ಪುತ್ತೂರು: ಕಳೆದ ಹದಿನೇಳು ವರ್ಷಗಳಿಂದ ಕೃಷಿಕರೊಬ್ಬರು ಜಲ ವಿದ್ಯುತ್ ಘಟಕದ ಮೂಲಕ ಮಳೆಗಾಲದ ಆರು ತಿಂಗಳು ವಿದ್ಯುತ್ ಉತ್ಪಾದಿಸಿ ಮನೆ ಬೆಳಗುತ್ತಿದ್ದಾರೆ.
ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು ಈ ಸಾಧಕ. ಮಳೆಗಾಲದ ಆರಂಭದ ತಿಂಗಳಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಿ ಆರು ತಿಂಗಳ ಕಾಲ ಸ್ವಂತ ವಿದ್ಯುತ್‌ನಲ್ಲೇ ಬೆಳಕು ಪಡೆಯುವ ಮೂಲಕ ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬನೆಯ ಹೆಜ್ಜೆ ಇರಿಸಿ ಮಾದರಿಯಾಗಿದ್ದಾರೆ.
ಕೊಪ್ಪದಲ್ಲಿ ರೈತರೊಬ್ಬರು ವಿದ್ಯುತ್ ಉತ್ಪಾದಿಸುವ ಕುರಿತು ಮಾಧ್ಯಮದ ಮೂಲಕ ಮಾಹಿತಿ ಪಡೆದುಕೊಂಡ ಇವರು ತನ್ನ ಬಲಾ°ಡಿನ 16 ಎಕ್ರೆ ಜಾಗದ ಎತ್ತರ ಪ್ರದೇಶದಲ್ಲಿ 3 ಲಕ್ಷ ಲೀಟರ್ ನೀರು ಸಂಗ್ರಹದ ಟ್ಯಾಂಕ್ ನಿರ್ಮಿಸಿ ವಿದ್ಯುತ್ ಉತ್ಪಾದನೆಗೆ ತೊಡಗಿದರು.ಆ ಟ್ಯಾಂಕ್‌ನ ನೀರನ್ನು ಗುರುತ್ವಾಕರ್ಷಣೆಯ ಒತ್ತಡದ ಮೂಲಕ ಪೈಪಿನಲ್ಲಿ ತಗ್ಗು ಪ್ರದೇಶಕ್ಕೆ ಹರಿಸಿ ಟಬೈìನ್ ಮೂಲಕ ವಿದ್ಯುತ್ ಉತ್ಪಾದನೆಗೆ ಸಜ್ಜುಗೊಳಿಸಲಾಗಿದೆ.
ಆರಂಭಕ್ಕೆ 6 ಇಂಚು, ಬಳಿಕ 4 ಇಂಚು, 2 ಇಂಚು, ಒಂದೂವರೆ ಇಂಚು ಗಾತ್ರದ ಪಿವಿಸಿ ಪೈಪ್‌ನಲ್ಲಿ ನೀರು ಟರ್ಬೈನ್ ತಲು ಪುತ್ತದೆ. ಒತ್ತಡದ ಆಧಾರಲ್ಲಿ ಟರ್ಬೈನ್ ತಿರುಗುತ್ತದೆ. ಆಗ ಡೈನೆಮೊ ಮೂಲಕ ವಿದ್ಯುತ್ ಉತ್ಪಾದನೆ ಆಗುತ್ತದೆ.
ಪೈಪ್‌ನಲ್ಲಿ ನೀರಿನೊಂದಿಗೆ ಗಾಳಿ ಹೋಗದಂತೆ ತಡೆಯುವುದು ಇಲ್ಲಿ ಬಹುಮುಖ್ಯ ಸಂಗತಿ. 2004ರಲ್ಲಿ 70 ಸಾವಿರ ರೂ. ವೆಚ್ಚದಲ್ಲಿ ಈ ಘಟಕ ನಿರ್ಮಿಸಿದ್ದು ವರ್ಷಕ್ಕೊಮ್ಮೆ ಸಾಮಾನ್ಯ ನಿರ್ವಹಣೆ ವೆಚ್ಚ ಮಾತ್ರ ಬರುತ್ತಿದೆ.ಎರಡು ವರ್ಷಗಳಿಗೊಮ್ಮೆ ಬೆಲ್ಟ್ ಬದಲಿಸಬೇಕಾಗುತ್ತದೆ. ಉಳಿದಂತೆ ಯಾವುದೇ ವೆಚ್ಚಗಳಿಲ್ಲ ಎನ್ನುತ್ತಾರೆ ಸುರೇಶ್ ಬಲ್ನಾಡು.
ಮನೆ ಬೆಳಗಿದ ವಿದ್ಯುತ್ :
ವರ್ಷದ 6 ತಿಂಗಳು ವಿದ್ಯುತ್ ಉತ್ಪಾದಿಸಲಾಗುತ್ತದೆ. ಇದರಲ್ಲಿ 20 ಲೈಟ್, 4 ಫ್ಯಾನ್, ಟಿ.ವಿ. ಚಾಲೂ ಆಗುತ್ತದೆ. ಕಿರು ಜಲವಿದ್ಯುತ್ ಘಟಕವನ್ನು ನೋಡಲು ಬೇರೆ ಬೇರೆ ಭಾಗದಿಂದ ಆಸಕ್ತರು ಬರುತ್ತಾರೆ. ಇವರಿಗೆ ಜಿಲ್ಲಾ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.