವಾಗುತ್ತಿದೆ. ಅಲ್ಲದೇ, ಈಗ ಮಾರುಕಟ್ಟೆಗೆ ಆವಕವಾಗುತ್ತಿರುವ ಈರುಳ್ಳಿಯಲ್ಲಿ ತೇವಾಂಶ ಹೆಚ್ಚಿದ್ದು, ಒಂದೆರಡು ದಿನಗಳಲ್ಲಿ ಕೊಳೆಯಲು ಆರಂಭಿಸುತ್ತದೆ. ಹೀಗಾಗಿ, ದಾಸ್ತಾನು ಮಾಡಲಾಗದು ಮತ್ತು ಬೇರೆ ಜಿಲ್ಲೆಗೆ ಸಾಗಿಸುವುದರೊಳಗೆ ಬಹುತೇಕ ಕೊಳೆತು ಗಬ್ಬು ನಾರುತ್ತದೆ. ಇದರಿಂದ ಗದಗಿನ ಕೆಲ ವರ್ತಕರು ಈರುಳ್ಳಿ ವ್ಯಾಪಾರದಿಂದ ಕೈಸುಟ್ಟುಕೊಂಡಿದ್ದಾರೆ.
ಮಾರುಕಟ್ಟೆಗೆ ಆವಕವಾಗುತ್ತಿರುವ ಈರುಳ್ಳಿಯನ್ನು ಸ್ಥಳೀಯ ಮಾರುಕಟ್ಟೆಗೆ ಮಿತಿಗೊಳಿಸಲಾಗುತ್ತಿದೆ. ಈ ಬಾರಿ ಈರುಳ್ಳಿ ಬೆಳೆಯಿಂದ ರೈತರೊಂದಿಗೆ ವರ್ತಕರಿಗೂ ನಷ್ಟ ತಂದೊಡ್ಡಿದೆ ಎನ್ನುತ್ತಾರೆ ಎಪಿಎಂಸಿ ವರ್ತಕರು.
ಶೇಂಗಾ-ಹತ್ತಿ ಬೆಳೆಗಾರರ ಪರದಾಟ: ಇನ್ನು, ಶೇಂಗಾ ಬೆಳೆಗಾರರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜಿಲ್ಲೆಯಲ್ಲಿ 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಈಗಾಗಲೇ ಕಟಾವಿಗೆ ಬಂದಿದೆ. ಆದರೆ, ಅಕಾಲಿಕ ಮಳೆಯಿಂದಾಗಿ ಶೇಂಗಾ ಭೂಮಿಯಲ್ಲೇ ಕೊಳೆಯಲು ಆರಂಭಿಸಿದೆ. ಅಲ್ಲದೇ, ಕಪ್ಪು ಭೂಮಿಯಲ್ಲಿ ಶೇಂಗಾ ಕೀಳಲಾಗದೇ ರೈತರು ಪರದಾಡುವಂತಾಗಿದೆ. ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಹತ್ತಿ ಹುಲುಸಾಗಿ ಬೆಳೆದಿದ್ದರೂ, ಇತ್ತೀಚೆಗೆ ಸುರಿಯುತ್ತಿರುವ ಜಿಟಿ ಮಳೆಯಿಂದಾಗಿ ಬೆಲೆ ಕಡಿಮೆಯಾಗುವ ಆತಂಕ ಶುರುವಾಗಿದೆ ಎಂಬುದು ರೈತರ ಅಳಲು…
ಕಳೆದ ವರ್ಷದ ಈರುಳ್ಳಿ ಪ್ರತಿ ಕೆಜಿ 100 ರೂ. ಮೀರಿತ್ತು. ಈ ಬಾರಿ ಲಾಭದ ನಿರೀಕ್ಷೆಯಲ್ಲಿ ಈರುಳ್ಳಿ ಬೆಳೆದಿದ್ದೇವೆ. ಆದರೆ, ಅಕಾಲಿಕ ಮಳೆಯಿಂದ ಕೊಳೆ ರೋಗ ಬಂದು ಭಾಗಶಃ ಬೆಳೆ ಹಾನಿಯಾಗಿದೆ. ಈರುಳ್ಳಿ ಬಿತ್ತನೆಗೆ ಮಾಡಿದ ಖರ್ಚೂ ಕೈಸೇರಿಲ್ಲ. ರಮೇಶ್ ಹೂಗಾರ, ಎಸ್.ಎಂ.ಪಾಟೀಲ, ಈರುಳ್ಳಿ ಬೆಳೆಗಾರರು, ಗದಗ
ಇತ್ತೀಚಿನ ಮಳೆಗಿಂತ ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದಾಗಿ ಈರುಳ್ಳಿಗೆ ಹೆಚ್ಚು ಹಾನಿಯಾಗಿದೆ. ಒಂದು ತಿಂಗಳ ಹಿಂದೆಯೇ ಈರುಳ್ಳಿಗೆ ಕೊಳೆ ರೋಗ ಬಾಧಿಸುತ್ತಿದ್ದು, ಅದರ ನಿಯಂತ್ರಣಕ್ಕಾಗಿ ರೈತರಿಗೆ ಸಾಕಷ್ಟು ಸಲಹೆ ನೀಡಲಾಗಿತ್ತು. ಆದರೂ ಅದು ನಿಯಂತ್ರಣಕ್ಕೆ ಬಂದಿಲ್ಲ. ಮೇಲ್ನೋಟಕ್ಕೆ ಉತ್ತಮವಾಗಿ ಕಂಡು ಬಂದಿದ್ದರೂ ಗಡ್ಡೆ ಒಳಗೆ ಕೊಳೆಯುತ್ತಿರುತ್ತದೆ. ಒಟ್ಟಾರೆ, ಬಿತ್ತನೆಯಲ್ಲಿ ಶೇ.60 ರಷ್ಟು ಕಟಾವು ಆಗಿದ್ದು, ಶೇ.35 ರಷ್ಟು ಈರುಳ್ಳಿ ಬೆಳೆ ಹಾನಿಯಾಗಿದೆ. –ಶ್ರೀಶೈಲ ಬಿರಾದರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಗದಗ
-ವೀರೇಂದ್ರ ನಾಗಲದಿನ್ನಿ