Advertisement

Nagarahole ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗೆ ರೈತ ಬಲಿ

09:12 PM Oct 02, 2023 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದ ಮುದ್ದನಹಳ್ಳಿ ಅರಣ್ಯ ಪ್ರದೇಶದ ಬಫರ್ ಜೋನ್ ನಲ್ಲಿ ಜಾನುವಾರು ಮೇಯಿಸಲು ತೆರಳಿದ್ದ ರೈತರೊಬ್ಬರನ್ನು ಹುಲಿ ಬಲಿ ಪಡೆದಿರುವ ಘಟನೆ ಸೋಮವಾರ ನಡೆದಿದೆ. ನಾಗರಹೊಳೆ ಉದ್ಯಾನದಂಚಿನ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಉಡುವೆಪುರದ ಲೇ.ದಾಸೇಗೌಡರ ಪುತ್ರ ಗಣೇಶ್(58) ಮೃತ ರೈತ, ಇವರಿಗೆ ಪತ್ನಿ, ಮೂವರು ಗಂಡು ಮಕ್ಕಳಿದ್ದಾರೆ.

Advertisement

ಗಣೇಶ್ ಉಡುವೆಪುರದ ಪಕ್ಕದಲ್ಲೇ ಇರುವ ಮುದ್ದನಹಳ್ಳಿ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸಲು ಹೋಗಿದ್ದರು. ಸಂಜೆ ಜಾನುವಾರುಗಳು ಮನೆಗೆ ವಾಪಸ್ ಆದರೂ ಗಣೇಶ್ ಬಂದಿರಲಿಲ್ಲ. ಗಾಬರಿಗೊಂಡ ಮನೆಯವರು ತತ್ ಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅವರೊಟ್ಟಿಗೆ ಅರಣ್ಯದಲ್ಲಿ ಹುಡುಕಾಟ ನಡೆಸಿದ ವೇಳೆ ಮುದ್ದನಹಳ್ಳಿ ಅರಣ್ಯದ ಬಫರ್ ಏರಿಯಾದ ಪ್ರದೇಶದ ಕೆರೆ ಬಳಿ ಗಣೇಶ್‌ರ ಶವ ಪತ್ತೆಯಾಗಿದೆ.

ಮಾತಿನ ಚಕಮಕಿ
ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದರು. ಶವವನ್ನು ಊರಿಗೆ ಕೊಂಡೊಯ್ಯಲು ಅನುವಾಗುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಹಿರಿಯ ಅಧಿಕಾರಿಗಳು ಬರುವವರೆಗೆ ಶವವನ್ನು ಕೊಂಡೊಯ್ಯಲು ಬಿಡದಿದ್ದಾಗ ಗ್ರಾಮಸ್ಥರು ಹಾಗೂ ಅರಣ್ಯ ಸಿಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.

ವಿಷಯ ತಿಳಿದು ಸ್ಥಳಕ್ಕೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್‌ಚಿಕ್ಕನರಗುಂದ, ಡಿವೈಎಸ್‌ಪಿ ಮಹೇಶ್, ಇನ್ಸ್ಪೆಕ್ಟರ್ ಸಿ.ವಿ.ರವಿ, ಎ.ಸಿ.ಎಫ್.ದಯಾನಂದ್, ಆರ್.ಎಫ್.ಓ. ಸುಬ್ರಹ್ಮಣ್ಯ ಮತ್ತಿತರೆ ಅಧಿಕಾರಿಗಳು ಭೇಟಿ ಇತ್ತು ಪರಿಶೀಲಿಸಿದ್ದು, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.

ರೈತನ ಮೇಲೆ ದಾಳಿ ನಡೆಸಿದ್ದ ಹುಲಿ?
ಕಳೆದ ಸೆ.21 ರಂದು ಇದೇ ಅರಣ್ಯ ವ್ಯಾಪ್ತಿಯಲ್ಲಿ ಮುದ್ದನಹಳ್ಳಿಯ ರಮೇಶ್ ಎಂಬುವವರ ಮೇಲೆ ಹುಲಿ ದಾಳಿ ನಡೆಸಿ ತೀವ್ರಗಾಯಗೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆಯೇ ಮತ್ತೆ ರೈತನ ಮೇಲೆ ದಾಳಿ ನಡೆಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದೇ ಹುಲಿ ಇರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

ಹಿಂದೆ ಆದಿವಾಸಿ ಬಲಿ
ಇದೇ ಅರಣ್ಯ ಪ್ರದೇಶದಲ್ಲಿ ಮೂರು ವರ್ಷದ ಹಿಂದೆ ಅಯ್ಯನ ಕೆರೆ ಹಾಡಿಯ ಆದಿವಾಸಿ ಗಣೇಶ್ ಎಂಬಾತನನ್ನು ಬಹಿರ್ದೆಸೆಗೆ ತೆರಳಿದ್ದ ವೇಳೆ ಕೊಂದು ತಿಂದು ಹಾಕಿ ರುಂಡ ಪತ್ತೆಯಾಗಿದ್ದನ್ನು ಸ್ಮರಿಸಬಹುದು.

ಕಾಡಂಚಿನ ಜನರ ನಿರ್ಲಕ್ಷ್ಯ, ಬೇಸರ
ಹತ್ತು ದಿನಗಳ ಹಿಂದೆ ರಮೇಶ್ ಮೇಲೆ ಹುಲಿ ದಾಳಿ ನಡೆಸಿದ ನಂತರ ಆ ಭಾಗದಲ್ಲಿ ರೈತರು ಅರಣ್ಯ ಪ್ರವೇಶಿಸದಂತೆ, ಜಾನುವಾರುಗಳನ್ನು ಬಿಡದಂತೆ ಸೂಚನೆ ನೀಡಿದ್ದರೂ ಕೇಳದ ರೈತರು ಅರಣ್ಯ ಪ್ರವೇಶಿಸುತ್ತಿರುವುದು ಇಲಾಖೆಗೆ ತಲೆಬೇನೆಯಾಗಿದೆ ಎಂದು ಡಿಸಿಎಫ್. ಹರ್ಷಕುಮಾರ್‌ ಚಿಕ್ಕನರಗುಂದ ಹೇಳಿದ್ದಾರೆ.

ಶಾಸಕ ಭೇಟಿ 
ವಿಷಯ ತಿಳಿದ ಶಾಸಕ ಜಿ.ಡಿ.ಹರೀಶ್ ಗೌಡ ಭೇಟಿ ನೀಡಿ ಕುಟುಂಬಕ್ಕೆ ವೈಯಕ್ತಿಕವಾಗಿ 50 ಸಾವಿರ ರೂ. ಡಿ ಸಾಂತ್ವನ ಹೇಳಿದರು. ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಡಿಸಿಎಫ್‌ರಿಗೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next