ಹುಣಸೂರು: ಸಾಲಬಾದೆಯಿಂದ ಹೈರಾಣಾಗಿದ್ದ ರೈತ ಮಹಿಳೆಯೊಬ್ಬರು ಕ್ರಿಮಿನಾಶಕ ಕಾಳು ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಬಿಳಿಕೆರೆ ಹೋಬಳಿಯ ಮೂಡಲಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಮೂಡಲಕೊಪ್ಪಲು ಗ್ರಾಮದ ಲೇ.ಪಾಪೇಗೌಡರ ಪತ್ನಿ ನಿಂಗಮ್ಮ (70) ಮೃತರು. ಇವರಿಗೆ ಒಬ್ಬ ಮಗನಿದ್ದಾರೆ.
ದೂರಿನಲ್ಲಿ ಏನಿದೆ ?: ಪುತ್ರ ಶಿವಕುಮಾರ್ ನೀಡಿರುವ ದೂರಿನಲ್ಲಿ ನಮ್ಮ ತಾಯಿ ಮತ್ತು ನಾವು ವ್ಯವಸಾಯ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇವೆ. ನಮ್ಮ ತಾಯಿ ಹೆಸರಿನಲ್ಲಿ ಬನ್ನಿ ಕುಪ್ಪೆ ಬಳಿ 3.34 ಎಕರೆ ಜಮೀನು ಇದ್ದು, ಜಮೀನಿನಲ್ಲಿ ತಂಬಾಕು , ಶುಂಠಿ ಹಾಗೂ ಹತ್ತಿ ಬೆಳೆಗಳನ್ನು ಬೆಳೆಯುತ್ತಿದ್ದು 2015 ನೇ ಸಾಲಿನಲ್ಲಿ ವ್ಯವಸಾಯ ಉದ್ದೇಶಕ್ಕೆ ಮೈಸೂರಿನ ಕರೂರ್ ವೈಶ್ಯ ಬ್ಯಾಂಕಿನಲ್ಲಿ 8.80 ಲಕ್ಷ ರೂ ಸಾಲ ಮಾಡಿದ್ದು. ಬೆಳೆ ನಷ್ಟದಿಂದ ಸಾಲ ತೀರಿಸಲು ಸಾಧ್ಯವಾಗದೆ ಬ್ಯಾಂಕಿನವರು ನಮ್ಮ ತಾಯಿಗೆ ಹಣ ಕಟ್ಟುವಂತೆ ನೋಟಿಸ್ ನೀಡಿ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದರಿಂದ ನಮ್ಮ ತಾಯಿ ಆತಂಕದಿಂದ ಜು.4 ರ ರಾತ್ರಿ 10:30 ರ ಸಮಯದಲ್ಲಿ ಮನೆಯಲ್ಲಿ ಕ್ರಿಮಿನಾಶಕಕ್ಕೆ ಬಳಸುವ ಕಾಳು ಮಾತ್ರೆಗಳನ್ನು ಸೇವಿಸಿ ಒದ್ದಾಡುತ್ತಿದ್ದಾಗ ನಾನು ನೋಡಿ ಅವರನ್ನು ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೆಆರ್ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.