Advertisement

ಕೇಂದ್ರ ಸರ್ಕಾರದ “ಅಹಂಕಾರ’ಕ್ಕೆ 100 ದಿನ  

06:44 PM Mar 07, 2021 | Team Udayavani |

ಬಳ್ಳಾರಿ: ರೈತರ ಬೇಡಿಕೆಗಳನ್ನು ಈಡೇರಿಸದೆ ನಿರ್ಲಕ್ಷ್ಯ  ವಹಿಸುತ್ತಿರುವ ಕೇಂದ್ರ ಸರ್ಕಾರದ ಅಹಂಕಾರಕ್ಕೆ ನೂರು ದಿನಗಳಾಗಿವೆ ಎಂದು ದೆಹಲಿಯ ಸಂಯುಕ್ತ ಕಿಸಾನ್‌ ಸಭಾ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್‌ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಎಪಿಎಂಸಿ ಆವರಣದಲ್ಲಿ ವಿವಿಧ ರೈತ ಸಂಘಟನೆಗಳ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ (ಎಂಎಸ್‌ಪಿ) ಬೆಲೆ ಕುರಿತ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಮೂರು ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನವೆಂಬರ್‌ ತಿಂಗಳಲ್ಲಿ ದೆಹಲಿಯ ಸಿಂಗುಗಡಿ, ಘಾಜಿಗಡಿ, ಶಾಜಹಾನ್‌ ಗಡಿಯಲ್ಲಿ ರೈತರು ಹಗಲಿರುಳು ಹೋರಾಟ ಮಾಡುತ್ತಿದ್ದಾರೆ.

ಚಳಿಗೆ ಸುಮಾರು 300 ಜನ ಹೋರಾಟಗಾರರು ಮೃತಪಟ್ಟಿದ್ದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ಮೂರು ಕಾಯ್ದೆಗಳನ್ನು ಹಿಂಪಡೆಯುತ್ತಿಲ್ಲ. ಪಾಕಿಸ್ತಾನ್‌, ಬಾಂಗ್ಲಾದೇಶ ಗಡಿಗಳಲ್ಲೂ ಇಲ್ಲದ ಬ್ಯಾರಿಕೇಡ್‌ಗಳನ್ನು ದೆಹಲಿಯಲ್ಲಿ ಅಳವಡಿಸಿದ ಕೇಂದ್ರ ಸರ್ಕಾರ ರೈತರ ಚಳವಳಿಯನ್ನು ಹತ್ತಿಕ್ಕಲು ಯತ್ನಿಸಿದೆ. ರೈತರ ಹೋರಾಟ ಮಾ. 6ಕ್ಕೆ ನೂರು ದಿನ ಪೂರೈಸಿದ್ದು, ಕೇಂದ್ರ ಸರ್ಕಾರದ ನಿರ್ಲಕ್ಷ್ಯಕ್ಕೆ, ಪ್ರಧಾನಿ ನರೇಂದ್ರ ಮೋದಿಯವರ ಅಹಂಕಾರಕ್ಕೆ ನೂರು ದಿನಗಳು ಪೂರ್ಣಗೊಂಡಿದೆ ಎಂದು ಆರೋಪಿಸಿದರು.

ರೈತರ ಜೀವಕ್ಕೆ ಬೆಲೆ ಇರಲ್ಲ: ಈ ಹೋರಾಟದಲ್ಲಿ ರೈತರು ಗೆಲ್ಲಲೇಬೇಕು. ಅದಕ್ಕಾಗಿ ಹೋರಾಟ ಮಾಡಲೇಬೇಕು. ಬೇರೆ ದಾರಿಯಿಲ್ಲ ಎಂದ ಅವರು, ಈ ಹೋರಾಟದಲ್ಲಿ ಸೋತರೆ ರೈತರ ಜೀವಕ್ಕೆ ಬೆಲೆ ಇರಲ್ಲ. ಮುಂದಿನ ಪೀಳಿಗೆಗೆ ಜೀವನ ಇರಲ್ಲ. ರೈತರು ಎಂದರೆ, ಶಾಸಕರಿಂದ ಹಿಡಿದು ಪೊಲೀಸ್‌ವರೆಗೆ ಎಲ್ಲರೂ ಗೌರವ ಕೊಡಬೇಕು. ಅಂಥ ವಾತಾವರಣ ನಿರ್ಮಿಸಲು ನಾವು ಹೊರಟಿದ್ದೇವೆ. ನಾವು ಭಿಕ್ಷೆ ಬೇಡುತ್ತಿಲ್ಲ. ನಮ್ಮ ಬೆಳೆಗೆ ನ್ಯಾಯಯುತ ಬೆಲೆ ನೀಡುವಂತೆ ಕೋರುತ್ತಿದ್ದೇವೆ. ಭ್ರಷ್ಟಾಚಾರದ ನೆಪದಲ್ಲಿ ತೆಗೆಯಲು ಮುಂದಾಗಿರುವ ಎಪಿಎಂಸಿಗಳನ್ನು ವಾಪಸ್‌ ರೈತರಿಗೆ ಬಿಟ್ಟುಕೊಡಿ ಎಂದು ಒತ್ತಾಯಿಸಿದರು.

Advertisement

ದೆಹಲಿ ಹೋರಾಟಕ್ಕೆ 100 ದಿನ ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇಶವ್ಯಾಪಿ ಮಾ. 6ರಂದು ಕರಾಳ ದಿನ ಆಚರಿಸಲಾಗುತ್ತಿದೆ. ರೈತರು ಎಲ್ಲೇ ಇದ್ದರೂ ಕಪ್ಪು ಪಟ್ಟಿ ಧರಿಸಿರುತ್ತಾರೆ. ಕಾರ್ಯಕ್ರಮಗಳಲ್ಲಿ ಹಸಿರು ಬಾವುಟ ಜತೆಗೆ ಕಪ್ಪು ಬಾವುಟವನ್ನಿಟ್ಟು ಕರಾಳ ದಿನ ಆಚರಿಸಲಾಗುತ್ತಿದೆ ಎಂದವರು ವಿವರಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ರೈತ ಮುಖಂಡ ವೀರಸಂಗಯ್ಯ, ದೆಹಲಿಯಲ್ಲಿ ರೈತರ ಪ್ರತಿಭಟನೆ ನೂರು ದಿನ ಪೂರೈಸಿದೆ. ಗುಂಡು ಹಾರಿಸಿಲ್ಲ. ಲಾಠಿ ಎತ್ತಲಿಲ್ಲ. ಸುಮಾರು 300 ಹೋರಾಟಗಾರರು ಅಸುನೀಗಿದ್ದಾರೆ. ಕನಿಷ್ಠ ಬೆಂಬಲ ಬೆಲೆಯನ್ನು ಹಿಂದೆಯೂ ನೀಡಿದೆ. ಮುಂದೆಯೂ ನೀಡಲಿದೆ ಎಂದು ಕೇಂದ್ರ ಸರ್ಕಾರ ತಪ್ಪು ಸಂದೇಶವನ್ನು ನೀಡಿದೆ. ಆದರೆ, ಯಾವ್ಯಾವ ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಎಷ್ಟೆಷ್ಟಿದೆ ಎಂಬುದನ್ನು ಸಾಬೀತು ಪಡಿಸಬೇಕು ಎಂದರು.

ಇದಕ್ಕೂ ಮುನ್ನ ಯೋಗೇಂದ್ರ ಯಾದವ್‌ ಸೇರಿ ರೈತ ಮುಖಂಡರು ಎಪಿಎಂಸಿ ಆವರಣದಲ್ಲಿ ಮೆಕ್ಕೆಜೋಳ ಬೆಳೆ ಪರಿಶೀಲಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಚಾಮರಸ ಮಾಲಿಪಾಟೀಲ್‌, ದೆಹಲಿಯ ಸತನಮ್‌ ಸಿಂಗ್‌, ಹರ್ಯಾಣದ ದೀಪಕ್‌ ಲಾಂಬೊ, ಬಿ.ಆರ್‌. ಯಾವಗಲ್‌, ಎಸ್‌.ಆರ್‌.ಹಿರೇಮಠ, ಯು. ಬಸವರಾಜ್‌, ವಿ.ಎಸ್‌. ಶಿವಶಂಕರ್‌, ಪೃಥ್ವಿರಾಜ್‌, ವಿ. ಹನುಮಂತಪ್ಪ, ಜೆ.ಸತ್ಯಬಾಬು, ಗಂಗಾ ಧಾರವಾಡ್ಕರ್‌, ಮಹಾರುದ್ರಗೌಡ, ಅಮ್ಜದ್‌ಬಾಷಾ ಸೇರಿ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next