ಹೊಳಲ್ಕೆರೆ: ಕೃಷಿ ಚಟುವಟಿಕೆಗೆ ಕನಿಷ್ಠ ಪಕ್ಷ 5 ಗಂಟೆ ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪಟ್ಟಣದ ಬೆಸ್ಕಾಂ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ ಎರಡು ದಿನ ಪೂರೈಸಿತು.
ಇಲ್ಲಿಯ ತನಕ ಯಾವುದೇ ಜನಪ್ರತಿನಿಧಿ, ಬೆಸ್ಕಾಂ ಇಂಜಿನಿಯರ್ ಸೇರಿದಂತೆ ಯಾರೊಬ್ಬರೂ ಪ್ರತಿಭಟನಾನಿರತರನ್ನು ಭೇಟಿ ಮಾಡಿ ಅಹವಾಲು ಆಲಿಸಿಲ್ಲ. ಇದರಿಂದಾಗಿ ರೈತರು ಆಕ್ರೋಶಗೊಂಡಿದ್ದು, ಬುಧವಾರದಿಂದ ಉಗ್ರ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.
ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಮಾತನಾಡಿ, ರಾಜ್ಯ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಅನ್ನದಾತರಿಗೆ ಯಾವುದೇ ಸೌಲಭ್ಯ ಕಲ್ಪಿಸದೆ ರೈತ ಪರ ಎನ್ನುತ್ತಾ ಮೊಸಳೆ ಕಣ್ಣೀರು ಸುರಿಸುವ ನಾಟಕ ಮಾಡುತ್ತಿದೆ ಎಂದು ಆರೋಪಿಸಿದರು.
ಹೊಳಲ್ಕೆರೆ ತಾಲೂಕಿನಲ್ಲಿ ಕೃಷಿ ಮತ್ತು ತೋಟಗಾರಿಕೆ, ವಿದ್ಯುತ್ ಇಲ್ಲದೆ ನಾಶವಾಗುವ ಹಂತಕ್ಕೆ ತಲುಪಿದೆ. ರೈತರು ಸಾಲ ಮಾಡಿ ತೋಟಗಳನ್ನು ಉಳಿಸಿಕೊಂಡಿದ್ದಾರೆ. ವಿದ್ಯುತ್ ಇಲ್ಲದೆ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ 5 ಗಂಟೆ ವಿದ್ಯುತ್ ಪೂರೈಕೆ ಮಾಡಲು ಜಿಲ್ಲಾದಳಿತ ಮುಂದಾಗಬೇಕೆಂದು ಒತ್ತಾಯಿಸಿದರು.
ಕೆರೆಗಳಿಗೆ ನದಿ ನೀರು ಹರಿಸುವುದರಿಂದ ವಿದ್ಯುತ್ ಸಮಸ್ಯೆ ಕಡಿಮೆಯಾಗುವುದಿಲ್ಲ. ಕೃಷಿಗೆ ಶಾಶ್ವತವಾಗಿ ನದಿ ನೀರು ಹರಿಯುವಂತಹ ವ್ಯವಸ್ಥೆ ಮಾಡಬೇಕು. ಜಮೀನುಗಳಿಗೆನೀರು ನೇರವಾಗಿ ಹರಿಯುವ ಕೆಲಸ ಆಗಬೇಕು. ಆಗ ರೈತರಿಗೆ ವಿದ್ಯುತ್, ಬೋರ್ ಅಗತ್ಯವಿರುವುದಿಲ್ಲ ಎಂದು ಅಭಿಪ್ರಾಯಪಟ್ಟರು.