ವಿಜಯಪುರ : ಕಳೆದ ಮೂರು ವರ್ಷಗಳ ಹಿಂದೆ ಬೆಳೆದ ಬಾಳೆ ಬೆಳೆಗೆ ಎರಡು ವರ್ಷಗಳಿಂದ ಕೋವಿಡ್ ಲಾಕಡೌನ್ ಕಾರಣಕ್ಕೆ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯ ರೈತರೊಬ್ಬರು ಬಾಳೆ ಹಣ್ಣನ್ನು ಉಚಿತವಾಗಿ ಹಂಚಿ, ಬಾಳೆ ದಿಂಡಿನ ಬೆಳೆಗೆ ಬೆಂಕಿ ಇಟ್ಟು ಆಕ್ರೋಶ ಹೊರ ಹಾಕಿದ್ದಾನೆ.
ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ರೈತ ಉಸ್ಮಾನಸಾಬ್ ಹಚ್ಯಾಳ ಎಂಬ ರೈತ ಲಕ್ಷಾಂತರ ರೂ. ಖರ್ಚು ಮಾಡಿ 1200 ಬಾಳೆ ಸಸಿ ನೆಟ್ಟಿದ್ದರು. ಮೂರು ವರ್ಷದ ಹಿಂದೆ ನೆಟ್ಟಿದ್ದ ಬಾಳೆ ಬೆಳೆ ಕಳೆದ ವರ್ಷ ಕೈಗೆ ಬರುತ್ತಲೇ ಕೋವಿಡ್ ಸಾಂಕ್ರಾಮಿಕ ರೋಗ ಆವರಿಸಿ, ಲಾಕಡೌನ್ ನಿರ್ಬಂಧ ಹೇರಲಾಗಿತ್ತು. ಇದರಿಂದ ಕೊಯ್ಲಿಗೆ ಬಂದ ಬಾಳೆಗೆ ಬೆಲೆ ಸಿಗದೇ ನಷ್ಟ ಅನುಭವಿಸಿದ್ದ.
ಇದನ್ನೂ ಓದಿ: ನಮ್ಮದು ಮದುವೆಯೇ ಆಗಿಲ್ಲ: ಗಂಡನಿಗೆ ಶಾಕ್ ಕೊಟ್ಟ ನಟಿ-ಸಂಸದೆ ನುಸ್ರತ್!
ಆದರೂ ದೃತಿಗೆಡದೇ ಮತ್ತೆ ಕುಳೆ ಬಿಟ್ಟು, ಬಾಳೆ ಬೆಳೆ ಆರೈಕೆ ಮಾಡಿದ್ದ. ಆದರೆ ಈ ವರ್ಷವೂ ಕೋವಿಡ್ ಎರಡನೇ ಅಲೆ ಆವರಿಸಿ, ಜಿಲ್ಲೆಯಲ್ಲಿ ಮತ್ತೆ ಲಾಕಡೌನ್ ವಿಧಿಸಿದ್ದರಿಂದ ಕೊಯ್ಲಿಗೆ ಬಂದ ಬಾಳೆಗೆ ಮಾರುಕಟ್ಟೆ ಇಲ್ಲದಂತಾಗಿದೆ. ಇದರಿಂದ ಬೆಳೆದೆ ಬಾಳೆಗೆ ಇಲ್ಲದ್ದರಿಂದ ರೋಷಿಹೋದ ರೈತ, ಬಾಳೆಹಣ್ಣುಗಳನ್ನು ಕಟಾವು ಮಾಡಿ ಊರಲ್ಲಿ ಉಚಿತವಾಗಿ ಹಂಚಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದೇ ತೋಟದಲ್ಲಿನ ಬಾಳೆಗೆ ಬೆಂಕಿ ಇಟ್ಟು ಆಕ್ರೋಶ ಹೊರ ಹಾಕಿದ್ದಾನೆ. ತನಗೆ ಇಷ್ಟೆಲ್ಲ ಸಂಕಷ್ಟ ಎದುರಾದರೂ ಯಾರಿಗೂ ನೆರವು ನೀಡಿ ಎಂದು ಮನವಿ ಮಾಡದ ರೈತ, ಸದ್ಯದ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಯಾವ ಅಧಿಕಾರಿಗಳೂ ತನ್ನ ನೆರವಿಗೆ ಬರುವುದಿಲ್ಲ ಎಂದರಿತ ಬಾಳೆ ಬೆಳೆಗಾರ, ತೋಟಗಾರಿಕೆ ಇಲಾಖೆ ಗಮನಕ್ಕೂ ತರಲು ಆಸಕ್ತಿ ತೋರದೆ ಬೆಲೆಯೇ ಇಲ್ಲದ ಬಾಳೆ ಬೆಳೆಗೆ ಬೆಂಕಿ ಇಟ್ಟಿದ್ದಾನೆ.