ತುಮಕೂರು: ಬಯಲು ಸೀಮೆ ಪ್ರದೇಶವಾಗಿರುವ ಕಲ್ಪತರು ನಾಡು ಜಿಲ್ಲೆಯಲ್ಲಿ ತೆಂಗು ಬೆಳೆಯೇ ಪ್ರಧಾನವಾಗಿದ್ದು, ಉಳಿದಂತೆ ಅಲ್ಲಲ್ಲಿ ಅಡಕೆ ಬೆಳೆ ಬೆಳೆಯುತ್ತಿದ್ದು, ಇತ್ತೀಚೆಗೆ ತೆಂಗು ಬೆಳೆಯಲ್ಲಿ ನಷ್ಟ ಅನುಭವಿಸಿರುವ ರೈತರು ತೋಟಗಾರಿಕಾ ಬೆಳೆ ಜೊತೆಗೆ ಉಪ ಬೆಳೆ ಬೆಳೆಯಲು ಮುಂದಾಗಿ ಆರ್ಥಿಕ ಪ್ರಗತಿ ಸಾಧಿಸುತ್ತಿದ್ದಾರೆ.
ಜಿಲ್ಲೆಯ ವಿವಿಧ ಕಡೆ ಕಳೆದ ಎರಡು ವರ್ಷಗಳಿಂದ ಕೆಲ ರೈತರು ಕನಕಾಂಬರ ಹೂವು ಬೆಳೆದು ಆರ್ಥಿಕ ಪ್ರಗತಿ ಸಾಧಿಸಿದ್ದಾರೆ. ರೈತರಿಂದ ಕೊಳ್ಳಲು ಕಳೆದ ವರ್ಷ ಆಯುಧ ಪೂಜೆ, ದೀಪಾವಳಿ ಸಂದರ್ಭದಲ್ಲಿ ಕನಕಾಂಬರ ಹೂವು ಬೆಲೆ ಒಂದು ಕೆ.ಜಿ.ಗೆ 200 ರೂ.ಗಳಿಂದ 300 ರೂ.ವರೆಗೂ ಬಿಕರಿಯಾಗುತ್ತಿತ್ತು. ಈ ಬಾರಿಯೂ ಇದೇ ವೇಳೆಯಲ್ಲಿ ಸರಾಸರಿ 300 ರೂ.ವರೆಗೂ ಹಬ್ಬದಲ್ಲಿ ಮಾರಾಟ ವಾಗಿದ್ದು, ಇಂದಿಗೂ ಕನಕಾಂಬರ ಹೂವಿಗೆ ಭಾರೀ ಬೇಡಿಕೆ ಉಂಟಾಗಿದೆ. ಇದರಿಂದ ಕನಕಾಂಬರ ಬೆಳೆದಿರುವ ರೈತರ ಆರ್ಥಿಕ ಸ್ಥಿತಿಗತಿ ಸುಧಾರಿಸಿಕೊಳ್ಳಲು ಮುಂದಾಗುತ್ತಿದ್ದು, ಕಷ್ಟಪಟ್ಟು ಕನಕಾಂಬರ ಬೆಳೆದಿರುವ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
300 ರೂ.ವರೆಗೂ ಮಾರಾಟ: ತುಮಕೂರು, ಮಧುಗಿರಿ, ಕೊರಟಗೆರೆ, ಪಾವಗಡದ ಕೆಲ ಭಾಗದ ರೈತರು ಉಪ ಬೆಳೆಯಾಗಿ ಪುಷ್ಪ ಕೃಷಿಯತ್ತ ಮುಖ ಮಾಡಿದ್ದಾರೆ. ಈ ಮೂಲಕ ಆರ್ಥಿಕವಾಗಿ ಸಬಲರಾಗಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಕಳೆದ ವರ್ಷ ಕೊರೊನಾ ಸೋಂಕಿನ ನಡುವೆಯೂ ಪುಷ್ಪ ಕೃಷಿಯಲ್ಲಿ ತೊಡಗಿದ್ದರು. ಈ ಬಾರಿ ಕೊರೊನಾ ಹಾವಳಿ ಕಡಿಮೆಯಾದ ಹಿನ್ನೆಲೆ ಮಾರುಕಟ್ಟೆಯಲ್ಲಿ ಹೂವುಗಳಿಗೆ ಉತ್ತಮ ಬೇಡಿಕೆಯಿದೆ. ಜಿಲ್ಲೆಯ ಕೊರಟಗೆರೆ, ಮಧುಗಿರಿ ಹಾಗೂ ಪಾವಗಡ ತಾಲೂಕಿನ ಬಯಲುಸೀಮೆ ಪ್ರದೇಶಗಳಲ್ಲಿ ಕನಕಾಂಬರ ಹೂವು ಬೆಳೆಯುವ ರೈತರು ಹೆಚ್ಚಿನ ಆಸಕ್ತಿ ವಹಿಸಿದ್ದರು. ಮಾರುಕಟ್ಟೆಗೆ ಯಥೇತ್ಛವಾಗಿ ಹೂವು ಮಾರಾಟಕ್ಕೆ ಬರುತ್ತಿದೆ. ಈ ಬಾರಿ ಕೂಡ ಸರಾಸರಿ 300 ರೂ.ವರೆಗೂ ಮಾರಾಟವಾಗುತ್ತಿದ್ದು, ರೈತರು ತಮ್ಮ ಆರ್ಥಿಕ ಸ್ಥಿತಿಗತಿ ಸುಧಾರಿಸಿಕೊಳ್ಳಲು ಮುಂದಾಗುತ್ತಿದ್ದಾರೆ.
ಎಕರೆಗೆ 250 ಕೆ.ಜಿ. ಇಳುವರಿ: ರೈತರು ಕನಕಾಂಬರ ಹೂವುಗಳನ್ನು ತೆಂಗಿನ ತೋಟ ನಡುವೆ ಉಪ ಬೆಳೆಯಾಗಿ ಬೆಳೆಯುತ್ತಿರುವುದರಿಂದ ಹೆಚ್ಚು ಖರ್ಚು ಕೂಡ ಬರುವುದಿಲ್ಲ. ಎಕರೆಗೆ ಕನಿಷ್ಠ 30 ಸಾವಿರ ರೂ. ಖರ್ಚು ಬರುತ್ತದೆ. ಎರಡು ತಿಂಗಳ ನಂತರ ಹೂವುಗಳು ಗಿಡಗಳಲ್ಲಿ ನಳ ನಳಿಸುತ್ತವೆ. ನಂತರ ಮೂರು ದಿನಗಳಿಗೊಮ್ಮೆ ಹೂವುಗಳ ಕೊಯ್ಲು ಆರಂಭವಾಗುತ್ತದೆ. ಏನಿಲ್ಲವೆಂದರೂ ಎಕರೆಗೆ 250 ಕೆ.ಜಿ. ಹೂವು ರೈತನ ಕೈ ಸೇರುತ್ತದೆ. ಇದರಿಂದ ಆರು ತಿಂಗಳಲ್ಲಿ ರೈತನಿಗೆ ಉತ್ತಮ ಆದಾಯ ತಂದು ಕೊಡುವ ಕೃಷಿಯಾಗಿ ಕನಕಾಂಬರ ಹೂವು ರೈತನ ಕೈ ಹಿಡಿದಿದೆ ಎಂದೇ ಹೇಳುತ್ತಾರೆ ಕನಕಾಂಬರ ಬೆಳೆದು ಆರ್ಥಿಕ ಪ್ರಗತಿ ಸಾಧಿಸಿರುವ ರೈತರು.
ಉಪಬೆಳೆ ಬೆಳೆದು ಆರ್ಥಿಕ ಪ್ರಗತಿ ಸಾಧಿಸಲು ಸಲಹೆ: ರಾಜ್ಯದಲ್ಲಿಯೇ ಹೆಚ್ಚು ತೆಂಗು ಬೆಳೆಯುವ ಪ್ರದೇಶ ಎಂದೇ ಹೆಸರಾಗಿರುವ ಕಲ್ಪತರು ನಾಡಿನಲ್ಲಿ ತೆಂಗಿಗೆ ಅನೇಕ ರೋಗ ರುಜನಗಳು ಕಾಣಿಸುತ್ತಲೇ ಇದೆ. ರೈತರು ತೆಂಗಿನ ಜೊತೆ ಉಪ ಬೆಳೆಗಳಾದ ತರಕಾರಿ, ಹೂವು, ಕಾಳುಮೆಣಸು ಸೇರಿದಂತೆ ಇತರೆ ಉಪಬೆಳೆ ಬೆಳೆಯಲು ಅವಕಾಶವಿದೆ. ರೈತರು ಉಪಬೆಳೆ ಬೆಳೆಯಿರಿ ಎಂದು ತೋಟಗಾರಿಕೆ ಇಲಾಖೆ ಪ್ರೋತ್ಸಾಹ ಮಾಡುತ್ತಿದೆ.
ರೈತರು ತಮ್ಮ ಜಮೀನಿನಲ್ಲಿನ ಉಪ ಬೆಳೆ ಬೆಳೆಯುವ ವಿಚಾರವಾಗಿ ಹತ್ತಿರದ ತೋಟಗಾರಿಕಾ ಇಲಾಖೆಗೆ ಹೋಗಿ ಅಲ್ಲಿ ಸಲಹೆ ಪಡೆದು ತಾವೂ ಉಪಬೆಳೆ ಬೆಳೆದು ಆರ್ಥಿಕ ಪ್ರಗತಿ ಸಾಧಿಸಬಹುದು.
ಜಿಲ್ಲೆಯಲ್ಲಿ ತೆಂಗು ಬೆಳೆಯೇ ಪ್ರಧಾನ ಬೆಳೆಯಾಗಿದೆ. ಕೆಲವು ಬಾರಿ ತೆಂಗಿನ ಬೆಳೆಗೆ ಬೆಲೆ ಕಡಿಮೆ ಆಗುತ್ತದೆ. ಆಗ ರೈತರಿಗೆ ತೊಂದರೆ ಆಗುತ್ತದೆ. ಇಂತಹ ವೇಳೆಯಲ್ಲಿ ಉಪ ಬೆಳೆಯಾಗಿ ರೈತರು ಹೂವು, ಕಾಳುಮೆಣಸು, ತರಕಾರಿ ಬೆಳೆದು ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ರೈತರಿಗೆ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ರೈತರ ಆರ್ಥಿಕ ಪ್ರಗತಿಗೆ ಉಪ ಬೆಳೆ ಪೂರಕ
. ● ರಘು ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ
ಕಳೆದ ಬಾರಿ ಸೇವಂತಿಗೆ ಹಾಕಿದ್ದೇವು. ಪರವಾಗಿಲ್ಲ ಸ್ವಲ್ಪ ಅನುಕೂಲವಾಗಿತ್ತು. ಈ ಬಾರಿ ಕನಕಾಂಬರ ಹಾಕಿದ್ದೇವೆ ಶ್ರಾವಣ, ದಸರಾ ಹಾಗೂ ಈಗ ದೀಪಾವಳಿಯಲ್ಲಿ ಕನಕಾಂಬರ ಹೂವಿಗೆ ಭಾರೀ ಬೇಡಿಕೆ ಇದ್ದುದರಿಂದ ನಮಗೂ ಅನುಕೂಲ ಆಗಿದೆ. ಕೆ.ಜಿ. ಕನಕಾಂಬರ ಹೂವಿಗೆ 300 ರೂ.ವರೆಗೂ ಮಾರಾಟ ಮಾಡಿದ್ದೇವೆ.
● ಕುಮಾರಸ್ವಾಮಿ, ಕನಕಾಂಬರ ಬೆಳೆಗಾರ.
-ಚಿ.ನಿ.ಪುರುಷೋತ್ತಮ್.