ನವದೆಹಲಿ:ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಮೂರು ಕೃಷಿ ಕಾಯ್ದೆ ಕುರಿತಂತೆ ಚರ್ಚಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಗದ್ದಲ, ಕೋಲಾಹಲ ನಡೆಸಿದ ಪರಿಣಾಮ ಮಂಗಳವಾರ(ಫೆ,2) ರಾಜ್ಯಸಭೆ ಕಲಾಪ ಬುಧವಾರ(ಫೆ.3)ಕ್ಕೆ ಮುಂದೂಡಲಾಯಿತು.
ಇದನ್ನೂ ಓದಿ:FDA ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಪರೀಕ್ಷಾ ಮರು ದಿನಾಂಕ ಪ್ರಕಟಿಸಿದ ಇಲಾಖೆ
ಇದಕ್ಕೂ ಮೊದಲು ಎರಡು ಬಾರಿ ರಾಜ್ಯಸಭೆ ಕಲಾಪವನ್ನು ಮುಂದೂಡಲಾಗಿತ್ತು.ಬೆಳಗ್ಗೆ ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷಗಳ ಗದ್ದಲದಿಂದ ಉಪಾಧ್ಯಕ್ಷ ಹರಿವಂಶ್ ಅವರು 10.30ರವರೆಗೆ ಕಲಾಪ ಮುಂದೂಡಿದ್ದರು. ನಂತರ ಕಲಾಪ ಆರಂಭಗೊಂಡಾಗಲೂ ಮತ್ತೆ ಕೋಲಾಹಲ ಎಬ್ಬಿಸಿದ ಪರಿಣಾಮ 11.30ರವರೆಗೆ ಮುಂದೂಡಿದರು.
11.30ಕ್ಕೆ ಮತ್ತೆ ಕಲಾಪ ಆರಂಭಗೊಂಡಾಗ ಪ್ರತಿಭಟನೆ ಮುಂದುವರಿಸಿದಾಗ, ಉಪ ಸಭಾಧ್ಯಕ್ಷ ಹರಿವಂಶ್ ಅವರು ಸದಸ್ಯರಲ್ಲಿ ಹಲವು ಬಾರಿ ಮನವಿ ಮಾಡಿ ಕುಳಿತುಕೊಳ್ಳುವಂತೆ ಸೂಚಿಸಿದ್ದರು. ಆದರೆ ವಿಪಕ್ಷ ಸದಸ್ಯರು ಉಪ ಸಭಾಧ್ಯಕ್ಷರ ಮನವಿಯನ್ನು ಲೆಕ್ಕಿಸದೇ ಪ್ರತಿಭಟನೆಯಲ್ಲಿ ತೊಡಗಿದ್ದರು ಎಂದು ವರದಿ ತಿಳಿಸಿದೆ.
ಕಾಂಗ್ರೆಸ್, ಎಡಪಕ್ಷ, ಟಿಎಂಸಿ, ಡಿಎಂಕೆ ಹಾಗೂ ರಾಷ್ಟ್ರೀಯ ಜನತಾದಳದ ಸದಸ್ಯರು ಕಲಾಪವನ್ನು ಮುಂದೂಡುವಂತೆ ಒತ್ತಾಯಿಸಿದ್ದನ್ನು ಸಭಾಧ್ಯಕ್ಷರು ತಿರಸ್ಕರಿಸಿದ್ದರಿಂದ ಸದಸ್ಯರು ಕಲಾಪದಿಂದ ಹೊರನಡೆದಿದ್ದರು. ಮತ್ತೆ 12ಗಂಟೆಗೆ ಕಲಾಪ ಪುನರಾರಂಭಗೊಂಡಾಗ ಕೃಷಿ ಕಾಯ್ದೆ ಕುರಿತು ಚರ್ಚಿಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದಾಗ ವಿಪಕ್ಷಗಳ ಗದ್ದಲ ಹೆಚ್ಚಳವಾದ ಕಾರಣ ಕಲಾಪವನ್ನು ಉಪ ಸಭಾಧ್ಯಕ್ಷ ಹರಿವಂಶ್ ಬುಧವಾರಕ್ಕೆ ಮುಂದೂಡಿದರು.