ಸೊರಬ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ಸಂಕಷ್ಟದ ಸಮಯದಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ಧ ಮಾ.20ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರೈತ ಮಹಾ ಪಂಚಾಯತ್ ಸಮಾವೇಶಕ್ಕೆ ನಾಡಿನ ಎಲ್ಲರೂ ಬೆಂಬಲ ನೀಡಬೇಕೆಂದು ಮಾಜಿ ಶಾಸಕ ಎಸ್.ಮಧು ಬಂಗಾರಪ್ಪ ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ರೈತ ಸಂಘಟನೆಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಜನವಿರೋಧಿ ಸರ್ಕಾರಗಳಿಗೆ ಬುದ್ದಿ ಕಲಿಸಲು ಇಂತಹ ಹೋರಾಟಗಳು ನಡೆಯಬೇಕಿದೆ. ಜಿಲ್ಲೆ ಹೋರಾಟದ ಭೂಮಿಯಾಗಿದೆ. ರಾಜ್ಯದಲ್ಲಿ ಮೊದಲು ಜಿಲ್ಲೆಯಿಂದ ಹೋರಾಟ ಆರಂಭವಾಗಿರುವುದು ಸ್ವಾಗತಾರ್ಹ. ಈ ಹಿಂದೆಯೂ ಬಗರ್‌ಹುಕುಂ ಸಾಗುವಳಿದಾರರ ಪರವಾಗಿಮತ್ತು ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಪಾದಯಾತ್ರೆ ನಡೆಸಿದ್ದೆ. ರೈತರು ಹಮ್ಮಿಕೊಳ್ಳುವ ಎಲ್ಲಾ ಹೋರಾಟಗಳಿಗೆ ಧ್ವನಿಯಾಗಿ ಸಂತೋಷದಿಂದ ಬೆಂಬಲ ನೀಡುತ್ತೇನೆ ಎಂದರು. ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ಮಾತನಾಡಿ, ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ನಡೆಯಲಿರುವ ಸಮಾವೇಶ ದಕ್ಷಿಣ ಭಾರತದಲ್ಲಿಯೇ ಮೊದಲ ಸಮಾವೇಶವಾಗಿದೆ. ದೆಹಲಿ ರೈತರ ಹೋರಾಟ ಕೇವಲ ಎರಡು ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಮೋದಿ ಅವರು ಹೇಳುತ್ತಾರೆ.
ಆದ್ದರಿಂದ ದೇಶದ ಎಲ್ಲಾ ರೈತರು ಬೆಂಬಲವಾಗಿದ್ದೇವೆ ಎಂಬ ಸಂದೇಶ ನೀಡಲು ಸಿದ್ಧರಾಗಿದ್ದೇವೆ. ಎಂದರು. ರಾಷ್ಟ್ರೀಯ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಯದ್ವೀರ್ ಸಿಂಗ್, ಡಾ. ದರ್ಶನ್ ಪಾಲ್, ಯೋಗೇಂದ್ರ ಯಾದವ್ ಭಾಗಿಯಾಗಲಿದ್ದಾರೆ. ಮಾ. 20ರಂದು ಶಿವಮೊಗ್ಗ, 21 ಹಾವೇರಿ, 22 ಬೆಂಗಳೂರು ಹಾಗೂ 31ರಂದು ಬೆಳಗಾವಿಯಲ್ಲಿ ಸಮಾವೇಶ ನಡೆಯಲಿದೆ ಎಂದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿ, ದೆಹಲಿಯಲ್ಲಿ ಸಾವಿರಾರು ರೈತರು ನೂರಾರು ದಿನದಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಪ್ರಧಾನಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇದರಿಂದ ರೈತ ವಿರೋಧಿ ಪ್ರಧಾನಿ ಎಂಬುದು ಸಾಬೀತಾಗಿದೆ ಎಂದರು. ಜನಶಕ್ತಿ ಸಂಘಟನೆಯ ಕೆ.ಎಲ್. ಅಶೋಕ್, ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಸೂಡಾ ಮಾಜಿ ಅಧ್ಯಕ್ಷ ಎನ್. ರಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್, ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ಇತರರಿದ್ದರು.