Advertisement

ರೈತ ಮಹಾ ಪಂಚಾಯತ್‌ ಬೆಂಬಲಿಸಿ

09:02 PM Mar 17, 2021 | Ganesh Hiremath |

ಸೊರಬ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ರೈತ ಮಹಾ ಪಂಚಾಯತ್‌ ಸಮಾವೇಶ ಶಿವಮೊಗ್ಗದ ಸೈನ್ಸ್‌ ಮೈದಾನದಲ್ಲಿ ಮಾ. 20ರಂದು ಸಂಜೆ 3ಕ್ಕೆ ನಡೆಯಲಿದೆ. ತಾಲೂಕಿನ ರೈತರು ಪಕ್ಷಾತೀತ, ಜಾತ್ಯತೀತವಾಗಿ ಚಳುವಳಿಯಲ್ಲಿ ಪಾಲ್ಗೊಳ್ಳಬೇಕು ಎಂದು ಮಾಜಿ ಶಾಸಕ ಎಸ್‌. ಮಧು ಬಂಗಾರಪ್ಪ ಕರೆ ನೀಡಿದರು.

Advertisement

ಪಟ್ಟಣದ ಬಂಗಾರ ಧಾಮದಲ್ಲಿ ರೈತ ಮಹಾ ಪಂಚಾಯತ್‌ ಸಮಾವೇಶದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ರೈತ ವಿರೋಧಿ ಧೋರಣೆ ಅನುಸರಿಸುತ್ತಿವೆ. ಕಾರ್ಪೋರೆಟ್‌ ಸಂಸ್ಥೆಗಳಿಗೆ ತೃಪ್ತಿಪಡಿಸುವ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತರನ್ನು ಜೀತದಾಳುಗಳನ್ನಾಗಿ ಮಾಡಲು ಹೊರಟಿರುವುದು ಖಂಡನೀಯ. ದೆಹಲಿಯಲ್ಲಿ ಸುಮಾರು 100 ದಿನಗಳಿಂದ ಹೋರಾಟ ಮಾಡುತ್ತಿರುವ ರೈತರಿಗೆ ಕೇಂದ್ರ ಬಿಜೆಪಿ ಸರ್ಕಾರ ಕನಿಷ್ಟ ಅಹವಾಲನ್ನು ಸ್ವೀಕರಿಸುವ ಸೌಜನ್ಯ ತೋರುತ್ತಿಲ್ಲ ಎಂದು ಆರೋಪಿಸಿದರು.

ಅನೇಕ ಹೋರಾಟಗಳಿಗೆ ಮುನ್ನುಡಿ ಬರೆದ ಜಿಲ್ಲೆಯ ನೆಲದಿಂದಲೇ ಜನ ವಿರೋಧಿ ಸರ್ಕಾರಗಳಿಗೆ ಬುದ್ಧಿ ಕಲಿಸಲು ಹೋರಾಟಗಳನ್ನು ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದ ಅವರು, ರಾಷ್ಟ್ರೀಯ ಸಂಯುಕ್ತ ಕಿಸಾನ್‌ ಮೋರ್ಚ್‌ ವತಿಯಿಂದ ನಡೆಯಲಿರುವ ಸಮಾವೇಶಕ್ಕೆ ರಾಷ್ಟ್ರೀಯ ರೈತ ಮುಖಂಡರಾದ ರಾಕೇಶ್‌ ಟಿಕಾಯತ್‌, ಡಾ| ದರ್ಶನ್‌ ಪಾಲ್‌, ಯದುವೀರ್‌ ಸಿಂಗ್‌ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ಅನೇಕ ರೈತ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷರಾದ ಡಿ.ಬಿ. ಅಣ್ಣಪ್ಪ ಹಾಲಘಟ್ಟ, ಆರ್‌.ಸಿ. ಪಾಟೀಲ್‌, ಮುಖಂಡರಾದ ಎಚ್‌. ಗಣಪತಿ, ಕೆ.ಪಿ. ರುದ್ರಗೌಡ, ಜಿಪಂ ಸದಸ್ಯರಾದ ಶಿವಲಿಂಗೇಗೌಡ, ವೀರೇಶ್‌ ಕೊಟಗಿ, ತಾರಾ ಶಿವಾನಂದಪ್ಪ, ತಾಪಂ ಉಪಾಧ್ಯಕ್ಷ ಸುರೇಶ್‌ ಹಾವಣ್ಣನವರ್‌, ಎಪಿಎಂಸಿ ಅಧ್ಯಕ್ಷ ಜಯಶೀಲಪ್ಪ, ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ ಅಧ್ಯಕ್ಷ ಎಲ್‌.ಜಿ. ರಾಜಶೇಖರ್‌, ಎಂ.ಡಿ. ಶೇಖರ್‌, ನಾಗರಾಜ ಚಂದ್ರಗುತ್ತಿ, ಪ್ರಭು ಶಿಗ್ಗಾ, ಶಿವಕುಮಾರ್‌ ವಡ್ಡಿಗೇರಿ, ಪರಶುರಾಮ ಸಣ್ಣಬೈಲ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next