ಕುಷ್ಟಗಿ:ರೈತರು ತಾವು ಬದುಕುತ್ತಾರೆ ಜಗತ್ತು ಸಾಕುತ್ತಾರೆ. ರೈತ ಕೇವಲ ಮನುಷ್ಯರಿಗೆ ಮಾತ್ರ ಅನ್ನ ಹಾಕುವುದಿಲ್ಲ ಜೀವ ಸಂಕುಲಕ್ಕೆ ಅನ್ನ ಹಾಕುವ ಎರಡನೇ ದೇವರಾಗಿದ್ದಾನೆ ಎಂದು ಕಲಬುರಗಿ ಯ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.
. ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಅವರ ತೋಟದಲ್ಲಿಶ್ರೀ ಕೊತ್ತಲ ಭಾರತೀಯ ಶಿಕ್ಷಣ ಸಮಿತಿ ದೇಡಂ, ವಿಕಾಸ ಅಕಾಡೆಮಿ ಕಲಬುರಗಿ ಸಹಯೋಗದಲ್ಲಿ ಸಾವಯವ, ಸಮಗ್ರ ಕೃಷಿ- ಸಂತೃಪ್ತ ರೈತ ಕಾರ್ಯಾಗಾರದಲ್ಲಿ ಮಾತನಾಡಿದರು. ಭೂಮಿಯಲ್ಲಿ ವಿಷ ಹಾಕದೇ ನಾನಾ ವಿಧದ ಸಮಗ್ರ ಕೃಷಿ ಹಾಗೂ ಆಕಳು ಹೊಂದುವುದು ಇಂದಿನ ಅಗತ್ಯವಾಗಿದೆ. ಏಕ ಬೆಳೆಯ ಬೆಳೆ ಬೆಳೆಯುವುದು ಎಂದರೆ ಜೂಜಿನಂತೆ ಇದರ ಬದಲಿಗೆ ಸಮಗ್ರ ಕೃಷಿಯಾಗಿ ಬದಲಿಸಿಕೊಳ್ಳಬೇಕಿದೆ ಎಂದ ಅವರು ಸಾವಯವ ಕೃಷಿಯಲ್ಲಿ ಗೋಕೃಪಾಮೃತ ಮಹತ್ವ ವಿವರಿಸಿದರು.
ಕೊಪ್ಪಳ ಸಂಸದ ಕರಡಿ ಸಂಗಣ್ಣ ಮಾತನಾಡಿ, ಅನೇಕ ವಿಪತ್ತುಗಳಿಂದಾಗಿ ಕೃಷಿ ಲಾಭದಾಯಕವಾಗಿ ಉಳಿದಿಲ್ಲ.ಆಸಕ್ತಿಯಿಂದಾಗಿ ಲಾಭದಾಯಕವಾಗಿಸಬೇಕಿದ್ದು ಕೃಷಿಯೊಂದೇ ತೃಪ್ತಿಕರ ಕ್ಷೇತ್ರವಾಗಿದೆ ಎಂದ ಅವರು ಮರು ಕೃಷಿ ಸ್ಥಾಪನೆ ಅಗತ್ಯವಾಗಿದ್ದು ಭೂಮಾತೆ, ಗೋಮಾತೆ ಸಂರಕ್ಷಿಸಿಸಬೇಕಿದೆ ಎಂದರು.
ನವದೆಹಲಿ ಐಸಿಎಆರ್ ನಿಕಟಪೂರ್ವ ನಿರ್ದೇಶಕ ಡಾ.ಎಸ್.ಎ.ಪಾಟೀಲ ಮಾತನಾಡಿ, ಒಕ್ಕಲುತನ ಆರೋಗ್ಯದ ತತ್ವವಾಗಿದೆ. ಕೃಷಿ ಎಲ್ಲ ತತ್ವಗಳಿಗೆ ಮೂಲವಾಗಿದೆ ಎಂದರು. ಒಕ್ಕಲುತನ ಸೂರ್ಯನ ರಶ್ಮಿ ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ ಎಂದರು.
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ಸರ್ಕಾರ ಸಣ್ಣ,ಅತಿ ಸಣ್ಣ ರೈತರಿಗೆ 10 ಸಾವಿರ ರೂ. ಸಹಾಯಧನದ ರೂಪದಲ್ಲಿ ನೀಡುತ್ತಿದೆಯಲ್ಲದೇ ಸಬ್ಸಿಡಿ ಯೋಜನೆಗಳ ಮೂಲಕ ರೈತರನ್ನು ಬದುಕಿಸುತ್ತಿದೆ. ಇಂದಿನ ಅಗತ್ಯ ವಸ್ತುಗಳು ಪ್ರತಿ ವರ್ಷ ಶೇ10 ರಷ್ಟು ಹೆಚ್ಚಾಗುತ್ತಿದೆ ಆದರೆ ರೈತ ಬೆಳೆದ ಉತ್ಪನ್ನಕ್ಕೆ ವರ್ಷದ ಹಿಂದೆ ಇರುವ ಬೆಲೆ ಈ ವರ್ಷವಿಲ್ಲದೇ ಕಡಿಮೆಯಾಗಿರುತ್ತದೆ ಎಂದರು.
ಮಾಜಿ ಸಂಸದ ಕೆ.ಶಿವರಾಮೇಗೌಡ,ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಸದಸ್ಯ ವಿ.ಎಂ.ಭೂಸನೂರಮಠ, ಲೀಲಾ ಕಾರಾಟಗಿ, ಪ್ರಭುರಾಜ ಕಲಬುರಗಿ, ವಿ.ಶಾಂತರಡ್ಡಿ, ಐಎಫ್ ಎಸ್ ಕೃಷ್ಣ ಉದುಪುಡಿ, ದೇವೇಂದ್ರಪ್ಪ ಬಳೂಟಗಿ ಮತ್ತಿತರರಿದ್ದರು. ಸಾನಿದ್ಯವನ್ನು ರೋಣದ ಗುಲಗುಂಜಿಮಠದ ಗುರುಪಾದ ದೇವರು ವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಕೊಪ್ಪಳ ಜಿಲ್ಲೆಯ ರೈತರು ಭಾಗವಹಿಸಿದ್ದರು.