Advertisement

ಚಿನ್ನದಲ್ಲಿ ಇಂದಿರಾ ತೂಗಿದ್ದವರಿಗೀಗ ಸಿರಿಧಾನ್ಯ ತುಲಾಭಾರ

12:35 AM Feb 05, 2019 | Team Udayavani |

ಬಾಗಲಕೋಟೆ: 1962-63ರ ಅವಧಿಯಲ್ಲಿ ಭಾರತ- ಚೀನಾ ನಡುವೆ ನಡೆದ ಯುದ್ಧದ ವೇಳೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರನ್ನು ಚಿನ್ನದಲ್ಲಿ ತುಲಾಭಾರ ಮಾಡಿ, ಅದೇ ಚಿನ್ನವನ್ನು ದೇಶದ ರಕ್ಷಣಾ ನಿಧಿಗೆ ನೀಡುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದ ಪ್ರಗತಿಪರ ರೈತ ಸೋಮಪ್ಪಗೌಡ ಬಿರಾದಾರ ಪಾಟೀಲಗೆ ಈಗ ಸಿರಿಧಾನ್ಯ ತುಲಾಭಾರ ಮಾಡಲಾಗುತ್ತಿದೆ.

Advertisement

ಬೀಳಗಿ ತಾಲೂಕು ಅಮಲಝರಿ ಗ್ರಾಮದ ಸೋಮಪ್ಪ ಗೌಡ ಬಿರಾದಾರ ಪಾಟೀಲ ಮತ್ತು ಅವರ ಧರ್ಮ ಪತ್ನಿ ತುಂಗಾಬಾಯಿ ಅವರಿಗೆ ಫೆ.9ರಂದು ಚಿಕ್ಕಗಲಗಲಿಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಕೆ.ಎಚ್. ಪಾಟೀಲ ಸಭಾ ಭವನದಲ್ಲಿ ತುಲಾಭಾರ ನಡೆಯಲಿದೆ.

ಯಾರು ಈ ಸೋಮಪ್ಪಗೌಡ?: ಸೋಮಪ್ಪಗೌಡ ಬಿರಾದಾರ ಪಾಟೀಲ ಶಿಕ್ಷಣ ಪ್ರೇಮಿಯಾಗಿ ಹಲವು ಶಾಲಾಕಾಲೇಜುಗಳಿಗೆ ಲಕ್ಷಾಂತರ ದೇಣಿಗೆ ನೀಡಿ, ಶಿಕ್ಷಣಕ್ಕೆ ಒತ್ತು ಕೊಟ್ಟವರು. ಮುಖ್ಯವಾಗಿ ಭಾರತ-ಚೀನಾ ಯುದ್ಧದ ವೇಳೆ ಭಾರತೀಯ ರಕ್ಷಣಾ ನಿಧಿಗೆ ಆರ್ಥಿಕ ನೆರವು ನೀಡಲು ಅಂದಿನ ಪ್ರಧಾನಿ ಇಂದಿರಾ ಮತ್ತು ರಾಜ್ಯದ ಸಿಎಂ ಎಸ್‌. ನಿಜಲಿಂಗಪ್ಪ ಅವರನ್ನು ಚಿನ್ನದ ತುಲಾಭಾರ ಮಾಡಿ ಆ ಚಿನ್ನವನ್ನು ರಕ್ಷಣಾ ನಿಧಿಗೆ ಕೊಡಲು ನಿರ್ಧರಿಸಲಾಗಿತ್ತು.

ಆಗ ಪಿ.ಎಂ. ನಾಡಗೌಡ ಸಚಿವರಾಗಿದ್ದರು. ಸಂಸದ ದುಬೆ, ದಿ.ಬಿ.ಎಂ. ಪಾಟೀಲ, ಬಾಗಲಕೋಟೆ ಉಪ ವಿಭಾಗದ ಅಧಿಕಾರಿ ಹೊಸಮನಿ ಮುಂತಾದವರು ಈ ಕಾರ್ಯಕ್ಕೆ ಮುಂದಾದಾಗ ಪ್ರಮುಖ ಜವಾಬ್ದಾರಿ ಪಡೆದು ಜಿಲ್ಲೆಯ ಪ್ರತಿ ಹಳ್ಳಿಗೂ ಸಂಚರಿಸಿ, ಚಿನ್ನ ಸಂಗ್ರಹಿಸಿದವರಲ್ಲಿ ಸೋಮಪ್ಪಗೌಡರು ಮೊದಲಿಗರು. ಆ ವೇಳೆ ಕಾರ್ಯಕ್ರಮವೂ ಯಶಸ್ವಿಯಾಯಿತು. ಹೀಗಾಗಿ ಅವರನ್ನು ಸ್ನೇಹಿತರು ‘ಚಿನ್ನದ ಹೀರೋ’ ಎಂದೇ ಕರೆದಿದ್ದರು. ಸೋಮಪ್ಪ ಗೌಡರಿಗೀಗ ವಯಸ್ಸು 96. ಹೀಗಾಗಿ ಅವರ ಮಕ್ಕಳು, ಮೊಮ್ಮಕ್ಕಳು, ಸ್ನೇಹಿತರು, ಅಭಿಮಾನಿಗಳು ಸೇರಿ ಸಿರಿಧಾನ್ಯ ತುಲಾಭಾರ ಮಾಡಲು ಮುಂದಾಗಿದ್ದಾರೆ.

ಬಾಗಲಕೋಟೆ ಪ್ರತ್ಯೇಕ ಜಿಲ್ಲೆಯಾಗುವ ಮುಂಚೆ 1960ರಿಂದ 1980ರವರೆಗೆ ವಿಜಯಪುರ ವರ್ತಕರ ಸಂಘದ ಅಧ್ಯಕ್ಷರಾಗಿ, ಜನತಾ ಬಜಾರ ಅಧ್ಯಕ್ಷರಾಗಿ, ಬಿಎಲ್‌ಡಿಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ ಹೀಗೆ ಹಲವು ರೀತಿ ಸಾರ್ವಜನಿಕ ಕ್ಷೇತ್ರದಲ್ಲಿ ಸೋಮಪ್ಪಗೌಡರು ಕೆಲಸ ಮಾಡಿದ್ದರು.

Advertisement

ಹಸಿರು ಕ್ರಾಂತಿಯ ನೇತೃತ್ವ: 1960ರ ದಶಕದಲ್ಲಿ ಹಸಿರು ಕ್ರಾಂತಿಯ ಆಂದೋಲನ ನಡೆದಿತ್ತು. ಸ್ವತಃ ಕೃಷಿ ಪದವೀ ಧರರೂ ಆಗಿರುವ ಸೋಮಪ್ಪಗೌಡರು ಅಖಂಡ ವಿಜಯ ಪುರ ಜಿಲ್ಲೆಯಲ್ಲಿ ಈ ಆಂದೋಲನದ ನೇತೃತ್ವ ವಹಿಸಿದ್ದರು. ಆಗ ರಾಜ್ಯದ ಕೃಷಿ ಇಲಾಖೆಯ ಮುಖ್ಯಸ್ಥರಾಗಿದ್ದ ಎಚ್.ಆರ್‌. ಅರಕೇರಿ ಅವರೊಂದಿಗೆ ಮಹತ್ವದ ಕಾರ್ಯದಲ್ಲಿ ತೊಡಗಿದ್ದರು. ಈ ಆಂದೋಲನದಿಂದಾಗಿಯೇ ಅಖಂಡ ಜಿಲ್ಲೆಯಲ್ಲಿ ಒಂದಷ್ಟು ಹಸಿರು ಕ್ರಾಂತಿ ಬೆಳೆಯಿತು. ಅವರು ಇಂದಿಗೂ ಕೃಷಿಕರಿಗೆ ಮಾರ್ಗದರ್ಶಕರಾಗಿದ್ದಾರೆ.

ಫೆ.9ಕ್ಕೆ ತುಲಾಭಾರ
ಚಿಕ್ಕಗಲಗಲಿಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಕೆ.ಎಚ್. ಪಾಟೀಲ ಸಭಾ ಭವನದಲ್ಲಿ ಫೆ.9ರಂದು ಸೋಮಪ್ಪಗೌಡ ಬಿರಾದಾರ ಪಾಟೀಲ ಮತ್ತು ಅವರ ಪತ್ನಿ ತುಂಗಾಬಾಯಿ ಅವರಿಗೆ ಪಂಚಧಾನ್ಯ (ಸಿರಿಧಾನ್ಯಗಳು)ಗಳ ಮೂಲಕ ತುಲಾಭಾರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ, ಗದಗ ಶಾಸಕ ಎಚ್.ಕೆ. ಪಾಟೀಲ, ಮಾಜಿ ಶಾಸಕರಾದ ಡಿ.ಆರ್‌. ಪಾಟೀಲ, ಜೆ.ಟಿ. ಪಾಟೀಲ, ಎನ್‌.ಎಸ್‌. ಖೇಡ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಭಾಗವಹಿಸಲಿದ್ದಾರೆ. ಹರಿಹರದ ಶ್ರೀ ವೇಮನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next