Advertisement

ಅಹೋರಾತ್ರಿ ಧರಣಿ ಹಿಂಪಡೆದ ಅನ್ನದಾತರು

11:53 AM Jan 05, 2019 | Team Udayavani |

ಹುಬ್ಬಳ್ಳಿ: ಮೃತ ರೈತನ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡುವುದಾಗಿ ಸಚಿವ ಸಿ.ಎಸ್‌. ಶಿವಳ್ಳಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಿಮ್ಸ್‌ನಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ರೈತರು ಶುಕ್ರವಾರ ಹಿಂಪಡೆದರು.

Advertisement

ಪೌರಾಡಳಿತ ಸಚಿವ ಸಿ.ಎಸ್‌. ಶಿವಳ್ಳಿ ಮಾತನಾಡಿ, ರೈತ ಮೌನೇಶ ಮುಳ್ಳೂರು ಮೃತಪಟ್ಟಿರುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸರಕಾರದಿಂದ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರೈತನ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವೇ ಎನ್ನುವುದರ ಕುರಿತು ಕಿಮ್ಸ್‌ ನಿರ್ದೇಶಕರು ಮೂರು ದಿನದಲ್ಲಿ ವರದಿ ನೀಡಬೇಕು. ಮೃತ ರೈತನ ಕುಟುಂಬಕ್ಕೆ ಸರಕಾರದಿಂದ ಬರಬೇಕಾದ ಸೌಲಭ್ಯಗಳ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಧರಣಿ ಕೈಬಿಡುವಂತೆ ಮನವಿ ಮಾಡಿದ ಸಚಿವ ಶಿವಳ್ಳಿ, ವೈಯಕ್ತಿಕವಾಗಿ 25 ಸಾವಿರ ರೂ. ಪರಿಹಾರ ವಿತರಿಸಿದರು.

ಸಚಿವರ ಭರವಸೆ ಹಾಗೂ ಮನವಿಗೆ ಸ್ಪಂದಿಸಿದ ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಪ್ರತಿಭಟನೆ ಹಿಂಪಡೆಯುವುದಾಗಿ ಘೋಷಿಸಿದರು. ಮುಂದೆ ಇಂತಹ ಘಟನೆಗಳು ಕಿಮ್ಸ್‌ನಲ್ಲಿ ಸಂಭವಿಸಬಾರದು. ಬಡವರ ಸಂಜೀವಿನಿಯಾಗಿರುವ ಕಿಮ್ಸ್‌ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ವೈದ್ಯರು ಶ್ರಮ ವಹಿಸಬೇಕು. ಇಂತಹ ಘಟನೆಗಳು ಮರುಕಳಿಸಿದರೆ ಸಂಘಟನೆಯಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಿಮ್ಸ್‌ ನಿರ್ದೇಶಕ ಡಾ| ಡಿ.ಡಿ. ಬಂಟ್ ಮಾತನಾಡಿ, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು. ರೋಗಿಗಳಿಗೆ ಯಾವುದೇ ಅವ್ಯವಸ್ಥೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಘಟನೆ ಹಿನ್ನೆಲೆ: ನರಗುಂದ ತಾಲೂಕು ಯಾವಗಲ್ಲ ಗ್ರಾಮದ ರೈತ ಮೌನೇಶ ಮುಳ್ಳೂರ ಕಿಮ್ಸ್‌ಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೆ ಬೇಕಾದ ಸಲಕರಣೆಗೆ 30 ಸಾವಿರ ರೂ. ನೀಡುವಂತೆ ವೈದ್ಯರು ಬೇಡಿಕೆ ಇಟ್ಟಿದ್ದರು. ಇದನ್ನು ಪೂರೈಸದ ಕಾರಣ ಶಸ್ತ್ರಚಿಕಿತ್ಸೆ ಮಾಡದೆ ನಿರ್ಲಕ್ಷ್ಯ ತೋರಿದ ಪರಿಣಾಮ ರೈತ ಮೌನೇಶ ಮುಳ್ಳೂರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ರೈತ ಸೇನಾ ಕರ್ನಾಟಕದಿಂದ ಅಹೋರಾತ್ರಿ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದರು. ಸ್ಥಳಕ್ಕೆ ಪೌರಾಡಳಿತ ಸಚಿವ ಸಿ.ಎಸ್‌. ಶಿವಳ್ಳಿ ಗುರುವಾರ ಭೇಟಿ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ್ದರು. ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮ, ಮೃತ ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಮರಣೋತ್ತರ ಪರೀಕ್ಷೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದ್ದರು.

Advertisement

ಕಿಮ್ಸ್‌ ನಿರ್ದೇಶಕ ಡಾ| ಡಿ.ಡಿ. ಬಂಟ್ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಆಗಮಿಸುತ್ತಿದ್ದಂತೆ ಸಂಬಂಧಿಸಿದ ವೈದ್ಯರು ಸಚಿವ ಸಿ.ಎಸ್‌. ಶಿವಳ್ಳಿ ನೇತೃತ್ವದಲ್ಲಿ ಸಭೆ ನಡೆಸಿದರು. ಸರಕಾರದಿಂದ ಪರಿಹಾರ ಕೊಡಿಸುವುದಾಗಿ ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ವಾಪಸ್‌ ಪಡೆಯಲಾಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರಿಗೆ ಬಸ್‌ ವ್ಯವಸ್ಥೆ ಹಾಗೂ ಮೃತದೇಹ ತೆಗೆದುಕೊಂಡ ಹೋಗಲು ಆಂಬ್ಯುಲೆನ್ಸ್‌ ವ್ಯವಸ್ಥೆಯನ್ನು ಕಿಮ್ಸ್‌ನಿಂದ ಕಲ್ಪಿಸಲಾಯಿತು.

ಕಿಮ್ಸ್‌ನಲ್ಲಿ ಉತ್ತಮ ಚಿಕಿತ್ಸೆ ದೊರೆಯಬೇಕು ಎನ್ನುವ ಕಾರಣಕ್ಕೆ ಅಗತ್ಯ ಬದಲಾವಣೆ ಮಾಡಿಕೊಳ್ಳಬೇಕು. ಪ್ರತಿ 15 ದಿನಗಳಿಗೊಮ್ಮೆ ಕಿಮ್ಸ್‌ಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಬಡ ರೋಗಿಗಳಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ವೈದ್ಯರು ಮುಂದಾಗಬೇಕು.
. ಸಿ.ಎಸ್‌. ಶಿವಳ್ಳಿ, ಪೌರಾಡಳಿತ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next