Advertisement

ರೈತರ ಬಾಳಿಗೆ ಬೆಳಕಾಗದ ವರುಣ

11:58 AM Nov 08, 2019 | Suhan S |

ಮುಧೋಳ: ಅತಿಯಾದರೆ ಅಮೃತವೂ ವಿಷವಾಗುತ್ತೆ ಎಂಬುದಕ್ಕೆ ತಾಲೂಕಿನಾದ್ಯಂತ ಈ ಬಾರಿ ಸುರಿದ ಮುಂಗಾರು ಹಾಗೂ ಹಿಂಗಾರು ಮಳೆಯೇ ಉದಾಹರಣೆಯಾಗಿದೆ.

Advertisement

ನಿರಂತರ ಬರದಿಂದ ಕಂಗೆಟ್ಟಿದ್ದ ತಾಲೂಕಿನ ರೈತರ ಬಾಳಿಗೆ ಬೆಳಕಾಗಬೇಕಿದ್ದ ಮಳೆರಾಯ ತನ್ನ ರೌದ್ರಾವತಾರದಿಂದ ರೈತರನ್ನು ಕಂಗೇಡಿಸಿದ್ದಾನೆ. ಈ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆಗಳು ನಿರಂತರ ಸುರಿದ ಪರಿಣಾಮ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ.

ಮುಂಗಾರು ಆರಂಭದಲ್ಲಿಯೇ ನೆರೆಯ ಮಹಾರಾಷ್ಟ್ರದಲ್ಲಿ ಅತಿಯಾದ ಮಳೆ ಸುರಿದು ಪ್ರವಾಹ ಉಂಟಾದ ಪರಿಣಾಮ ತಾಲೂಕಿನ ರೈತರ ಮನೆ, ಆಸ್ತಿ ಲಕ್ಷಾಂತರ ಎಕರೆ ಬೆಳೆಹಾನಿಯಾಗಿ, ಅವರ ಬಾಳು ಬೀದಿಗೆ ಬಂದಿತ್ತು. ಪ್ರವಾಹ ತಗ್ಗಿ ಜೀವನ ಮತ್ತೆ ಮರಳಿತ್ತಿದೆ ಎನ್ನುವಷ್ಟರಲ್ಲಿ ಎಡೆಬಿಡದೆ ಸುರಿದ ಹಿಂಗಾರಿ ಮಳೆಯಿಂದ ಕೊಯ್ಲಿಗೆ ಬಂದಿದ್ದ ಗೋವಿನ ಜೋಳ, ಈರುಳ್ಳಿ ಬೆಳೆ ಹಾನಿಗೀಡಾಗಿದೆ. ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದ ರೈತರು ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ಮುಂಗಾರು ಮಳೆಗೆ ಅವಧಿಯಲ್ಲಿ ತಾಲೂಕಿನ 6490 ಹೆಕ್ಟೇರ್‌ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆ ಮಾಡಲಾಗಿತ್ತು. ಅತಿಯಾದ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಗೋವಿನಜೋಳ ಹಾಗೂ ಮೇವು ಹಾನಿಗೀಡಾಗಿದೆ. ಅದೇ ರೀತಿ ಈರುಳ್ಳಿ ಬೆಳೆ ಭೂಮಿಯಲ್ಲಿಯೇ ಕೊಳೆತುಹೋಗಿದೆ.

ಮಳೆ ಮುಂದುವರಿದರೆ ಹೆಚ್ಚಲಿದೆ ನಷ್ಟ: ಹಿಂಗಾರು ಮಳೆ ನಿರಂತರವಾಗಿ ಸುರಿದ ಪರಿಣಾಮ ಸದ್ಯ ತಾಲೂಕಿನಾದ್ಯಂತ ಗೋವಿನಜೋಳ ಹಾಗೂ ಈರುಳ್ಳಿ ಹಾನಿಯಾಗಿರುವುದು ಒಂದೆಡೆಯಾದರೆ, ತಿಂಗಳ ಹಿಂದೆ ಬಿತ್ತಿರುವ ಬಿಳಿ ಜೋಳಕ್ಕೂ ಆಪತ್ತು ಎದುರಾಗುವ ಭೀತಿ ಉಂಟಾಗಿದೆ. ತಾಲೂಕಿನಲ್ಲಿ 1878 ಹೆಕ್ಟೇರ್‌ ಪ್ರದೇಶದಲ್ಲಿ ಬಿಳಿಜೋಳ ಬಿತ್ತನೆ ಮಾಡಲಾಗಿದೆ. ಈಗಾಗಲೇ ಕೆಲ ಭಾಗದಲ್ಲಿ ನಿರಂತರ ಮಳೆಯಿಂದಾಗಿ ಬಿಳಿಜೋಳ ಹಾನಿಯಾಗಿದೆ.

ಇದೇ ರೀತಿ ಮಳೆಯ ಪ್ರಮಾಣ ಮುಂದುವರಿದರೆ ತೇವಾಂಶ ಹೆಚ್ಚಾಗಿ ಬಿಳಿಜೋಳ ಕೆಂಪುಬಣ್ಣಕ್ಕೆ ತಿರುಗಿ ತಿನ್ನಲೂ ಯೋಗ್ಯವಾಗುವುದಿಲ್ಲ ಎಂಬುದು ರೈತರ ಅಳಲು. ಒಟ್ಟಿನಲ್ಲಿ ಬೇಸಾಯ ನಂಬಿ ಬದುಕು ಕಟ್ಟಿಕೊಳ್ಳುವ ರೈತರ ಬಾಳಲ್ಲಿ ಈ ಬಾರಿಯ ವರ್ಷಧಾರೆ ಬಿರುಗಾಳಿ ಎಬ್ಬಿಸಿದೆ.

Advertisement

 

-ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next