ಹೊಸದಿಲ್ಲಿ: ‘ರೈತರ ಆತ್ಮಹತ್ಯೆ ರೀತಿಯ ಗಂಭೀರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಈವರೆಗೆ ಏನು ಕ್ರಮ ಕೈಗೊಂಡಿದ್ದೀರಿ?’ – ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಹಾಕಿರುವ ಪ್ರಶ್ನೆಯಿದು. ‘ಇದೊಂದು ಗಂಭೀರ ಸಮಸ್ಯೆಯಾಗಿದ್ದು, ವಿವಿಧ ರಾಜ್ಯಗಳ ಅತ್ಯುನ್ನತ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಮಾಹಿತಿ ಆಧರಿಸಿ, ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಆಯಾ ರಾಜ್ಯ ಸರಕಾರಗಳು ಏನೇನು ಕ್ರಮ ಕೈಗೊಂಡಿವೆ ಎಂಬ ಕುರಿತು ನಾಲ್ಕು ವಾರಗಳ ಒಳಗೆ ವರದಿ ನೀಡಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಕೇಂದ್ರಕ್ಕೆ ನಿರ್ದೇಶ ನೀಡಿದರು.
ಅಲ್ಲದೆ ಕೃಷಿ ಕರು ಆತ್ಮಹತ್ಯೆ ರೀತಿಯ ಅಪಾಯಕಾರಿ ಹೆಜ್ಜೆ ತುಳಿಯಲು ಮೂಲ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಿ ಅಂಥ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಿರುವ ನೀತಿ ರೂಪಿಸುವ ಕಾರ್ಯ ಸರಕಾರದಿಂದ ಆಗಬೇಕು ಎಂದು ನ್ಯಾಯಪೀಠ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹ ‘ರೈತರಿಂದ ಆಹಾರ ಬೆಳೆಗಳ ನೇರ ಖರೀದಿ, ವಿಮೆ ಮೊತ್ತ ಹೆಚ್ಚಳ, ಸಾಲ ಮಂಜೂರು ಮತ್ತು ಬೆಳೆ ನಷ್ಟ ಪರಿಹಾರದ ರೀತಿಯ ಹಲವು ಕ್ರಮಗಳನ್ನು ಸರಕಾರ ಈಗಾಗಲೇ ಕೈಗೊಂಡಿದೆ. ಇದರೊಂದಿಗೆ ಕೃಷಿಕರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಸಮಗ್ರ ನೀತಿಯೊಂದನ್ನು ಕೇಂದ್ರ ಸರಕಾರ ರೂಪಿಸಲಿದೆ,” ಎಂದು ಮಾಹಿತಿ ನೀಡಿದರು. ಈ ಕುರಿತು ಅರ್ಜಿ ಸಲ್ಲಿಸಿದ್ದ ಎನ್‌ಜಿಒ ಪರ ಹಿರಿಯ ವಕೀಲ ಕೋಲಿನ್ ಗೋನ್ಸಾಲ್ವಿಸ್ ಅವರು, ‘ದೇಶಾದ್ಯಂತ 3000ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಈ ಪ್ರಕರಣಗಳನ್ನು ತಡೆಯಲು ಕೇಂದ್ರ ಸರಕಾರ ಸೂಕ್ತ ಪರಿಹಾರ ಕಂಡುಕೊಳ್ಳಬೇಕು,” ಎಂದರು. ಗುಜರಾತ್‌ನಲ್ಲಿ ರೈತರ ದುಸ್ಥಿತಿ ಹಾಗೂ ರೈತರ ಆತ್ಮಹತ್ಯೆ ಹೆಚ್ಚಿರುವ ಕುರಿತು ಸಿಟಿಜನ್ಸ್ ರಿಸೋರ್ ಆಂಡ್ ಆಕ್ಷನ್ ಆಂಡ್ ಇನಿಷಿಯೇಟಿವ್’ ಎಂಬ ಎನ್‌ಜಿಒ, ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿತ್ತು.