ರೂಗಿ (ಮುಧೋಳ): ಪ್ರವಾಹದಲ್ಲಿ ಸಿಲುಕಿದ್ದ ಮೂವರು ಸೈನಿಕರು, 16 ಜನ ಜನರಿಗೆ ತನ್ನ ಮನೆಯ ಮಾಳಿಗೆ ಮೇಲೆ ಆಶ್ರಯ ಕೊಟ್ಟು, ಅವರೆಲ್ಲರ ಜೀವ ಉಳಿಯಲು ಕಾರಣನಾದ ರೈತನೇ ಈಗ ಅತಂತ್ರನಾಗಿದ್ದಾನೆ.
ಹೌದು, ಆ ರೈತ ಹೆಸರು ಶಿವಪ್ಪ ಅಡಿವೆಪ್ಪ ಚೌಧರಿ. ರೂಗಿ ತೋಟದ ಮನೆಯ ಮಾಲಿಕ. ಕಷ್ಟಪಟ್ಟು ಹೊಲದಲ್ಲಿ ಕಟ್ಟಿದ ಮನೆಯೇ ಮೂವರು ಸೈನಿಕರು ಹಾಗೂ 16 ಜನ ಪ್ರಾಣ ಉಳಿಸಿತು. ಒಂದೂವರೆ ದಿನ ಮನೆಯ ಮಾಳಿಗೆಯೇ ಅರಮನೆಯಾಗಿತ್ತು. ಹೆಲಿಕಾಪ್ಟರ್ ಮೂಲಕವೇ ನೀರು, ಬಿಸ್ಕತ್ ಎಸೆದಿದ್ದರು. ಅದನ್ನೇ ತಿಂದು ದಿನ ಕಳೆದಿದ್ದರು.
ಕೂಗಾಡಿ ನಿಲ್ಲಿಸಿದೆ; ಮಾಳಿಗೆಗೆ ಕರೆತಂದೆ: ಆ ರೈತನ ಎದುರಿಸಿದ ಸಂಕಷ್ಟ ಆತನ ಮಾತಲ್ಲೇ ಕೇಳಿ. ಘಟಪ್ರಭಾ ನದಿ, ಯಾದವಾಡ ಸೇತುವೆ ಸುತ್ತುವರಿದು ಭಯಂಕರ ಸೆಳವಿನೊಂದಿಗೆ ಹರಿಯುತ್ತಿತ್ತು. ಬೆಳಗಾಗುವುದರೊಳಗೆ ಮೊಣಕಾಲ ಮಟ ನೀರು ಬಂದಿತ್ತು. ನೀರು ಹೆಚ್ಚಾಗುವುದು ಕಂಡು, ಬೈಕ್ ಏರಿ ಯಾದವಾಡಕ್ಕೆ ಹೊರಟೆ. ಸೇತುವೆ ಆಚೆ ಇದ್ದ ವ್ಯಕ್ತಿ, ಕೂಗಿ ಹೇಳುತ್ತಿದ್ದ, ಈ ಕಡೆ ಬರಬೇಡ. ಸೆಳೆತ ಜಾಸ್ತಿ ಇದೆ. ಹೊಳ್ಳಿಹೋಗು ಎಂದು ಕೂಗುತ್ತಿದ್ದ. ಆತನ ಕೂಗು ಕೇಳಿ ಮರಳಿ ನನ್ನ ಹೊಲದ ಮನೆಯತ್ತ ಹೊರಟೆ. ಎದುರಿಗೆ 16 ಜನರು ಟ್ರ್ಯಾಕ್ಟರ್‌ನಲ್ಲಿ ತಮ್ಮ ಸಾಮಾನುಗಳ ಜತೆಗೆ ಯಾದವಾಡ ಸೇತುವೆ ದಾಟಲು ಹೊರಟಿದ್ದರು. ಅದನ್ನು ಕಂಡು ಅವರ ಬಳಿಗೆ ಬೈಕ್ ಓಡಿಸಿದೆ. ಅವರೆಲ್ಲ ಸೇತುವೆ ದಾಟಲು ಮುಂದಾಗಿದ್ರೆ, ಘಟಪ್ರಭಾ ನದಿ ಪಾಲಾಗುತ್ತಿದ್ದರು. ಅವರಿಗೆ ತಿಳಿ ಹೇಳಿ, ಮನೆಗೆ ಕರೆದುಕೊಂಡು, ಮಾಳಿಗೆಯ ಮೇಲೆ ಕುಳಿತುಕೊಂಡೆ. ಒಂದೂವರೆ ದಿನ ಅಲ್ಲೇ ಕಳೆದೇವು. ನಮ್ಮನ್ನು ಕಾಪಾಡಲು ಬಂದ ಸೈನಿಕರೂ ಸಂಕಷ್ಟಕ್ಕೆ ಸಿಲುಕಿದರು. ಬೋಟ್ ಕೆಟ್ಟಿತು. ಮತ್ತೂಂದು ಬೋಟ್ ತರಿಸಿದರು. ಅದರಲ್ಲಿ ನಾಲ್ಕು ಜನ ಸೈನಿಕರು ಹೋದರು. ಉಳಿದ ಮೂವರು ಸೈನಿಕರು ಮನೆಯ ಮಾಳಿಗೆಯಲ್ಲಿ ಆಶ್ರಯ ಪಡೆದರು. ನಾವೆಲ್ಲ ನೀರು ಹೆಚ್ಚಾಗುತ್ತಿದೆ. ಬೇಗ ಕರೆದುಕೊಂಡು ಹೋಗಿ ಎಂದು ಕೂಗುತ್ತಿದ್ದೇವು. ಹೆಲಿಕಾಪ್ಟರ್ ಮೂಲಕ ನಮ್ಮನ್ನೆಲ್ಲ ಕಾಪಾಡಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಬಳಿ ಇದ್ದ ಸಂತ್ರಸ್ತರೊಂದಿಗೆ ನಮ್ಮನ್ನು ಬಿಟ್ಟರು. ಮರಳಿ ನಮ್ಮನ್ನು ಯಾರೂ ಕೇಳಲಿಲ್ಲ. ಊರಲ್ಲಿ ನೀರು ಕಡಿಮೆಯಾಗಿರುವುದು ಕೇಳಿ, ನಾವೇ ಬೆಳಗಾವಿಯಿಂದ ಬಾಡಿಗೆ ವಾಹನ ಮಾಡಿ ಕೊಂಡು, ಊರಿಗೆ ಬಂದೇವು. ಊರಲ್ಲಿನ ಮನೆ, ಹೊಲ, ಎಲ್ಲ ಸಾಮಗ್ರಿ ನೋಡಿ ಕಂಗಾಲಾದೇವು. ಈಗ ಭರ್ತಿ ಸಂಕಷ್ಟ.
ಗ್ರಾಮದ ಮನೆ, ತಾತ್ಕಾಲಿಕ 10 ಸಾವಿರ ಆರ್ಥಿಕ ನೆರವು ಎಲ್ಲವೂ ಗ್ರಾಮದಲ್ಲಿ ವಾಸವಿದ್ದವರಿಗೆ ಕೊಡಲಾಗುತ್ತಿದೆ. ನಮ್ಮಂತೆ ತೋಟದ ಮನೆಯವರಿಗೆ ಯಾರೂ ಮಾತನಾಡಿಸುತ್ತಿಲ್ಲ. ನಮ್ಮ ಸಂಕಷ್ಟವೂ ಕೇಳುತ್ತಿಲ್ಲ. ಹೇಳಬೇಕೆಂದರೂ ಯಾರೂ ಕೈಗೆ ಸಿಗುತ್ತಿಲ್ಲ. ಹೇಗೆ ಬದುಕುವುದು, ಹಾಳಾದ ಕಾಳು-ಕಡಿ ಎಲ್ಲಿಂದ ತರುವುದು. ಊಟಕ್ಕೆ ಏನು ಮಾಡುವುದು ಎಂದು ಮರುಗುತ್ತಾರೆ ರೈತ ಶಿವಪ್ಪ ಅಡಿವೆಪ್ಪ ಚೌಧರಿ. ಬೆಳಗಾವಿಯಿಂದ ಮರಳಿ ಊರಿಗೆ ಕಳುಹಿಸಲಿಲ್ಲ. ನೀರು ಇಳಿದದ್ದು ಕೇಳಿ ತಾವೇ ಬಾಡಿಗೆ ವಾಹನ ಮಾಡಿಕೊಂಡು ಮರಳಿ ಬಂದಾಗ ಮನೆಯಲ್ಲಿ ಎಲ್ಲ ಸಾಮಾನುಗಳು ನೀರಲ್ಲಿ ನಾಶವಾಗಿದ್ದವು. ಮನೆ ತುಂಬಾ ರಾಡಿ. ಮನೆಯ ಮುಂದೆ ಗ್ಯಾರೇಜಿನ ತರಹ ಮಾಡಿಕೊಂಡಿದ್ದ ಸ್ಥಳದಲ್ಲಿದ್ದ 7 ಮೋಟಾರ್ ಸೈಕಲ್, ಒಂದು ಕಾರು, 1 ಜನರೇಟರ್, 6 ಪಂಪಸೆಟ್, 1 ಕನಕಿ ಮಷಿನ್, 1 ಗಾಡಿ ಸರ್ವಿಸಿಂಗ್ ಮಷಿನ್, 1 ನೀರು ಜಗ್ಗಿ ಸುವ ಮಶೀನ್ ನಾಶವಾಗಿತ್ತು. ಪ್ರಾಣ ಉಳಿಸಿ ಕೊಳ್ಳಲು ಮನೆ ಮೇಲಿನ ತಗಡಿನ ಮೇಲೆ ಕುಳಿತಾಗ ಹೆಲಿಕಾಪ್ಟರ್‌ನಲ್ಲಿಂದ ನೀರಿನ ಬಾಟಲ್ ಬಾಕ್ಸ್ ಕೆಳಗೆ ಒಗೆದಾಗ ಮಾಳಿಗೆ ಮೇಲಿದ್ದ ಸೋಲಾರ ಹೀಗೆ ಎಲ್ಲ ಸಾಮಾನುಗಳು ಹಾಳಾಗಿವೆ ಎಂದು ಮರಗುತ್ತಿದ್ದಾರೆ ರೈತ ಶಿವಪ್ಪ.
ತೋಟದ ಮನೆಯವರ ಗೋಳು ಕೇಳಿ: ರೂಗಿ ಹದ್ದಿಯಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿರುವ ರಾಮಪ್ಪ ಫಕೀರಪ್ಪ ಜಿಡ್ಡಿಮನಿ(51), ಮಲ್ಲವ್ವ ರಾಮಪ್ಪ ಜಿಡ್ಡಿಮನಿ ಅವರ ಎಲ್ಲ ಸಾಮಾನುಗಳು ಹಾಳಾಗಿವೆ. ದಿನಸಿ ವಸ್ತುಗಳೆಲ್ಲ ತೊಯ್ದಿದೆ. ಅಡುಗೆ ಮಾಡಿಕೊಳ್ಳಲು ಏನೂ ವಸ್ತುಗಳು ಉಳಿದಿಲ್ಲ. ಸಮ ಯಕ್ಕೆ ಸರಿಯಾಗಿ ಶಿವಪ್ಪನ ಮನೆ ಮಾಳಿಗೆ ಸೇರಿದ್ದರಿಂದ ಪ್ರಾಣ ಉಳಿದಿದೆ. ವಿಚಿತ್ರವೆಂದರೆ ನಿರಾಶ್ರಿತರಿಗೆ ನೆರವಿನ ಮಹಾಪುರ ಹರಿದು ಬರುತ್ತಿದ್ದರೂ ತೋಟದ ಮನೆಗಳಲ್ಲಿರುವ ಇವರಿಗೆ ಏನೂ ಸಿಗುತ್ತಿಲ್ಲ. ಕನಿಷ್ಠ ಸರ್ಕಾರದ ನೆರವೂ ಇವರಿಗೆ ಬರುತ್ತಿಲ್ಲ. ರೈತ ಶಿವಪ್ಪ ಅಷ್ಟೇ ಸುತ್ತಮುತ್ತ 5-6 ಗುಡಿಸಲು ವಾಸಿಗಳ ಸ್ಥಿತಿ ಇದೇ ಸಮಸ್ಯೆ.
•ಮಹಾಂತೇಶ ಕರೆಹೊನ್ನ