ಹಾವೇರಿ: ಸತತ ನಾಲ್ಕೈದು ವರ್ಷಗಳಿಂದ ಬರಗಾಲದ ಬವಣೆಯಲ್ಲಿ ಬೆಂದಿರುವ ಜಿಲ್ಲೆಯ ಬಹುತೇಕ ಸಣ್ಣ ರೈತರು, ಸಂಕಷ್ಟದ ಕಾಲದಲ್ಲಿ ಜೀವನಾಡಿಯಾದ ಎತ್ತುಗಳನ್ನು ಮಾರಾಟ ಮಾಡಿದ್ದು, ಈಗಷ್ಟೇ ಆರಂಭವಾಗಿರುವ ಕೃಷಿ ಚಟುವಟಿಕೆಗೆ ಎತ್ತುಗಳಿಲ್ಲದೇ ಮರಗುತ್ತಿದ್ದಾರೆ.
ಬರದ ಕಾರಣದಿಂದಾದ ಉಂಟಾದ ಆರ್ಥಿಕ ಸಂಕಷ್ಟಕ್ಕೆ ಅನೇಕ ಸಣ್ಣ ರೈತರು ಕಳೆದ ಬೇಸಿಗೆಯಲ್ಲಿಯೇ ಎತ್ತುಗಳನ್ನು ಮಾರಾಟ ಮಾಡಿದ್ದಾರೆ. ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಒದಗಿಸುವುದು ಸಹ ಕಷ್ಟವಾಗಿತ್ತು. ಜಾನುವಾರುಗಳಿಗೆ ಹಾಕಲು ಸಮರ್ಪಕ ಮೇವು ಲಭ್ಯ ಇಲ್ಲದೇ ರೈತರು ಎತ್ತುಗಳನ್ನು ಮಾರಾಟ ಮಾಡಿದ್ದಾರೆ. ಹೀಗಾಗಿ ಈಗ ಸಣ್ಣ, ಅತಿ ಸಣ್ಣ ರೈತರು ಎತ್ತುಗಳ ಸಮಸ್ಯೆ ಎದುರಿಸುವಂತಾಗಿದೆ.
ಈ ವರ್ಷ ಜುಲೈವರೆಗೂ ಮುಂಗಾರು ಮಳೆ ಬಾರದೆ ಇರುವುದರಿಂದ ಬಹುತೇಕ ರೈತರು ಬಿತ್ತನೆ ವಿಚಾರವನ್ನೇ ಕೈಬಿಟ್ಟಿದ್ದರು. ಈ ಒಂದು ವಾರದಿಂದ ಜಿಲ್ಲೆಯಲ್ಲಿ ತುಸು ಮಳೆ ಬೀಳುತ್ತಿದ್ದು ಮತ್ತೆ ರೈತರ ಮನದಲ್ಲಿ ಕೃಷಿ ಮಾಡುವ ಆಸೆ ಚಿಗುರೊಡೆದಿದೆ. ಆದರೆ, ಕೃಷಿ ಚಟುವಟಿಕೆ ನಡೆಸಲು ಈಗ ಎತ್ತುಗಳ ಸಮಸ್ಯೆ ಎದುರಾಗಿದೆ. ಹೊಸದಾಗಿ ಎತ್ತುಗಳನ್ನು ಕೊಂಡುಕೊಳ್ಳುವಷ್ಟು ಹಣ ರೈತರ ಬಳಿ ಇಲ್ಲ. ಇನ್ನು ದುಬಾರಿ ಬಾಡಿಗೆ ಕೊಟ್ಟು ಯಂತ್ರಗಳನ್ನು ಬಳಸುವ ಶಕ್ತಿಯೂ ಇಲ್ಲದಂತಾಗಿದೆ.
ಬಾಡಿಗೆಯಂತ್ರಕ್ಕೆ ಮೊರೆ: ಎತ್ತುಗಳು ಇಲ್ಲದೇ ಇರುವುದರಿಂದ ಅನೇಕರು ಮತ್ತೆ ಸಾಲ ಮಾಡಿ, ಬಂದಿರುವ ಒಂದಿಷ್ಟು ಬೆಳೆವಿಮೆ ಹಣ ಬಳಸಿ ಬಾಡಿಗೆ ಯಂತ್ರಗಳನ್ನು ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಈಗ ಬಾಡಿಗೆ ಯಂತ್ರಗಳನ್ನು ಬಳಸುವುದು ಅನೇಕ ರೈತರಿಗೆ ಅನಿವಾರ್ಯ ಆಗಿದೆ. ಮಳೆ ಬಿದ್ದಾಗ ಒಂದೇ ಸಲ ಎಲ್ಲರೂ ಕೃಷಿಯಲ್ಲಿ ತೊಡಗಿಕೊಂಡಿರುವುದರಿಂದ ಯಂತ್ರಗಳು ಸಕಾಲಕ್ಕೆ ಬಾಡಿಗೆಗೆ ಸಿಗುತ್ತಿಲ್ಲ. ಇನ್ನು ಖಾಸಗಿಯಾಗಿ ಬಾಡಿಗೆ ಯಂತ್ರಗಳನ್ನು ಪಡೆಯಬೇಕೆಂದರೆ ಹೆಚ್ಚಿನ ದರ ನೀಡಬೇಕು. ಇದು ಸಣ್ಣ ರೈತರಿಗೆ ಹೊರೆಯಾಗಿದ್ದು ರೈತರ ಸಂಕಷ್ಟಕ್ಕೆ ಕೊನೆಯ ಇಲ್ಲದಂತಾಗಿದೆ.
ಬಿತ್ತನೆಯೂ ಕಡಿಮೆ:ಈ ವರ್ಷ ಜುಲೈವರೆಗೂ ಮುಂಗಾರು ಮಳೆ ಸಮರ್ಪಕವಾಗಿ ಆಗದೆ ಇರುವುದರಿಂದ ಬಹುತೇಕ ರೈತರು ಕೃಷಿ ಚಟುವಟಿಕೆಯಿಂದಲೇ ವಿಮುಖರಾಗಿದ್ದರು. ಜಿಲ್ಲೆಯ ಕೃಷಿ ಕ್ಷೇತ್ರ 3.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈವರೆಗೆ ಕೇವಲ ಶೇ. 40ರಷ್ಟು ಮಾತ್ರ ಬಿತ್ತನೆಯಾಗಿದೆ. ಮಳೆ ಕೊರತೆ ಕಾರಣದಿಂದ ವಿಳಂಬವಾಗಿ ಬಿತ್ತನೆ ಮಾಡಿದರೆ ಇಳುವರಿ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದು ಗೊತ್ತಿದ್ದರೂ ರೈತರು ಬಂದಷ್ಟಾದರೂ ಬರಲಿ ಎಂಬ ಭಾವನೆಯಿಂದ ಕಷ್ಟದಲ್ಲಿಯೂ ಕೃಷಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
•ಎಚ್.ಕೆ. ನಟರಾಜ