Advertisement

ಆರು ತಿಂಗಳ ಬೆಳೆ : ಬದನೆಯಿಂದ ಲಕ್ಷಾಂತರ ಲಾಭ ಮಾಡಿಕೊಂಡ ರೈತ ಮಲ್ಲಿಕಾರ್ಜುನ

06:20 PM Sep 28, 2022 | Team Udayavani |

ರಬಕವಿ-ಬನಹಟ್ಟಿ: ಕೃಷಿಯನ್ನೇ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು ಅದನ್ನೇ ಪ್ರತಿನಿತ್ಯ ತಮ್ಮ ಕುಟುಂಬದೊಂದಿಗೆ ಮುಂದುವರೆಸಿಕೊಂಡು ಕಲ್ಲು ಗುಡ್ಡಗಳ ಭೂಮಿಯನ್ನು ಹದ ಮಾಡಿ ಈ ಭಾಗದಲ್ಲಿ ಹೊಸತನವನ್ನು ಅಳವಡಿಸಿಕೊಂಡು ಬೆಳೆಯನ್ನು ಬೆಳೆದು ಲಕ್ಷಾಂತರೂಗಳ ಲಾಭಗಳಿಸಬಹುದು ಎಂಬುದನ್ನು ರಬಕವಿ-ಬನಹಟ್ಟಿ ತಾಲ್ಲೂಕಿನ ನಾವಲಗಿಯ ಮಲ್ಲಿಕಾರ್ಜುನ ಹನಮಂತ ಜನವಾಡ ತೋರಿಸಿಕೊಟ್ಟಿದ್ದಾರೆ.

Advertisement

ಮಲ್ಲಿಕಾರ್ಜುನ ಕಲಿತಿದ್ದು ಎಸ್.ಎಸ್.ಎಲ್.ಸಿ ಆದರೆ ಸಾಧನೆ ಮಾತ್ರ ಮುಗಿಲೆತ್ತರದು. ಕೇವಲ 1 ಎಕರೆ ಜಾಗದಲ್ಲಿ ಗ್ಯಾಲನ್ ತಳಿಯ ಬದನೆಕಾಯಿಗಳನ್ನು ಬೆಳೆದು ಆರು ತಿಂಗಳ ಅವಧಿಯಲ್ಲಿ ಲಕ್ಷಾಂತರ ರೂ.ಲಾಭವನ್ನು ಮಾಡಿಕೊಂಡ ರೈತ ಮಲ್ಲಿಕಾರ್ಜುನ ಜನವಾಡ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಬೆಳೆ : 1 ಎಕರೆ ಜಮೀನಿನಲ್ಲಿ ಮೊದಲು ತಿಪ್ಪೆಗೊಬ್ಬರ, ಸರಕಾರಿ ಗೊಬ್ಬರ ಬೇವಿನ ಹಿಂಡಿ ಸೇರಿದಂತೆ ಇತರೆ ಗೊಬ್ಬರಗಳನ್ನು ಹಾಕಿ ಬೆಡ್ ಮಾಡಿಕೊಂಡು ಸಾಲಿನಿಂದ ಸಾಲಿಗೆ 7 ಫೂಟ ಅಂತರ ಗಿಡದಿಂದ ಗಿಡಕ್ಕೆ ೩ಫೂಟಗೆ ಒಂದು ಸಸಿಯಂತೆ ಸಮೀಪದ ಜಗದಾಳ ಗ್ರಾಮದ ಪ್ರವೀರಾಮ ಅಗ್ರೊ ಎಜಿನ್ಸಿಯಿಂದ ಗ್ಯಾಲನ್ ತಳಿಯ ಸಸಿಗಳನ್ನು ಪಡೆದು ಅವರ ಮಾರ್ಗದರ್ಶದಲ್ಲಿ ೩೦೦೦ ಸಸಿಗಳನ್ನು ನಾಟಿ ಮಾಡಿದ್ದಾರೆ.

ಹನಿ ನೀರಾವರಿ ಮೂಲಕ ನೀರು ಪೂರೈಸಲಾಗಿದ್ದು, ಇದಕ್ಕೆ ಬರುವ ರೋಗಗಳಿಗೆ ತಕ್ಕಂತೆ ಕೆಲವು ಸಿಂಪರಣೆಗಳನ್ನು ಮಾಡಲಾಗಿದೆ. ಮೌತ ಹುಳ ಆಗದಂತೆ ತಡೆಯಲು ಸೋಲಾರ ಲ್ಯಾಂಪಗಳನ್ನು ಅಳವಡಿಸಲಾಗಿದೆ. ಇದು ಒಟ್ಟು 6 ತಿಂಗಳ ಬೆಳೆಯಾಗಿದ್ದು, ನಾಟಿ ಮಾಡಿದ 60 ದಿನಗಳಲ್ಲಿ ಬದನೆಕಾಯಿಗಳು ಬರಲಾರಂಭಿಸಿದರೆ ಮತ್ತೆ ಮುಂದೆ ಎರಡುವರೆ ತಿಂಗಳುಗಳ ಕಾಲ ಸತತವಾಗಿ ಬದನೆಕಾಯಿಗಳು ಬರುತ್ತವೆ. ಅಂದಾಜು 15 ರಿಂದ 20 ಟನ್ ಇಳುವರಿ ಬಂದಿದೆ. 25 ರಿಂದ 30 ರೂ ಬೆಲೆ ಬಂದಿದೆ. ಈಗಾಗಲೇ 4 ರಿಂದ 5 ಲಕ್ಷ ಆದಾಯ ಬಂದಿದೆ. ಇನ್ನೂ 5 ಲಕ್ಷದವರೆಗೆ ಲಾಭದ ನಿರೀಕ್ಷೆಯಲ್ಲಿದ್ದೇವೆ. ಆರಂಭದಿಂದ ಬದನೆಕಾಯಿ ಬೆಳೆ ಬರುವವರೆಗೆ ಅಂದಾಜು ರೂ. ಎರಡುವರೆ ಲಕ್ಷದವರೆಗೆ ಖರ್ಚು ಮಾಡಿದ್ದು, ಆರು ತಿಂಗಳ ಅವಧಿಯಲ್ಲಿ ಎಲ್ಲ ರೀತಿಯ ಖರ್ಚು ವೆಚ್ಚಗಳನ್ನು ತೆಗೆದು ಲಕ್ಷಾಂತರ ರೂ. ಲಾಭವನ್ನು ಮಾಡಿಕೊಳ್ಳಬಹುದಾಗಿದೆ ಎನ್ನುತ್ತಾರೆ ರೈತ ಮಲ್ಲಿಕಾರ್ಜುನ.

ಈ ಬದನೆಯನ್ನು ಬೆಳಗಾವಿಗೆ ತಮ್ಮದೆ ವಾಹನದ ಮೂಲಕ ಕಳಹಿಸುತ್ತಾರೆ. ನಂತರ ಅಲ್ಲಿಂದ ಈ ಗ್ಯಾಲನ್ ತಳಿಯ ಬದನೆ ಮಹಾರಾಷ್ಟ್ರದ ಪುಣೆ, ಮುಂಬೈ ಮತ್ತು ಗೋವಾ ರಾಜ್ಯಗಳಿಗೆ ತಲುಪುತ್ತದೆ. ಒಂದು ವಾರಕ್ಕೆ ನಾಲ್ಕು ದಿನಗಳ ಕಾಲ ಬದನೆಯನ್ನು ತೆಗೆಯುತ್ತಾರೆ. ಒಂದು ವಾರಕ್ಕೆ ಅಂದಾಜು ೩ ಟನ್ನಷ್ಟು ಕಟಿಂಗ್ ಆಗುತ್ತದೆ. ಯಾವುದೆ ಎಜೆಂಟ್‌ರುಗಳು ಇಲ್ಲದೆ ತಾವೇ ತಮ್ಮ ವಾಹನಗಳ ಮೂಲಕ ಬದನೆಗಳನ್ನು ನೇರವಾಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಾರೆ.

Advertisement

ಯಾವುದೆ ರೀತಿಯ ಕೃಷಿಯನ್ನು ಮಾಡಿದರೂ ಬೆಳೆಯ ಕುರಿತು ಸಂಪೂರ್ಣವಾಗಿ ಮಾಹಿತಿ ಪಡೆದುಕೊಂಡು, ಬೆಳೆದ ನಂತರ ಅದಕ್ಕೆ ಇರುವ ಮಾರುಕಟ್ಟೆಯ ಬಗ್ಗೆ ಪರಿಶೀಲಿಸಿ ಬೆಳೆಗಳನ್ನು ಬೆಳೆಯುತ್ತಾರೆ. ಅದೇ ರೀತಿಯಾಗಿ ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತ ಕೃಷಿಯನ್ನು ಯಾವಾಗಲೂ ಲಾಭದಾಯಕ ಮಾಡಿಕೊಳ್ಳಬಹುದು ಎಂಬುದಕ್ಕೆ ಮಲ್ಲಿಕಾರ್ಜುನ ಜನವಾಡ ಸಾಕ್ಷಿ.

ಈಗಾಗಲೇ ಕ್ಯಾಪ್ಸಿಕಾಮ್, ಶುಂಠಿ, ಕಲ್ಲಂಗಡಿ ವ್ಯವಸಾದಿಂದಲೂ ಸಾಕಷ್ಟು ಲಾಭವನ್ನು ಮಾಡಿಕೊಂಡಿರುವ ಮಲ್ಲಿಕಾರ್ಜುನ ಮುಂದಿನ ದಿನಗಳಲ್ಲಿ ಇಲ್ಲಿಯೇ ಡ್ರ‍್ಯಾಗನ್ ಫ್ರುಟ್ ಮತ್ತು ಕಿವಿ ಹಣ್ಣುಗಳನ್ನು ಬೆಳೆಯುವ ಸಾಹಸಕ್ಕೆ ಕೈ ಹಾಕಿದ್ದಾರೆ. ಅದಕ್ಕೆ ಬೇಕಾದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಆರಂಭದಲ್ಲಿ ಪ್ರಯೋಗಾರ್ಥವಾಗಿ ಡ್ರ‍್ಯಾಗನ್ ಹಣ್ಣುಗಳ ಐವತ್ತು ಸಸಿಗಳನ್ನು ನಾಟಿ ಮಾಡಲಿದ್ದಾರೆ.

ಮಲ್ಲಿಕಾರ್ಜುನ ಜನವಾಡರ ತೋಟನಾವಲಗಿ ಗ್ರಾಮದ ಜಿಎಲ್ಬಿಸಿ ಕಾಲುವೆಯಿಂದ ಐದು ಕಿ.ಮೀ ದೂರದಲ್ಲಿದೆ. ಮಲ್ಲಿಕಾರ್ಜುನ ಅವರಿಗೆ ದಿನನಿತ್ಯ ಕೃಷಿ ಕುರಿತು ಚಿಂತನೆ. ಯಾವಾಗಲೂ ಹೊಸತನದ ತುಡಿತ. ಯುವ ಪೀಳಿಗೆ ಆಧುನಿಕತೆಯಿಂದಾಗಿ ಕೃಷಿಯನ್ನು ಕಡೆಗಣಿಸುತ್ತಿರುವ ಇಂದಿನ ಕಾಲದಲ್ಲಿ ಕೃಷಿಯನ್ನೇ ನಂಬಿ ಕೃಷಿಯಲ್ಲಿ ಹೊಸತನದ ಜೊತೆಗೆ ಬಾಳು ಬಂಗಾರವಾಗಿಸಿಕೊಂಡಿರುವ ಮಲ್ಲಿಕಾರ್ಜುನ ಜನವಾಡರ ಪ್ರಯತ್ನ ನಿಜಕ್ಕೂ ಮೆಚ್ಚುವಂತಹದು.

– ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next