Advertisement

ಕಾಡುಕೋಣಗಳಿಂದ ಪೈರಿಗೆ ರಕ್ಷಣೆ ನೀಡುವ ಜೀವಾಮೃತ !

12:55 AM Sep 02, 2021 | Team Udayavani |

ಉಡುಪಿ: ರೈತರಿಗೆ ಕಾಡುಪ್ರಾಣಿಗಳ ಉಪಟಳದ ಸಮಸ್ಯೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಆದರೆ ಜೀವಾಮೃತವೆಂಬ ಸಾವಯವ ಗೊಬ್ಬರವನ್ನು ಹಾಕಿದ ಗದ್ದೆಗಳ ಮೇಲೆ ಮಾತ್ರ ಕಾಡುಕೋಣಗಳು ದಾಳಿ ನಡೆಸದೆ ಇರುವುದು ನೊಂದ ಕೃಷಿಕರಿಗೆ ಆಶಾಕಿರಣವಾಗಿದೆ.

Advertisement

ಡಬ್ಲ್ಯುಡಿಸಿಯನ್ನು (ವೇಸ್ಟ್‌ ಡಿಕಂಪೋಸರ್‌) ಬಳಸಿ ಜೀವಾಮೃತ ತಯಾರಿಸುತ್ತಾರೆ. ಇದು ಜೈವಿಕ ಗೊಬ್ಬರ, ಜೈವಿಕ ನಿಯಂತ್ರಣ, ಮಣ್ಣಿನ ಗುಣವರ್ಧನೆ ಆಯಾಮದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸೂಕ್ಷ್ಮ ಜೀವಾಣುಗಳನ್ನು ಹೊಂದಿರುತ್ತದೆ. ಕೇಂದ್ರ ಕೃಷಿ ಮಂತ್ರಾಲಯದ ಅಧೀನದ ನ್ಯಾಶನಲ್‌ ಸೆಂಟರ್‌ ಆಫ್ ಆರ್ಗಾನಿಕ್‌ ಫಾರ್ಮಿಂಗ್‌ (ಎನ್‌ಸಿಒಎಫ್) ಡಬ್ಲ್ಯುಡಿಸಿಯನ್ನು ತಯಾರಿಸಿ ಮಾರುಕಟ್ಟೆಗೆ ಪೂರೈಸುತ್ತಿದೆ. ಖಾಸಗಿ ಕ್ಷೇತ್ರದವರೂ ಪೂರೈಕೆ ಮಾಡುತ್ತಾರೆ.

ಡಬ್ಲ್ಯುಡಿಸಿಯ ಸ್ವಲ್ಪ ಭಾಗವನ್ನು 200 ಲೀ. ನೀರಿನ ಡ್ರಮ್‌ಗೆ ಹಾಕಿ ಅದನ್ನು 8 ದಿನ ದಿನಕ್ಕೆ ಎರಡು ಬಾರಿಯಂತೆ ಕಲಸಬೇಕು. ಆಗ ಹುಳಿ ವಾಸನೆ ಬರುತ್ತದೆ. ಅನಂತರ ನೈಸರ್ಗಿಕ ಆಹಾರವನ್ನು ತಿನ್ನುವ ಮಲೆನಾಡು ಗಿಡ್ಡದ ಎರಡು ಕೆ.ಜಿ. ಸೆಗಣಿಯನ್ನು ಇದಕ್ಕೆ ಮಿಶ್ರಣ ಮಾಡಿ ಮತ್ತೆ ತಿರುಗಿಸಬೇಕು. ನಾಲ್ಕೈದು ದಿನಗಳ ಬಳಿಕ ಮೇಲ್ಭಾಗದಲ್ಲಿ ತೆಳ್ಳಗಿನ (ಹನಿಯಾದ) ನೀರು ಸಿಗುತ್ತದೆ. ಇದುವೇ ಜೀವಾಮೃತ. ಇದನ್ನು ನಾಟಿ ಮಾಡಿದ ಗದ್ದೆಗಳಿಗೆ ಸಿಂಪಡಿಸಬೇಕು.

ಸಾವಯವ ಕೃಷಿಕ, ಔಷಧೀಯ ಸಸ್ಯಗಳ ಬೆಳೆಗಾರ ಕರ್ಜೆಯ ಮಂಜುನಾಥ ಗೋಳಿ ಅವರು ಕರ್ಜೆ ಮತ್ತು ಕೊಕ್ಕರ್ಣೆ ಸಮೀಪದ ಪಾದೆಮಠದ ಜಮೀನುಗಳಲ್ಲಿ ಭತ್ತದ ಕೃಷಿ ಮಾಡುತ್ತಿದ್ದು, 2 ವರ್ಷಗಳಿಂದ ಜೀವಾಮೃತ ತಯಾರಿಸಿ ಪೈರಿಗೆ ಸಿಂಪಡಿಸುತ್ತಿದ್ದಾರೆ. ಪಾದೆಮಠದ ಗದ್ದೆಗಳಿಗೆ ರಾತ್ರಿ ವೇಳೆ ಕಾಡುಕೋಣಗಳು ಬರುತ್ತವೆ. ಈ ಬಾರಿ ಬಂದ ಕಾಡುಕೋಣಗಳು ಜೀವಾಮೃತ ಹಾಕಿದ

ಗದ್ದೆಗಳ ಮೇಲೆ ದಾಳಿ ಮಾಡದೆ ಇತರ ಗದ್ದೆಗಳ ಪೈರನ್ನು ತಿಂದು ಹೋಗಿರುವುದು ಬೆಳಕಿಗೆ ಬಂದಿದೆ. ಜೀವಾಮೃತವು ಉತ್ತಮ ಇಳುವರಿಯನ್ನು ಕೊಡುವುದು ಈಗಾಗಲೇ ಸಾಬೀತಾಗಿರುವ ವಿಷಯ. ಆದರೆ ಕಾಡುಕೋಣಗಳ ದಾಳಿಯನ್ನೂ ತಡೆಯಬಲ್ಲ ಶಕ್ತಿ ಇದಕ್ಕಿರುವುದು ಹೊಸ ವಿಷಯವಾಗಿರುವುದರಿಂದ ಕೃಷಿಕರಿಗೆ ಹೊಸ ಮಾರ್ಗ ಕಂಡಂತಾಗಿದೆ.

Advertisement

ಡಬ್ಲ್ಯುಡಿಸಿ ಬರುವ ಮುನ್ನ ಕಡಲೆ ಹಿಟ್ಟು, ಗೋಮೂತ್ರ, ಸೆಗಣಿ, ಸಾವಯವ ಕಪ್ಪು ಬೆಲ್ಲ ಇತ್ಯಾದಿಗಳನ್ನು ಮಿಶ್ರಣ ಮಾಡಿ ತಯಾರಿಸಬೇಕಿತ್ತು. ಡಬ್ಲ್ಯುಡಿಸಿ ಬಂದ ಬಳಿಕ ಸುಲಭವಾಗಿದೆ. ನಾನು ನಾಲ್ಕು ಎಕ್ರೆ ಗದ್ದೆಯಲ್ಲಿ ಭತ್ತದ ಕೃಷಿ ಮಾಡುತ್ತಿದ್ದೇನೆ. ಇದರಲ್ಲಿ ಎರಡು ಎಕ್ರೆ ಪಾದೆಮಠದಲ್ಲಿ. ಪ್ರಾಯಃ ಜೀವಾಮೃತದ ಘಾಟು ಕೋಣಗಳಿಗೆ ಸಹ್ಯವಾಗದೆ ಪೈರನ್ನು ವರ್ಜಿಸಿರಬಹುದು. ಇದರ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲು ಅವಕಾಶಗಳಿವೆ. ರಾಸಾಯನಿಕ ಗೊಬ್ಬರ ಹಾಕುವುದಕ್ಕಿಂತ ಸಾವಯವ ಗೊಬ್ಬರ ಹಾಕಿದರೆ ಅನೇಕ ಬಗೆಯ ಲಾಭಗಳಿರುವುದನ್ನೂ ರೈತರು ಯೋಚಿಸಬೇಕಾಗಿದೆ. – ಮಂಜುನಾಥ ಗೋಳಿ ಕರ್ಜೆ, ಸಾವಯವ ಕೃಷಿಕ

ಡಬ್ಲ್ಯುಡಿಸಿ ಎಂದರೆ ಹೆಪ್ಪು ಇದ್ದಂತೆ. 20 ರೂ.ಗೆ ಇದು ಸಿಗುತ್ತದೆ. ಇದನ್ನು ಒಂದು ಬಾರಿ ತೆಗೆದುಕೊಂಡರೆ ಮತ್ತೆ ತೆಗೆದುಕೊಳ್ಳಬೇಕಾಗಿಲ್ಲ. ಒಂದಿಷ್ಟು ಜೀವಾಮೃತವನ್ನು ಇರಿಸಿಕೊಂಡು ಮತ್ತೆ ಮತ್ತೆ ದೇಸೀ ದನಗಳ ಸೆಗಣಿ ಮಿಶ್ರಣ ಮಾಡಿ ಜೀವಾಮೃತವನ್ನು ಹೆಚ್ಚಿಸಿಕೊಳ್ಳಬಹುದು. ಸರಕಾರದಿಂದ ಹುಡಿ ರೂಪದಲ್ಲಿ, ಖಾಸಗಿಯವರದ್ದು ದ್ರವ (ಹೆಪ್ಪು) ರೂಪದಲ್ಲಿ ಡಬ್ಲ್ಯುಡಿಸಿ ಸಿಗುತ್ತದೆ.– ರಾಮಕೃಷ್ಣ ಶರ್ಮ ಬಂಟಕಲ್ಲು, ಸಾವಯವ ಕೃಷಿಕ

Advertisement

Udayavani is now on Telegram. Click here to join our channel and stay updated with the latest news.

Next