ಧಾರವಾಡ: ಆಕಳು ಮೇಯಿಸಲು ಹೋಗಿದ್ದ ರೈತರೊಬ್ಬರು ಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ದುರ್ಘಟನೆ ಸಂಭವಿಸಿದೆ.
ಮಳೆಯ ಕಾರಣದಿಂದ ಹಳ್ಳದಲ್ಲಿ ಏಕಾಏಕಿ ಭಾರೀ ಪ್ರಮಾಣದ ನೀರು ಹರಿದುಬಂದು ಉಂಟಾದ ಪ್ರವಾಹದಲ್ಲಿ ಮಡಿವಾಳಪ್ಪ ಜಕ್ಕಣ್ಣನವರ (40) ಎಂಬ ಹೆಸರಿನ ರೈತ ಕೊಚ್ಚಿಹೋಗಿದ್ದಾರೆ.
ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಈ ದುರ್ಘಟನೆ ನಡೆಸಿದೆ. ಆಕಳು ಮೇಯಿಸಲು ಹೋಗಿದ್ದ ಮಡಿವಾಳಪ್ಪ ಅವರು ಸೋಮವಾರ ಸಂಜೆಯಾಗುತ್ತಲೇ ತಮ್ಮ ಆಕಳುಗಳ ಜೊತೆಯಲ್ಲಿ ಮನೆಯತ್ತ ಹೆಜ್ಜೆ ಹಾಕಿದ್ದಾರೆ.
ಈ ವೇಳೆ ಜೋರಾಗಿ ಮಳೆ ಸುರಿಯತೊಡಗಿದೆ ಈ ಸಂದರ್ಭದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಹಸುಗಳನ್ನು ಹಾರೋಬೆಳವಡಿಯಿಂದ ಆಯಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯೆ ಇರುವ ಸೇತುವೆ ಮೇಲೆ ಕಟ್ಟಿ ಹಾಕಿ ತಾವು ಸೇತುವೆಯ ಕೆಳಗಡೆ ಕುಳಿತಿದ್ದರು.
ಈ ಸಂದರ್ಭದಲ್ಲಿ ಸೇತುವೆಗೆ ಏಕಾಏಕಿ ತುಪ್ಪರಿ ಹಳ್ಳಕ್ಕೆ ಸೇರುವ ಭಂಡರಳ್ಳದಲ್ಲಿ ನೀರು ತುಂಬಿ ಬಂದಿದೆ. ಇದರಿಂದ ಗಾಬರಿಯಾದ ಮಡಿವಾಳಪ್ಪ ಸೇತುವೆ ಕೆಳಗಡೆ ಹೊಂದಿಕೊಂಡಿದ್ದ ಕಬ್ಬಿಣದ ಶೇಳೆ ಹಿಡಿದು ನಿಂತಿದ್ದಾರೆ. ಕ್ಷಣಾರ್ಧದಲ್ಲಿ ಅವರ ಕುತ್ತಿಗೆವರೆಗೂ ನೀರು ಹರಿದಿದ್ದು, ಆ ಬಳಿಕ ಹೆದರಿ ಕಬ್ಬಿಣದ ಶೇಳೆ ಕೈಬಿಟ್ಟ ಪರಿಣಾಮ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ.
ಸುದ್ದಿ ತಿಳಿದು ಶಾಸಕ ಅಮೃತ ದೇಸಾಯಿ ಭೇಟಿ ನೀಡಿದ್ದು, ಇದರ ಜೊತೆಗೆ ನವಲಗುಂದ ಹಾಗೂ ಧಾರವಾಡ ತಹಶೀಲ್ದಾರರು ಭೇಟಿ ನೀಡಿದ್ದಾರೆ. ಅಣ್ಣ ಹಾಗೂ ತಮ್ಮನಿಗೆ ಮದುವೆ ಆಗಿದ್ದು, ಆದರೆ ಮಡಿವಾಳಪ್ಪನಿಗೆ ಮದುವೆಯಾಗಿಲ್ಲ. ತಂದೆ-ತಾಯಿ ಇದ್ದು ಇವರದ್ದು ಬಡ ಕುಟುಂಬವಾಗಿದೆ.