ನವದೆಹಲಿ: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಹತ್ತು ದಿನಗಳಿಂದ ದೆಹಲಿ ಗಡಿಯಲ್ಲಿ ಸಾವಿರಾರು ರೈತರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಏತನ್ಮಧ್ಯೆ ಮಂಗಳವಾರ(ಡಿಸೆಂಬರ್ 08, 2020) ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆಗಿನ ರೈತ ಮುಖಂಡರ ಮಾತುಕತೆ ವಿಫಲವಾಗಿದ್ದು, ಬುಧವಾರ ಕೇಂದ್ರ ಸರ್ಕಾರ ಕರಡು ಪ್ರಸ್ತಾವನೆಯನ್ನು ರೈತ ಮುಖಂಡರಿಗೆ ಕಳುಹಿಸಿದೆ.
ನಮ್ಮ ಸಭೆಯಲ್ಲಿ ನಾವು ಕೇಂದ್ರದ ಕರಡು ಪ್ರಸ್ತಾಪದ ಬಗ್ಗೆ ಚರ್ಚೆ ನಡೆಸುತ್ತೇವೆ. ಇದೊಂದು ಗೌರವದ ಪ್ರಶ್ನೆ. ಹೀಗಾಗಿ ನಮ್ಮ ಸಮಸ್ಯೆ ಬಗೆಹರಿಯದೇ ರೈತರು ವಾಪಸ್ ಹೋಗುವುದಿಲ್ಲ.ಸರ್ಕಾರ ಕಾಯ್ದೆಯನ್ನು ಹಿಂಪಡೆಯುವುದಿಲ್ಲವೇ? ಇದೇನು ನಿರಂಕುಶ ಪ್ರಭುತ್ವವೇ? ಒಂದು ಸರ್ಕಾರ ಹಠಮಾರಿತನ ಪ್ರದರ್ಶಿಸಿದರೆ ರೈತರೂ ಕೂಡಾ ಹಾಗೆಯೇ…ಮೂರು ಕಾಯ್ದೆ ರದ್ದಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ತಿಳಿಸಿದ್ದಾರೆ.
ಒಂದು ವೇಳೆ ಕೇವಲ ತಿದ್ದುಪಡಿ ಪ್ರಸ್ತಾಪ ಬಂದರೆ ನಾವು ಅದನ್ನು ತಿರಸ್ಕರಿಸುತ್ತೇವೆ. ಮೂರು ಕಾಯ್ದೆ ರದ್ದುಪಡಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ಸಿಂಘು ಗಡಿಯಲ್ಲಿ ಕಿಸಾನ್ ಸಂಘರ್ಷ ಸಮಿತಿಯ ಕನ್ವಾಲ್ ಪ್ರೀತ್ ಸಿಂಗ್ ಪನ್ನು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಇದನ್ನೂ ಓದಿ:2021ರ ಏಪ್ರಿಲ್ ನಿಂದ ಟೇಕ್ ಹೋಮ್ ಸ್ಯಾಲರಿ ಮತ್ತಷ್ಟು ಕಡಿತ…ಏನಿದು ಹೊಸ ನಿಯಮ?
ರೈತರ ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದ ವಿಪಕ್ಷ ಮುಖಂಡರು ಬುಧವಾರ(ನವೆಂಬರ್ 09, 2020) ಸಂಜೆ 5ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ಮನವಿ ನೀಡಲಿದ್ದಾರೆ. ನಂತರ 5.30ಕ್ಕೆ ರಾಷ್ಟ್ರಪತಿ ಭವನದ ಮುಖ್ಯದ್ವಾರದ ಹೊರಗೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿ ತಿಳಿಸಿದೆ.