Advertisement

ಪಂಚಾಯತ್‌ಗೇ ಉಚಿತವಾಗಿ ಕುಡಿಯುವ ನೀರು ನೀಡುವ ರೈತ

11:19 AM Jan 05, 2020 | mahesh |

ಹೆಸರು: ದಯಾನಂದ ಬಿ. ಸುವರ್ಣ
ಏನೇನು ಕೃಷಿ: ಹೈನುಗಾರಿಕೆ, ತೆಂಗು, ಅಡಿಕೆ, ತರಕಾರಿ
ಎಷ್ಟು ವರ್ಷ:35ವರ್ಷಗಳಿಂದ
ಕೃಷಿ ಪ್ರದೇಶ:12ಎಕರೆ
ಸಂಪರ್ಕ: 9916564578

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಕಟಪಾಡಿ: ಹಲವು ತಳಿಗಳ ಭತ್ತದ ಬೆಳೆಯನ್ನು ಸವಾಲಾಗಿ ಸ್ವೀಕರಿಸಿ ಉತ್ತಮ ಫಸಲನ್ನು ಪಡೆಯುವ ಮೂಲಕ ಸಾಧಕ ಆದರ್ಶ ಪ್ರಗತಿಪರ ಕೃಷಿಕರ ಸಾಲಿನಲ್ಲಿ ಮಣಿಪುರ ವೆಸ್ಟ್‌ ದಯಾನಂದ ಬಿ. ಸುವರ್ಣ ನಿಲ್ಲುತ್ತಾರೆ.

ಶಿಕ್ಷಣ ಪೂರೈಸಿ 35 ವರ್ಷಗಳ ಕಾಲ ಮುಂಬಯಿಯಲ್ಲಿ ಟೆಕ್ಸ್‌ ಟೈಲ್ಸ್‌ ಉದ್ಯಮವನ್ನು ನಡೆಸಿದ್ದ ಇವರು ಕೃಷಿಯ ಆಕರ್ಷಣೆಯಿಂದ 2002ರಲ್ಲಿ ಹುಟ್ಟೂರಿಗೆ ಮರಳಿದ್ದು, ತಮ್ಮ 1 ಎಕರೆ ತೋಟ ಮತ್ತು 1 ಎಕರೆ ಕೃಷಿ ಭೂಮಿಯಲ್ಲಿ ಕೃಷಿ ಕಾಯಕ ನಿರತರಾಗಿದ್ದಾರೆ. ಮಾತ್ರವಲ್ಲದೇ ಸುಮಾರು 10 ಎಕರೆಯಷ್ಟು ಹಡೀಲು ಭೂಮಿಯನ್ನು ಗೇಣಿಗೆ ಪಡೆದುಕೊಂಡು ಭತ್ತದ ಫಸಲನ್ನು ಪಡೆಯುವ ಮೂಲಕ ಸಾಧಕ ಕೃಷಿಕರಾಗಿ ಕೃಷಿ ಇಲಾಖೆ, ಕೃಷಿ ಸಂಘಟನೆಗಳು ಗುರುತಿಸಿ ಪ್ರಶಸ್ತಿ ನೀಡಿ, ಸಮ್ಮಾನದ ಗೌರವವನ್ನೂ ಸಲ್ಲಿಸಿವೆ.ಈ ಭತ್ತದ ಕೃಷಿಯೊಂದಿಗೆ ತೆಂಗು, ಅಡಿಕೆ, ತರಕಾರಿ, ಕಾಳು ಮೆಣಸು, ಉದ್ದು, ಹೈನುಗಾರಿಕೆ ಜತೆಗೆ ಕೋಳಿ ಸಾಕಣೆಯಲ್ಲಿ ಎತ್ತಿದ ಕೈ. ವಾರ್ಷಿಕವಾಗಿ 600 ಮುಡಿ ಅಕ್ಕಿಯನ್ನು ಪಡೆಯುವಂತಹ ಕೃಷಿಯನ್ನು ನಡೆಸುವ ದಯಾನಂದ ಸುವರ್ಣರು, ಟ್ರ್ಯಾಕ್ಟರ್‌, ಟಿಲ್ಲರ್‌, ಕಟಾವು ಯಂತ್ರ, ಎರಡು ಪಂಪ್‌ ಸೆಟ್‌, ವೀಡರ್‌, ಸ್ಪೆಯರ್‌ನ್ನು ಸ್ವಂತವಾಗಿ ಹೊಂದಿದ್ದಾರೆ.

ಪಂಚಮುಖೀ ತಳಿ ಭತ್ತ
ಕೃಷಿಯಲ್ಲಿ ಸಾಕಷ್ಟು ಪ್ರಯೋಗ ಶೀಲರಾಗಿದ್ದು ಈ ಬಾರಿ ಪಂಚಮುಖೀ ಭತ್ತದ ಹೊಸತಳಿಯನ್ನು ಪ್ರಾಯೋಗಿಕವಾಗಿ ಬೆಳೆಸುತ್ತಿದ್ದಾರೆ. ಬಿತ್ತನೆ ಬೀಜವಾಗಿ ನೀಡುತ್ತಿದ್ದಾರೆ. ಎಕರೆಗೆ 22 ಕ್ವಿಂಟಾಲ್‌ ಇಳುವರಿ ಪಡೆದಿದ್ದು, ಕೆಂಪು, ರುಚಿಕರ ಅಕ್ಕಿ ಇದಾಗಿದ್ದು, ನೆರೆ ಬರುವ ತಗ್ಗು ಪ್ರದೇಶದ ಗದ್ದೆಗಳಿಗೆ ಉತ್ತಮ ತಳಿಯಾಗಿದೆ ಎನ್ನುತ್ತಾರೆ. ಏಕೆಂದರೆ ಈ ತಳಿಯ ಬೆಳೆಯು ಬೇಗನೆ ಕೊಳೆಯುವುದಿಲ್ಲ ಆದುವೇ ವಿಶೇಷತೆ ಆಗಿದೆ ಎಂದು ಮಾಹಿತಿ ನೀಡುತ್ತಿದ್ದಾರೆ. ಕಾರ್ತಿ ಮತ್ತು ಕೊಳಕೆಯ ಎರಡು ಬೆಳೆಯನ್ನು ಬೆಳೆಯುತ್ತಿದ್ದಾರೆ.

Advertisement

ಸುಸಜ್ಜಿತ ಬ್ರೌನ್‌ ಎಗ್‌ ಕೋಳಿ ಸಾಕಣೆ
ಸುಸಜ್ಜಿತವಾಗಿ ಬ್ರೌನ್‌ಎಗ್‌ ಕೋಳಿ ಸಾಕಾಣೆಯನ್ನು ಪತ್ನಿ ಇಂದಿರಾ ಸುವರ್ಣ ಜತೆಗೂಡಿ ನಡೆಸುತ್ತಿದ್ದು, ಕಲರ್‌ ಕೋಳಿಯ ಮೂಲಕ ಕಲರ್‌ ಮೊಟ್ಟೆಯ ಮಾರುಕಟ್ಟೆ ನಡೆಸುತ್ತಿದ್ದು, ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ಬೃಹತ್‌ ವ್ಯಾಪಾರದ ಮಾಲ್‌ಗ‌ಳಲ್ಲಿ ಸ್ವಂತ ಮಾರುಕಟ್ಟೆಯನ್ನು ಕಂಡುಕೊಂಡಿದ್ದಾರೆ.

ಮಣಿಪುರ ಗ್ರಾ.ಪಂಗೆ ಕುಡಿಯುವ ನೀರು ನೀಡುವ ರೈತ
ಕುಡಿಯುವ ನೀರಿನ ಬವಣೆಯನ್ನು ನೀಗಿಸುವ ಸಲುವಾಗಿ ಮಣಿಪುರ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಮನೆ ಮನೆಗೆ ಒದಗಿಸಲಾಗುವ ಕುಡಿಯುವ ನಳ್ಳಿ ನೀರಿನ ಸಂಪರ್ಕಕ್ಕೆ ದಯಾನಂದ ಸುವರ್ಣ ಅವರ ಮನೆಯ ಬಾವಿಯ ನೀರೇ ಆಶ್ರಯವಾಗಿದೆ. ಪರಿಸರದಲ್ಲಿ ಉಪ್ಪು ನೀರು ಬಾಧಿತವಾಗಿರುವ ಸುಮಾರು 80ರಷ್ಟು ಮನೆಗಳಿಗೆ ತನ್ನದೇ ಮನೆಯ ಬಾವಿಯ ಕುಡಿಯುವ ನೀರನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿರಂತರವಾಗಿ ಕಳೆದ 4 ವರ್ಷಗಳಿಂದ ನೀಡುತ್ತಾ ಬರುತ್ತಿದ್ದು, ಗ್ರಾಮ ಪಂಚಾಯತ್‌ ಮಟ್ಟದಲ್ಲಿಯೂ ಸಮ್ಮಾನಿಸಿದ್ದಾರೆ. 4 ದೇಸೀ ತಳಿಯ ದನಗಳ ಮೂಲಕ ಹೈನುಗಾರಿಕೆಯನ್ನೂ ನಡೆಸುತ್ತಿದ್ದು, ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿದ್ದಾರೆ. ಭತ್ತದ ಇರ್ಗ ತಳಿ ಮೂಲಕ ಎಕರೆಗೆ 20 ಕ್ವಿಂಟಾಲ್‌ ಹಾಗೂ ಎಂ.ಒ.4 ತಳಿಯಲ್ಲಿ ಎಕರೆಗೆ 30 ಕ್ವಿಂಟಾಲ್‌ ಭತ್ತವನ್ನು ತೆಗೆಯುವ ಮೂಲಕ ಕೃಷಿ ಪ್ರಶಸ್ತಿ ಯೋಜನೆಯಡಿ ಭತ್ತದ ಬೆಳೆ ಸ್ಪರ್ಧೆಯಲ್ಲಿ ಉಡುಪಿ ತಾ|ಮಟ್ಟದಲ್ಲಿ ಕೃಷಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುತ್ತಾರೆ.

ಪ್ರಶಸ್ತಿ
2014-15ನೇ ಸಾಲಿನ ಭತ್ತದ ಬೆಳೆಯಲ್ಲಿ ಉಡುಪಿ ತಾಲೂಕು ಮಟ್ಟದಲ್ಲಿ ಕೃಷಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಕೃಷಿಯಲ್ಲಿನ ಅನುಪಮ ಸೇವೆಯನ್ನು ಗುರುತಿಸಿ ಜಿಲ್ಲಾ ಕೃಷಿಕ ಸಂಘ ಆದರ್ಶ ಪ್ರಗತಿ ಪರ ಕೃಷಿಕ ಎಂದು ಗೌರವಿಸಿ ಸಮ್ಮಾನಿಸಿದೆ.ಸ್ಥಳೀಯವಾಗಿ ಸಂಘ ಸಂಸ್ಥೆಗಳಿಂದ ಸಮ್ಮಾನಕ್ಕೆ ಭಾಜನರಾಗಿರುತ್ತಾರೆ.

ಸ್ವಂತ ಕೃಷಿ ಉತ್ತಮ
ಯುವ ಪೀಳಿಗೆಯು ಹೆಚ್ಚು ಕೃಷಿಯತ್ತ ಮನಸು ಹರಿಸಬೇಕಿದೆ. ಕೆಲಸ ಹುಡುಕಿಕೊಂಡು ಹೋಗುವ ಬದಲು ಸ್ವಂತ ಕೃಷಿ ಉತ್ತಮ ಲಾಭದಾಯಕ. ಯಾವತ್ತೂ ಕೃಷಿ ಕೈ ಸುಟ್ಟಿಲ್ಲ. ಯಾಂತ್ರಿಕ ಕೃಷಿ ಲಾಭದಾಯಕ.
ಸಾಂಘಿಕ, ಸಮೂಹ ಕೃಷಿ ಹೊಂದಾಣಿಕೆಯಿಂದ ಲಾಭವನ್ನೂ ಹೆಚ್ಚಿಸುತ್ತದೆ. ನಾಟಿ ಮತ್ತು ಕಟಾವಿಗೆ
ಬಾಡಿಗೆ ಯಂತ್ರಗಳನ್ನು ಬಳಸುತ್ತಿದ್ದು, ಯಾಂತ್ರೀಕೃತ  ಕೃಷಿಯುಲಾಭದಾಯಕವಾಗಿದೆ. ತೆಂಗಿನ ಮತ್ತು ಅಡಿಕೆಯ ತೋಟದಲ್ಲಿ ಬೆಳೆಗೆ ಹೋಲ್‌ ಸೇಲ್‌ ವ್ಯಾಪಾರವು ಸೂಕ್ತವಾಗಿದೆ. ಕೃಷಿಯನ್ನು ಉದ್ಯೋಗವಾಗಿಸಿಕೊಂಡರೆ ಆಹಾರದಲ್ಲಿ ಸ್ವಾವಲಂಬಿಯಾಗಿ ಬದುಕಲು ಸಾಧ್ಯ.
– ದಯಾನಂದ ಬಿ. ಸುವರ್ಣ, ಮಣಿಪುರ

ವಿಜಯ ಆಚಾರ್ಯ, ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next