ಶಿಗ್ಗಾವಿ: ಹವಾಮಾನ ಆಧಾರಿತ ಕೃಷಿ ಕ್ಷೇತ್ರದಲ್ಲಿ ಬರೀ ನಷ್ಟವನ್ನೇ ಅನುಭವಿಸುತ್ತಿದ್ದ ತಾಲೂಕಿನ ತಿಮ್ಮಾಪೂರದ ರೈತರೊಬ್ಬರು ಪ್ರಸಕ್ತ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ನೀಡುವ ಕದರಿ ಲೇಪಾಕ್ಷಿ ಹೊಸ ತಳಿಯ ಶೇಂಗಾ ಬೆಳೆದು ಮೊದಲ ಪ್ರಯೋಗದಲ್ಲೇ ಉತ್ತಮ ಇಳುವರಿ ಪಡೆದು ಖುಷಿಯಲ್ಲಿದ್ದಾರೆ.
ತಾಲೂಕಿನ ತಿಮ್ಮಾಪೂರ ಗ್ರಾಮದ ಪದವೀಧರ ರೈತ ರಮಾನಂದ ಕಮ್ಮಾರ ಅವರು ಪ್ರತಿ ವರ್ಷ ಅಕಾಲಿಕ ಮಳೆ ಕಾರಣ ಕೃಷಿಯಲ್ಲಿ ನಷ್ಟವನ್ನೇ ಅನುಭವಿಸಿದ್ದರು. ಕೇವಲ ಮನೆಯ ಅವಶ್ಯಕತೆಗೆ ಬೇಕಾದಷ್ಟು ಆಹಾರ ಧಾನ್ಯಗಳನ್ನು ಮಾತ್ರ ಬೆಳೆಯುತ್ತಿದ್ದ ಅವರಿಗೆ ಹೊಲದಲ್ಲಿ ಲಾಭವೂ ಅಷ್ಟಕ್ಕಷ್ಟೇ ಸಿಗುವಂತಾಗಿತ್ತು. ತಮ್ಮ ಹೊಸ ಕೃಷಿ ಚಿಂತನೆಯಡಿ ಬಹು ಬೇಗ ಆರ್ಥಿಕ ಚೇತರಿಕೆ ಪಡೆಯಲು ಮುಂದಾದ ಇವರು ಕೇವಲ ಮುಂಗಾರಿನಲ್ಲಿ ಮಾತ್ರ ಬೆಳೆಯಬೇಕಾದ ಆಂಧ್ರಪ್ರದೇಶದ ಉತ್ತಮ ಎಣ್ಣೆ ಅಂಶವಿರುವ ಲೇಪಾಕ್ಷಿ ತಳಿಯ ಶೇಂಗಾ ಬೆಳೆದು ಉತ್ತಮ ಫಸಲು ಕಂಡುಕೊಂಡಿದ್ದಾರೆ.
ಪ್ರಸಕ್ತ ನೆರೆಯ ಆಂಧ್ರಪ್ರದೇಶದ ವಿಶ್ವವಿದ್ಯಾಲಯ ವ್ಯಾಪ್ತಿಯ ಅನಂತಪೂರ ಜಿಲ್ಲೆಯ ಕದಡಿ ಗ್ರೌಂಡ್‌ನಟ್ ರಿಸರ್ಚ್ ಇನ್ ಸ್ಟಿಟ್ಯೂಟ್‌ನ ಕೃಷಿ ವಿಜ್ಞಾನಿ ಡಾ|ಶಿವಶಂಕರ ನಾಯಕ್ ಅವರು 2018ರಲ್ಲಿಯೇ ಸಂಶೋಧಿಸಿದ ಈ ತಳಿಯನ್ನು ಇಳುವರಿ ಪ್ರಯೋಗಕ್ಕಾಗಿ ನೀಡಿದ್ದರು. ಇದು ಕಡಿಮೆ ಖರ್ಚಿನಲ್ಲಿ ಬೆಳೆಯುವ, ರೋಗ ನಿರೋಧಕ ಶಕ್ತಿ ಹೆಚ್ಚಿರುವ, ಕಡಿಮೆ ಮಳೆ ಬೀಳುವ ಹವಾಮಾನದ ಪ್ರದೇಶದಲ್ಲಿ ಬೆಳೆಯುವ ಶಕ್ತಿ ಹೊಂದಿದ ತಳಿ. ಅಲ್ಲದೇ ಉತ್ತಮ ಕಾಯಿ ಕಟ್ಟುವ ಅಂಶಗಳನ್ನೊಳಗೊಂಡ ಬೀಜ ಪ್ರಯೋಗ ಹಂತದಲ್ಲಿ ರೈತರಿಗೆ ನೀಡಿದ್ದರು.
ನಂತರ 2020ರ ನವಂಬರ್‌ನಲ್ಲಿ ಬೆಳೆ ಕುರಿತು ಕೇಂದ್ರ ಅನುಮೋದನೆ ನೀಡಿತ್ತು. ಈಗ ಈ ತಳಿ ರಾಜ್ಯಕ್ಕೂ ಕಾಲಿಟ್ಟಿದೆ. ಕದರಿ ಲೇಪಾಕ್ಷಿ ತಳಿ ಪ್ರತಿ ಎಕರೆಗೆ 25 ರಿಂದ 30 ಕ್ವಿಂಟಲ್‌ಗೂ ಹೆಚ್ಚು ಇಳುವರಿ ಕೊಡುವ ಶೇ.52 ಎಣ್ಣೆ ಅಂಶ ಹೊಂದಿದ ತಳಿಯಾಗಿದೆ. ಅಲ್ಲದೇ ರೋಗಬಾಧೆ ಇಲ್ಲದೇ ನಿರೋಧಕ ತಳಿಯಾಗಿದೆ. ಇದಕ್ಕೆ ಕೆಂಪು ಮರಳು ಮಿಶ್ರಿತ ಮಣ್ಣು ಅತ್ಯುತ್ತಮ ಎನ್ನುತ್ತಾರೆ ಕೃಷಿಕರು. ಮೂರು ತಿಂಗಳು ಹತ್ತು ದಿನಗಳಲ್ಲಿ ಕಟಾವಿಗೆ ಬರುವ ಈ ತಳಿಯಿಂದ ಮಳೆಗಾಲ, ನೀರಾವರಿಯಲ್ಲೂ ಉತ್ತಮ ಫಸಲು ಕಾಣಬಹುದಾಗಿದೆ. ಸಾವಯವ, ರಾಸಾಯನಿಕ ಎರಡೂ ಪದ್ಧತಿಗಳಲ್ಲೂ ನಿರೀಕ್ಷಿತ ಲಾಭ ತರುವ ಬೆಳೆ ಇದಾಗಿದೆ.
ಸದ್ಯ ಮುಂಗಾರಿನ ಜತೆಗೆ ನೀರಾವರಿ ಕ್ಷೇತ್ರದಲ್ಲೂ ಉತ್ತಮ ಫಸಲು ಕಂಡು ಬಂದಿದೆ. ಕೇವಲ ಇಳುವರಿ ಪ್ರಯೋಗಕ್ಕಾಗಿಯೇ ರೈತರಿಗೆ ನೀಡಿದ್ದ ಸ್ಯಾಂಪಲ್ ಬೀಜದಲ್ಲಿಯೇ ಒಬ್ಬರಿಗೊಬ್ಬರು ಹಂಚಿಕೊಂಡು ಬೀಜ ಮಾರಾಟ ಮಾಡಿ ನೂರಾರು ಎಕರೆ ಕ್ಷೇತ್ರ ಹೆಚ್ಚಿಸಿಕೊಂಡಿದ್ದಾರೆ. ನಮ್ಮ ರಾಜ್ಯದಲ್ಲಿ ಬಿತ್ತನೆ ಬೀಜ ಲಭ್ಯತೆ ಇಲ್ಲ. ಶೇಂಗಾ ಬೀಜ ಈಗ ಕಾಳಸಂತೆಯಲ್ಲಿಯೇ ಕ್ವಿಂಟಲ್‌ಗೆ 35ರಿಂದ 40 ಸಾವಿರ ರೂ. ಏರಿಕೆ ದರದಲ್ಲಿ ಮಾರಾಟವಾಗುತ್ತಿದೆ. –
ರಮಾನಂದ ಕಮ್ಮಾರ, ತಿಮ್ಮಾಪೂರ ರೈತ.
ಕೃಷಿ ಅಧಿಕಾರಿಗಳ ಭೇಟಿ- ಶ್ಲಾಘನೆ: ತಿಮ್ಮಾಪೂರ ರೈತ ರಮಾನಂದ ಕಮ್ಮಾರ ಅವರು ಬೆಳೆಗೆ ಕ್ರಿಮಿನಾಶಕ, ರಸಗೊಬ್ಬರ ಬಳಸಿಲ್ಲ. ಬದಲಾಗಿ ತಿಪ್ಪೆ ಗೊಬ್ಬರ, ಸ್ವಯಂ ಜೀವಾಮೃತ ತಯಾರಿಸಿ ಬಳಕೆ ಮಾಡಿದ್ದಾರೆ. 100 ರಿಂದ 150 ಕಾಯಿಗಳನ್ನು ಕಟ್ಟಿದ್ದು, ಜಮೀನಿಗೆ ಸಹಾಯಕ ಕೃಷಿ ನಿರ್ದೇಶಕ ಸುರೇಶ ದೀಕ್ಷಿತ, ಕೃಷಿ ಅ ಧಿಕಾರಿ ಅರುಣಕುಮಾರ ಇತರರು ಭೇಟಿ ನೀಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕೃಷಿಕರಿಂದ ಮೆಚ್ಚುಗೆ: ರೈತ ರಮಾನಂದ ಕಮ್ಮಾರ ಅವರು ಬಳಸಿದ ಕದರಿ ಲೇಪಾಕ್ಷಿ 1812 ತಳಿಯ ಬಗ್ಗೆ ಸುತ್ತಲಿನ ಕೃಷಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರೈತರಷ್ಟೇ ಅಲ್ಲ ಜಮೀನು ನೋಡಲು ಕೃಷಿ ಇಲಾಖೆ ಜತೆಗೆ ವಿವಿಧ ಇಲಾಖೆ ಅಧಿಕಾರಿಗಳೂ ಭೇಟಿ ನೀಡಿ ಶ್ಲಾಘಿಸಿದ್ದಾರೆ. ಕದರಿ ಲೇಪಾಕ್ಷಿ ತಳಿಯ ಶೇಂಗಾ ಬೆಳೆಯನ್ನು ಹೊಸ ತಳಿಯಾಗಿದ್ದು ಉತ್ತಮ ಫಸಲು ಬರುವ ನಿರೀಕ್ಷೆ ಇದೆ.