ಚನ್ನರಾಯಪಟ್ಟಣ: ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಅರಳಾಪುರ ಮಂಜೇಗೌಡ ಅವರನ್ನು ಸಂಘದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಸಂಘದ ರಾಜ್ಯ ಮಹಿಳಾಧ್ಯಕ್ಷೆ ನಾಗರತ್ನಮ್ಮ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಿಂಗಳ ಹಿಂದೆ ರಾಜ್ಯ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯದ ವಿವಿಧ ತಾಲೂಕು ಹಾಗೂ ಜಿಲ್ಲೆಯ ಪದಾಧಿಕಾರಿಗಳನ್ನು ಉಚ್ಚಾಟನೆಮಾಡಿದೆ. ಇದರಲ್ಲಿ ಚನ್ನರಾಯಪಟ್ಟಣತಾಲೂಕಿನವರಾದ ಅರಳಾಪುರ ಮಂಜೇಗೌಡ ಅವರೂ ಇದ್ದಾರೆ. ಇನ್ನು ಮುಂದೆ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘಕ್ಕೂ ಇವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕಬಿಳ್ತಿ ಪ್ರವೀಣ ಮಾತನಾಡಿ, ಫೆ.13 ರಂದು ಪಟ್ಟಣದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ರೈತ ಸ್ವಾಭಿಮಾನ ಸಮಾವೇಶ ನಡೆಸಲಾಗುತ್ತಿದೆ. ಅಂದು ಬೆಳಗ್ಗೆ 9ಕ್ಕೆ ಗುರುಭವನದಿಂದ ಹಳೆ ಬಸ್ ನಿಲ್ದಾಣದವರೆಗೆ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಬಿತ್ತನೆಗೆ ಸ್ಥಳೀಯ ಬೀಜ ಸಂರಕ್ಷಿಸುವುದು, ಬಹುರಾಷ್ಟ್ರೀಯ ಕಂಪನಿಗಳ ಬೀಜಗಳಿಂದ ರೈತರಿಗೆ ಆಗುತ್ತಿರುವ ಸಮಸ್ಯೆ ನಿವಾರಣೆ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು, ನೈಸರ್ಗಿಕ ಪದ್ಧತಿ ಬೇಸಾಯ, ಜೈವಿಕ ಗೊಬ್ಬರ ಬಳಕೆ ಮಾಡಿ ಬೇಸಾಯ ಮಾಡುವ ಬಗ್ಗೆ ರೈತರಿಗೆ ತಿಳಿಸಲಾಗುತ್ತದೆ ಎಂದರು.
ಸಮಾವೇಶದಲ್ಲಿ ಆದಿಚುಂಚನಗಿರಿ ಹಾಸನ ಶಾಖಾ ಮಠದ ಕಾರ್ಯದರ್ಶಿ ಶಂಭುನಾಥಸ್ವಾಮೀಜಿ, ಸಾಯಿಮಂದಿರದ ಗುರುಮೂರ್ತಿ ಗುರೂಜಿ, ರೈತ ಸಂಘದ ರಾಜ್ಯಾಧ್ಯಕ್ಷ ವಿ.ಆರ್ .ನಾರಾಯಣರೆಡ್ಡಿ, ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ಜಿಲ್ಲೆ ಎಲ್ಲಾ ತಾಲೂಕು ಸಂಘದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ತಾಲೂಕು ಘಟಕದ ಅಧ್ಯಕ್ಷ ಶಂಕರ್, ಹೊಳೆನರಸೀಪುರ ತಾಲೂಕು ಅಧ್ಯಕ್ಷ ಮಲ್ಲೇಶಗೌಡ, ಜಿಲ್ಲಾ ವಕ್ತಾರ ಗಿರಿರಾಜ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.