Advertisement

ಕಾಯ್ದೆ ಅಮಾನತು ಪ್ರಸ್ತಾವ ತಿರಸ್ಕಾರ : ಕಾಯ್ದೆ ಸಂಪೂರ್ಣ ರದ್ದು ಮಾಡಲು ರೈತರ ಪಟ್ಟು

01:24 AM Jan 22, 2021 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರ ಮತ್ತು ರೈತ ಸಂಘಟನೆಗಳ ನಡುವಿನ ಕೃಷಿ ಕಾಯ್ದೆಗಳ ಸಂಘರ್ಷ ನಿಲ್ಲುವ ಹಾಗೆ ಕಾಣಿಸುತ್ತಿಲ್ಲ.
ಬುಧವಾರದ ಮಾತುಕತೆ ವೇಳೆ 18 ತಿಂಗಳುಗಳ ಕಾಲ ಮೂರು ಕಾಯ್ದೆಗಳನ್ನು ಅಮಾನತಿನಲ್ಲಿಡುವ ಬಗ್ಗೆ ಕೇಂದ್ರ ಸರಕಾರ ಇಟ್ಟಿದ್ದ ಪ್ರಸ್ತಾವವನ್ನು ರೈತ ಸಂಘಟನೆಗಳು ತಿರಸ್ಕರಿಸಿವೆ. ಇದಕ್ಕೆ ಬದಲಾಗಿ ಮೂರು ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎಂದು ಪಟ್ಟು ಹಿಡಿದಿವೆ. ಈ ಬಗ್ಗೆ ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿಕೆ ಹೊರಡಿಸಿದೆ.

Advertisement

ಗುರುವಾರ ನಡೆದ ರೈತ ಸಂಘಟನೆಗಳ ಆಂತರಿಕ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ಮಧ್ಯೆ ಶುಕ್ರವಾರ ಕೇಂದ್ರ ಸರಕಾರ ಮತ್ತು ರೈತ ಸಂಘಟನೆಗಳ ನಡುವೆ 11ನೇ ಸುತ್ತಿನ ಸಭೆ ನಡೆಯಲಿದೆ. ಬುಧವಾರ ಮಾತನಾಡಿದ್ದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ಶುಕ್ರವಾರದ ಸಭೆ ಅನಂತರ ರೈತರ ಪ್ರತಿಭಟನೆ ಅಂತ್ಯವಾಗಬಹುದು ಎಂದಿದ್ದರು.

ರೈತರ ಜತೆ ಸುಪ್ರೀಂ ಸಮಿತಿ ಮಾತುಕತೆ : ಈ ಮಧ್ಯೆ ಕೇಂದ್ರ ಸರಕಾರ ಮತ್ತು ರೈತ ಸಂಘಟನೆಗಳ ನಡುವೆ ಸಮನ್ವಯಕ್ಕಾಗಿ ಸುಪ್ರೀಂಕೋರ್ಟ್‌ ನೇಮಕ ಮಾಡಿರುವ ಸಮಿತಿ, ರೈತ ಮುಖಂಡರ ಜತೆ ಮಾತುಕತೆ ಶುರು ಮಾಡಿದೆ. ಗುರುವಾರ ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯಗಳ ರೈತ ಮುಖಂಡರ ಜತೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಮಾಲೋಚನೆ ನಡೆಸಿದೆ. ಸಭೆಯಲ್ಲಿ ಸಮಿತಿಯ ಸದಸ್ಯರಾದ ಅನಿಲ್‌ ಘನಾವತ್‌, ಡಾ| ಅಶೋಕ್‌ ಗುಲಾತಿ ಮತ್ತು ಡಾ| ಪ್ರಮೋದ್‌ ಜೋಶಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು ಕಾಯ್ದೆಯಲ್ಲಿನ ಅಂಶಗಳು ಹಾಗೂ ಜಾರಿ ಮಾಡುವ ಮುನ್ನ ಸುಧಾರಿಸಬೇಕಾದ ಅಂಶಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

ಟ್ರ್ಯಾಕ್ಟರ್‌ ರ‍್ಯಾಲಿ ಖಚಿತ
ಗಣರಾಜ್ಯೋತ್ಸವದ ದಿನ ದಿಲ್ಲಿಯಲ್ಲಿ ಟ್ರ್ಯಾಕ್ಟರ್‌ ರ‍್ಯಾಲಿ ನಡೆಸಿಯೇ ತೀರುವುದಾಗಿ ರೈತರು ಪಟ್ಟು ಹಿಡಿದಿದ್ದಾರೆ. ದಿಲ್ಲಿ ಪೊಲೀಸರು ಮತ್ತು ರೈತರೇ ಈ ವಿಚಾರದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬ ಸುಪ್ರೀಂ ಕೋರ್ಟ್‌ ಸೂಚನೆ ಅನ್ವಯ, ಗುರುವಾರ ರೈತರು ಮತ್ತು ಪೊಲೀಸರು ಸಂಧಾನ ಮಾತುಕತೆ ನಡೆಸಿದರು. ದಿಲ್ಲಿ ಹೊರ ಭಾಗದಲ್ಲಿ ಟ್ರ್ಯಾಕ್ಟರ್‌ ರ‍್ಯಾಲಿ ನಡೆಸಿ ಎಂಬುದು ಪೊಲೀಸರ ಹೇಳಿಕೆ. ಆದರೆ ಇದಕ್ಕೆ ಒಪ್ಪದ ರೈತ ಮುಖಂಡರು, ದಿಲ್ಲಿಯ ಔಟರ್‌ ರಿಂಗ್‌ ರೋಡ್‌ನಲ್ಲಿಯೇ ರ‍್ಯಾಲಿ ನಡೆಸುವುದಾಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಗುರುವಾರದ ಮಾತುಕತೆ ಅಪೂರ್ಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next