ಬಂಟ್ವಾಳ: ಮನೆಯ ಸುತ್ತ ಮುತ್ತಲೂ ಕಾಂಕ್ರೀಟ್ ಹಾಕಿ ಭೂಮಿಯನ್ನು ಬರಡಾಗಿಸುವ ಇಂದಿನ ಕಾಲಘಟದಲ್ಲಿ ಕಳ್ಳಿಗೆ ಗ್ರಾಮದ ಹೊಳ್ಳರಬೈಲಿನ ಕೃಷಿಕರೊಬ್ಬರು ಅಂಗಳವನ್ನೇ ಭತ್ತದ ಗದ್ದೆಯನ್ನಾಗಿಸಿ ಮನೆಯ ಸುತ್ತಮುತ್ತಲೂ ತರಕಾರಿ, ಹಣ್ಣು ಹಂಪಲು ಬೆಳೆದು ಮಾದರಿಯಾಗಿದ್ದಾರೆ.
ಕಳ್ಳಿಗೆ ಹೊಳ್ಳರಬೈಲು ನಿವಾಸಿ ರಘುನಾಥ ಸಪಲ್ಯ ಅವರೇ ಕೃಷಿಯಲ್ಲಿ ಹೊಸ ಅಧ್ಯಾಯ ಬರೆಯಲು ಹೊರಟ ರೈತ. ಕೃಷಿ ಪರಂಪರೆಯಿಂದ ಬಂದ ಅವರು ಎಸೆಸೆಲ್ಸಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ತಂದೆ ಉಗ್ಗಪ್ಪ ಸಪಲ್ಯರ ಒಡಗೂಡಿ ಕೃಷಿ ಕಾರ್ಯಕ್ಕೆ ತೊಡಗಿ, ಪ್ರಸ್ತುತ ಮಾದರಿ ಕೃಷಿಕರೆನಿಸಿಕೊಂಡಿದ್ದಾರೆ.
ಮನೆಯ ಅಂಗಳವೂ ಸೇರಿದಂತೆ ಸುಮಾರು 30 ಸೆಂಟ್ಸ್ ಜಾಗದಲ್ಲಿ ಭತ್ತದ ಬೇಸಾಯ ಮಾಡಿ ಸುಮಾರು 1 ಕ್ವಿಂಟಾಲ್ ಅಕ್ಕಿ ಇಳುವರಿಯಾಗಿ ಪಡೆಯುತ್ತಿದ್ದಾರೆ. ಜತೆಗೆ ಗದ್ದೆಯ ಬದುವಿನ ಜಾಗವನ್ನೂ ಸದ್ಬಳಕೆ ಮಾಡಿಕೊಂಡಿದ್ದು, ಅದರಲ್ಲಿ ಉದ್ದಕ್ಕೆ ಅಲಸಂಡೆ ಗಿಡವನ್ನು ನೆಟ್ಟು ಫಸಲು ಪಡೆಯುತ್ತಿದ್ದಾರೆ. ಜತೆಗೆ ಮನೆಯ ಹಿತ್ತಲಿನಲ್ಲಿ ಬಿರಿಯಾನಿ ಅಕ್ಕಿ(ಭಾಸುಮತಿ)ಯ ಪೈರನ್ನು ಕೂಡ ಬೆಳೆದಿರುವುದು ವಿಶೇಷ.
ಸಾವಯವ ಕೃಷಿಗೆ ಒತ್ತು ನೀಡುವ ಇವರ ಮನೆಯ ಸುತ್ತಲೂ ಸುಮಾರು 50 ನಿಂಬೆ ಗಿಡಗಳು, ಡ್ರಾಗನ್ ಫ್ರೂಟ್ಸ್, ಮ್ಯಾಂಗೋ ಸ್ಟಿನ್, ಲಿಚಿ ಹಣ್ಣು, ಲಕ್ಷ್ಮೀ ಫಲ, ಜಂಬೂ ನೇರಳೆ, ಪಪ್ಪಾಯಿ, ಅಂಬಟೆ ಹೀಗೆ ಅನೇಕ ಗಿಡಗಳಿವೆ. ಹೈಬ್ರಿàಡ್ ತಳಿಯ ತೆಂಗು, ಅಡಿಕೆ ಗಿಡಗಳನ್ನೂ ಬೆಳೆಸಿದ್ದಾರೆ. ಪಕ್ಕದಲ್ಲಿ ಹಡಿಲು ಬಿದ್ದ ಗದ್ದೆಯಲ್ಲೂ ಸಾವಯವ ಗೊಬ್ಬರ ಬಳಸಿ ಭತ್ತ ಬೆಳೆದಿದ್ದು, ಸುಮಾರು 25 ಮುಡಿ ಅಕ್ಕಿ ಇಳುವರಿ ತೆಗೆಯುತ್ತಿದ್ದಾರೆ.
ಸಾವಯವ ಕೃಷಿ ಉತ್ತಮ
ರಾಸಾಯನಿಕ ಗೊಬ್ಬರ ಬಳಸು ವುದರಿಂದ ಮಣ್ಣಿನ ಫಲವತ್ತತೆ ಕಡಿಮೆ ಯಾಗುತ್ತಿದ್ದು ನಿರೀಕ್ಷಿತ ಫಸಲು ಪಡೆ ಯಲು ಸಾಧ್ಯವಾಗುತ್ತಿಲ್ಲ. ಆದರೆ ಸಾವಯವ ಕೃಷಿಯಿಂದ ಒಳ್ಳೆಯ ಆದಾಯದೊಂದಿಗೆ ಮಾನಸಿಕ ನೆಮ್ಮದಿ, ದೈಹಿಕ ಆರೋಗ್ಯವೂ ಸಿಗುತ್ತದೆ. ಇದರಿಂದ ನಮ್ಮ ಆರೋಗ್ಯದ ಜತೆಗೆ ಭೂಮಿಯ ಫಸ ಲನ್ನೂ ಕಾಯ್ದುಕೊಂಡಂತಾಗುತ್ತದೆ ಎಂದು ಕೃಷಿಕ ರಘುನಾಥ ಸಪಲ್ಯ ಹೊಳ್ಳರಬೈಲು ಹೇಳುತ್ತಾರೆ.